ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವವು ‘ಶತಕಂಠ ಗಾಯನ’ವು ದಿನಾಂಕ 09-02-2024ರಂದು ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ನಡೆಯಿತು. ಆ ಪ್ರಯುಕ್ತ ನಡೆದ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು “ಶ್ರೀ ಪುರಂದರ ದಾಸರ ಒಂದೊಂದು ರಚನೆಯಲ್ಲೂ ದೈವಿಕತೆ ಮತ್ತು ದೇವರ ಸಾನ್ನಿಧ್ಯವಿದೆ. ಅವುಗಳನ್ನು ಬಹಳ ಭಕ್ತಿಯಿಂದ ಭಾವಪೂರ್ಣವಾಗಿ ರಚಿಸಿದ್ದಾರೆ. ಅವುಗಳು ಸುಲಲಿತ ಮತ್ತು ಭಾವಜನಕವಾಗಿದ್ದು, ಪ್ರಭಾವ ಬೀರುತ್ತವೆ. ನಿರಂತರ ಆಲಿಸುವಂತೆ ಮಾಡುವ ಶಕ್ತಿಯುಳ್ಳ ಶಾಸ್ತ್ರೀಯ ರಚನೆಗಳು ಪುರಂದರದಾಸರನ್ನು ಆದುದರಿಂದಲೇ ಅವರ ಹಾಡುಗಳು ಎಲ್ಲ ಕಾಲಕ್ಕೂ ಎಲ್ಲರ ಮೇಲೂ ಪ್ರಭಾವ ಬೀರುತ್ತದೆ” ಎಂದು ನುಡಿದರು.
ಶ್ರೀಮನ್ ಮಾಧವತೀರ್ಥ ಸಂಸ್ಥಾನದ ಕಿರಿಯ ಪಟ್ಟದ ಯತಿ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರು ಮಾತನಾಡಿ, ಭ – ಭಕ್ತಿ ಪೂರ್ವಕವಾಗಿ, ಜ – ಜನಾರ್ದನ ರೂಪಿಯಾದ ಕೃಷ್ಣನನ್ನು ಕೃಷ್ಣರೂಪಿ ಜನಾರ್ದನನ್ನು, ನೆ – ನಿರಂತರ ನೆನೆಯುವುದೇ ಭಜನೆ” ಎಂದರು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ವಿವಿಧ ವಿಭಾಗದ ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇಂದುಮತಿ ಶ್ರೀನಿವಾಸನ್ ರಚಿಸಿದ ಶ್ರೀಕೃಷ್ಣನ ಕಲಾಕೃತಿಯನ್ನು ಪುತ್ತಿಗೆ ಶ್ರೀಪಾದರಿಗೆ ಸಮರ್ಪಿಸಿದರು. ಶ್ರೀ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಪಾದರ ಭಕ್ತರಾದ ಯಜ್ಞಸುಬ್ರಹ್ಮಣ್ಯಂ ನ್ಯೂಜೆರ್ಸಿ, ವಿದ್ವಾಂಸ ಡಾ. ವೆಂಕಟನರಸಿಂಹ ಜೋಷಿ ಹುಬ್ಬಳ್ಳಿ ಉಪಸ್ಥಿತರಿದ್ದರು. ಡಾ. ಬಿ.ವಿ. ಗೋಪಾಲ ಆಚಾರ್ಯ ಸ್ವಾಗತಿಸಿ, ಶ್ರೀ ಮಠದ ರಮೇಶ್ ಭಟ್ ಕೆ. ಸಂಯೋಜಿಸಿ, ಮಹಿತೋಷ್ ಆಚಾರ್ಯ ವಂದಿಸಿದರು.
ವಿವಿಧ ವಿಭಾಗದ ಗಾಯನ ಸ್ಪರ್ಧೆಯ ಫಲಿತಾಂಶಗಳು
ಮಕ್ಕಳು ವಿಭಾಗ : ಪ್ರಥಮ – ಸುದೀಕ್ಷಾ ಆರ್ . ಸುರತ್ಕಲ್, ದ್ವಿತೀಯ – ಅಥರ್ವ ದೀಪರಾಜ್ ಹೆಗಡೆ ಅಂಬಲಪಾಡಿ, ತೃತೀಯ – ಅನುರಾಗ್ ನಾಯಕ್ ತ್ರಾಸಿ
ಮಹಿಳೆಯರು ವಿಭಾಗ : ಪ್ರಥಮ – ಅನ್ವಿತಾ ಜಿ. ಮೂರ್ತಿ ಉಡುಪಿ, ದ್ವಿತೀಯ – ವಾಗ್ದೇವಿ ಕೆದ್ಲಾಯ ಬ್ರಹ್ಮಾವರ, ತೃತೀಯ- ಭೂದೇವಿ ಕೋಟೇಶ್ವರ ಹಾಗೂ ಶಶಿಪ್ರಭಾ ಐತಾಳ ಕಾವೂರು
ಪುರುಷರ ವಿಭಾಗ : ಪ್ರಥಮ – ರವಿದಾಸ್ ಪೆರ್ಡೂರು, ದ್ವಿತೀಯ – ಡಾ. ಶ್ರೀಪತಿ ರಾವ್, ತೃತೀಯ – ಉಮೇಶ್ ಕಾಮತ್ ಗುಂಡಿಬೈಲು
ಸಮೂಹ ಭಜನೆ : ಪ್ರಥಮ – ಎಸ್.ಎಲ್.ವಿ.ಟಿ. ಮಹಿಳಾ ಭಜನ ಮಂಡಳಿ ಉಡುಪಿ, ದ್ವಿತೀಯ – ರಾಮಕ್ಷತ್ರಿಯ ಭಜನ ತಂಡ ಉಡುಪಿ, ತೃತೀಯ – ಮಾತೃ ಭಜನ ಮಂಡಳಿ ಕಡಿಯಾಳಿ.