ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್ ಇವರ ವತಿಯಿಂದ ದಿನಾಂಕ 20 ಮಾರ್ಚ್ 2026ರಂದು ಮಂಗಳೂರಿನ ಉರ್ವಸ್ಟೋರ್ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ 3ನೇ ವಿದ್ಯಾರ್ಥಿ ತುಳು ಸಮ್ಮೇಳನ ನಡೆಯಲಿದೆ. ಬೆಳಗ್ಗೆ 10-00 ಗಂಟೆಗೆ ದೇರಳಕಟ್ಟೆ ನಿಟ್ಟೆ ವಿದ್ಯಾ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿ ಪ್ರೀತಮ್ ನಾಯಕ್ ಸಮ್ಮೇಳನ ಉದ್ಘಾಟಿಸಲಿದ್ದು, ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜು ಪದವಿ ವಿದ್ಯಾರ್ಥಿನಿ ಅಭಿಜ್ಞಾ ಅಧ್ಯಕ್ಷತೆಯನ್ನು ವಹಿಸಲಿರುವರು. ಮಾಜಿ ಮುಖ್ಯಮಂತ್ರಿ, ಸಾಹಿತಿ ಡಾ. ಎಂ. ವೀರಪ್ಪ ಮೊಯ್ಲಿ ಸಮ್ಮೇಳನದ ದಿಕ್ಕೂಚಿ ಭಾಷಣ ಮಾಡುವರು. ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಶುಭಾಶಂಸನೆಗೈಯ್ಯಲಿರುವರು.
ಬಳಿಕ ನಡೆಯುವ ಪ್ರಥಮ ಗೋಷ್ಠಿಯಲ್ಲಿ ‘ಕಾಲೇಜು ಪರಿಸರ ನೈತಿಕ ಮೌಲ್ಯ’ ಎಂಬ ವಿಷಯದ ಬಗ್ಗೆ ನಿಡಗೋಸಿಯ ಜಗದ್ಗುರು ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ಮಠಾಧಿಪತಿ, ಪರಿಸರ ತಜ್ಞ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಲಿರುವರು. 12-10 ಗಂಟೆಗೆ ಎರಡನೇ ಗೋಷ್ಠಿಯಲ್ಲಿ ಆರು ಮಂದಿ ವಿದ್ಯಾರ್ಥಿಗಳು ‘ತುಳುನಾಡಿನ ಸೌಹಾರ್ದ ಪರಂಪರೆ ಮತ್ತು ಈ ಪರಂಪರೆಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಎಂಬ ವಿಷಯದ ಬಗ್ಗೆ ಸಮ್ಮೇಳನಾಧ್ಯಕ್ಷರು ಹಾಗೂ ಉದ್ಘಾಟಕರ ಜತೆ ಸಂವಾದ ನಡೆಸಲಿದ್ದಾರೆ. ‘ತುಳು ಕಲಾ ಐಸಿರಿ’ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರಿಂದ ಜಾನಪದ ನೃತ್ಯ, ಮಂಗಳೂರಿನ ಕೆನರಾ ಕಾಲೇಜು, ಬ್ರಹ್ಮಾವರ ಎಸ್. ಎಂ. ಎಸ್. ಕಾಲೇಜು ಮತ್ತು ಮಂಗಳೂರಿನ ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿಗಳಿಂದ ತುಳು ಗಾಯನ ಹಾಗೂ ಜಾನಪದ ನೃತ್ಯ ನಡೆಯಲಿದೆ. ಮಧ್ಯಾಹ್ನ 3-00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ದಿನಾಂಕ 10 ಮಾರ್ಚ್ 2026ರಂದು ವಿದ್ಯಾರ್ಥಿಗಳಿಗಾಗಿ ನಡೆಸಿದ ಕಲಾ ಸಿರಿ ಸ್ಪರ್ಧೆಯ ಬಹುಮಾನ ವಿತರಣಾ ನಡೆಯಲಿದೆ.

