ಮಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಹಾಗೂ ಮಾಂಡ್ ಸೊಭಾಣ್ ಇವರ ಜಂಟಿ ಸಹಯೋಗದಲ್ಲಿ ಕಲಾಂಗಣದಲ್ಲಿ ಸಿಮೆಂಟ್ ಶಿಲ್ಪಗಳನ್ನು ರಚಿಸುವ 15 ದಿನಗಳ ಶಿಬಿರವು ದಿನಾಂಕ 12 ಜೂನ್ 2026ರಂದು ಆರಂಭವಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ “ಕೈ ಕಸುಬು ನಶಿಸುತ್ತಿವೆ. ಕಲಾಶಾಲೆಗಳೂ ಕಡಿಮೆಯಾಗುತ್ತಿವೆ. ಕಲಾವಿದರಿಗೆ ಅಕಾಡೆಮಿ ಹಲವು ಅವಕಾಶಗಳನ್ನು ನೀಡುತ್ತಿದೆ. ಸಾಮಾನ್ಯ ಸಿಮೆಂಟ್, ಕಲ್ಲು, ಮರಳು ಅದ್ಭುತ ಕಲಾಕೃತಿಯಾಗುತ್ತದೆ. ಈ ಪ್ರಕ್ರಿಯೆಯನ್ನು ನೀವು ಕೂಡಾ ಆನಂದಿಸಿ. ಕಲೆಗೆ ಮಹತ್ವವಿರುವ ಈ ಕಲಾಂಗಣದ ಆಕರ್ಷಣೆಯನ್ನು ನಿಮ್ಮ ಕಲಾಕೃತಿಗಳು ಹೆಚ್ಚಿಸುವಂತಾಗಲಿ” ಎಂದು ಕಲಾವಿದರಿಗೆ ಶುಭ ಹಾರೈಸಿದರು.
ಸ್ವಾಗತಿಸಿ ಪ್ರಸ್ತಾವಿಸಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಇವರು “ಕೇವಲ ಕಟ್ಟಡವಾಗದೆ ಕಲೆಯನ್ನು ಸಂಭ್ರಮಿಸುವ ತಾಣವಾಗಬೇಕು ಎಂಬ ಆಶಯದೊಡನೆ ಜನ್ಮ ತಾಳಿದ ಕಲಾಂಗಣವು ಇಂದು ಕಲೆಯ ಆರಾಧನೆ ನಡೆಸುವ ಸ್ಥಳವಾಗಿ ಗುರುತಿಸಿಕೊಂಡಿದೆ. ಈಗ ಈ ಸ್ಥಳದ ಅಂದ ಹೆಚ್ಚಿಸುವ ಕೈಂಕರ್ಯಕ್ಕೆ ಶಿಲ್ಪಕಲಾ ಅಕಾಡೆಮಿ ಮುಂದೆ ಬಂದಿದೆ. ಈ ಕಲಾ ಸೇವೆಯಲ್ಲಿ ಕೈ ಜೋಡಿಸಿದ ಎಲ್ಲಾ ಕಲಾವಿದರಿಗೆ ಅಭಿನಂದನೆಗಳು” ಎಂದರು.

ವೇದಿಕೆಯಲ್ಲಿ ಶಿಬಿರದ ನಿರ್ದೇಶಕ ಕೆ. ನಾರಾಯಣ ರಾವ್, ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ರೊನಿ ಕ್ರಾಸ್ತಾ ಮತ್ತು ನವೀನ್ ಲೋಬೊ ಉಪಸ್ಥಿತರಿದ್ದರು. ಮೊದಲಿಗೆ ಕಲಾವಿದ ಬಾಬುರಾವ್ ನಡೋಣಿ ಕೊಳಲಿನಲ್ಲಿ ವಿಶ್ವಮಾನವ ಗೀತೆಯನ್ನು ನುಡಿಸಿದರು. ಶಿಲ್ಪಕಲಾ ಅಕಾಡೆಮಿ ಸದಸ್ಯ ಮತ್ತು ಶಿಬಿರದ ಸಂಚಾಲಕ ಕುಮಾರ್ ವೈ ವಂದಿಸಿದರು. ವಿತೊರಿ ಕಾರ್ಕಳ ನಿರೂಪಿಸಿದರು. ಈ ಶಿಬಿರದಲ್ಲಿ ಹಿರಿಯ ಶಿಲ್ಪಿಗಳಾಗಿ ಬಾಬುರಾವ್ ವಿ. ನಡೋಣಿ ಬೆಳಗಾವಿ, ಕುಮಾರ್ ಬಾಬು ಘಸ್ತಿ ಬೆಳಗಾವಿ, ವೇಣುಗೋಪಾಲ್ ವಿ. ದಾವಣಗೆರೆ, ವಿಜಯ್ ಕೊಣ್ಣೂರು ಬಾಗಲಕೋಟೆ, ಹನುಮಂತ ಬಾಳಪ್ಪ ಗದ್ಧಿ ಗದಗ, ಭೀಮಸಿ ಹಣಮವ್ವ ಬಾಗೇವಾಡಿ ವಿಜಯಪುರ, ಆನಂದ ಕುಮಾರ್ ದಾವಣಗೆರೆ, ಬಿ.ಎಸ್. ಕುಮಾರಸ್ವಾಮಿ ಚಿತ್ರದುರ್ಗ, ಮಂಜುನಾಥ ಡಿ. ಬಾರ್ಕಿ ಹಾವೇರಿ, ನಿಂಗರಾಜ್ ಎಂ. ವನ್ನೂರ್ ಬೆಳಗಾವಿ, ಸಿ.ವಿ. ರಾಮಕೃಷ್ಣ ಶಿವಮೊಗ್ಗ, ಪರಶುರಾಮ್ ಎಚ್. ಶಿವಮೊಗ್ಗ, ಮರಿಯಪ್ಪ ಡಿ. ಹೊನ್ನಮ್ಮನವರ್ ಹಾವೇರಿ ಹಾಗೂ ಸಹಾಯಕ ಶಿಲ್ಪಿಗಳಾಗಿ ಬಸಪ್ಪ ಹನುಮಂತ ಸುನ್ನಾಳ ಬೆಳಗಾವಿ, ಸಂಜೀವ ರೆಡ್ಡಿ ಸೋರಡೆರ ಧಾರವಾಡ, ತೀರ್ಥಚಾರ್ ಆರ್.ಕೆ. ಚಿತ್ರದುರ್ಗ, ದೇವು ಬಿ. ಶಿವಮೊಗ್ಗ, ಮನೋಹರ ಜಿ. ದಾವಣಗೆರೆ, ಶೃಂಗಾರ ಎಂ. ಬಾರ್ಕಿ ಹಾವೇರಿ, ನವೀನ್ ಕುಮಾರ್ ವಡ್ಡರ್ ಬಾಗಲಕೋಟೆ, ವಿನಯ್ ಕುಂಬಾರ್ ಜಿ. ಚಿತ್ರದುರ್ಗ, ಅಕ್ಷತಾ ಅನಿ ದಾವಣಗೆರೆ, ಪ್ರಕೃತಿ ಎಚ್.ಪಿ. ಶಿವಮೊಗ್ಗ, ಕಾರ್ತಿಕ್ ಮತ್ತು ಸುವಿತ್ ಎಸ್. ಪತ್ತಾರ್ ಭಾಗವಹಿಸಿದ್ದು ಕೊಂಕಣಿಯ ವಿವಿಧ ಜನಸಮುದಾಯದ ಕಲಾಶಿಲ್ಪಗಳನ್ನು ಸಿಮೆಂಟ್ ಮಾಧ್ಯಮದಲ್ಲಿ ರಚಿಸಲಿರುವರು.
