ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ, ಪರಿಜ್ಞಾನ ಪದವಿಪೂರ್ವ ಕಾಲೇಜು ಸೋಮೇಶ್ವರ ಇದರ ಸಹಯೋಗದಲ್ಲಿ ದಿನಾಂಕ 27 ಜೂನ್ 2026ರಂದು ಸೋಮೇಶ್ವರದ ಪರಿಜ್ಞಾನ ಕಾಲೇಜು ಸಭಾಂಗಣದಲ್ಲಿ ದಿ. ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾವೇರಿ ವಿವಿ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಮಾತನಾಡಿ “ಈ ನೆಲದಲ್ಲಿ ಓಡಾಡಿ ಪೋರ್ಚುಗೀಸ್ ವಿರುದ್ಧ ಹೋರಾಡಿದ ವೀರರಾಣಿ ಅಬ್ಬಕ್ಕ ಇವರ ಸಾಹಿತ್ಯಕ ಸಾಂಸ್ಕೃತಿಕ ಕಲೆಗಳನ್ನು ಕಟ್ಟಿದ ಅಮೃತ ಸೋಮೇಶ್ವರ ಇದೇ ಊರಿಗೆ ಹೆಸರು ತಂದವರು. ಅವರು ವರ್ತಮಾನದ ಹಿರಿಯ ಸಾಹಿತಿಯಾಗಿದ್ದರು. ಅಮೃತ ಸೋಮೇಶ್ವರ ಗುರುಗಳಾಗಿ 24 ವರ್ಷ ಬೋಧನೆ ಮಾಡಿ ಹಲವರಿಗೆ ಮಾರ್ಗದರ್ಶನ ನೀಡಿದವರು. ಅವರ ಸಾಹಿತ್ಯ ಓದಿ ಬೆಳೆದವರು ಇದ್ದಾರೆ. ಅವರ ಗರಡಿಯಲ್ಲಿ ಪಳಗಿ ಬೆಳೆದವರು ಇದ್ದಾರೆ. ಆದರ್ಶ ವ್ಯಕ್ತಿ ಆಗಿರುವ ಅವರ ಅನುಭವ ಮೇಲೆ ಕಟ್ಟಿದ ಸಾಹಿತ್ಯವನ್ನು ನಾವು ಓದಿದರೆ ನಮಗೆ ಬದುಕು ಕಟ್ಟಿಕೊಳ್ಳಲು ಸಾಧ್ಯ ಆಗುತ್ತದೆ. ಅವರ ಸಾಹಿತ್ಯ ನಮಗೆ ಮಾದರಿ” ಎಂದರು.

ಸಾರಸ್ವತ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ರವೀಂದ್ರ ಕಾಯ್ಕಿಣಿ ಮಾತನಾಡಿದರು. ಮಾಜಿ ಶಾಸಕ ಕೆ. ಜಯರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದಿ. ಅಮೃತ ಸೋಮೇಶ್ವರ ಹಾಗೂ ವೀರರಾಣಿ ಅಬ್ಬಕ್ಕಳ ಬಗ್ಗೆ ಭಾಷಣ ಮಾಡಿದ ನಾಲ್ವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ.ಆರ್. ಚಂದ್ರ, ವೀರರಾಣಿ ಅಬ್ಬಕ್ಕ ಉತ್ಸವ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷರಾದ ದೇವಕಿ ಆರ್. ಉಳ್ಳಾಲ, ಆಲಿಯಬ್ಬ, ಪರಿಜ್ಞಾನ ಪಿಯು ಕಾಲೇಜು ಪ್ರಾಂಶುಪಾಲ ವಿಕ್ರಮ್, ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್, ಜೀವನ್ ಸೋಮೇಶ್ವರ, ಪುರಸಭೆ ಕೌನ್ಸಿಲರ್ ಸೋನಾ ಸುಭಾಷಿಣಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿ ಮತ್ತು ಕಾವ್ಯ ಗಾಯನ ನಡೆಯಿತು. ಅಧ್ಯಕ್ಷ ದಿನಕರ್ ಉಳ್ಳಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

