ಉಡುಪಿ : ಶ್ರೀ ಅಭಿರಾಮ ಧಾಮದಲ್ಲಿ ದಿನಾಂಕ 12 ಏಪ್ರಿಲ್ 2026ರಂದು ಉದ್ಘಾಟನೆಗೊಂಡ ವಸಂತ ಶಿಬಿರ-2026ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಹೆಚ್ಚುವರಿ ಜನರಲ್ ಮ್ಯಾನೇಜರ್ ಶ್ರೀ ರಮೇಶ್ ವೈದ್ಯರವರು “ಪ್ರಸಕ್ತ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸಕಲ ಜ್ಞಾನಗಳೂ ಅವರವರ ಶಾಲಾ-ಕಾಲೇಜುಗಳಲ್ಲೇ ಲಭ್ಯವಾಗುತ್ತವೆ ಎಂಬುದು ನಿಜಕ್ಕೂ ಕಷ್ಟಸಾಧ್ಯ ! ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಅಕ್ಯಾಡೆಮಿಕ್ ವರ್ಷದ ಒಂದು ಅವಧಿ ಸಂಪನ್ನಗೊಂಡ ಬಳಿಕ ಅಣಬೆಗಳಂತೆ ಅಲ್ಲಲ್ಲಿ ತಲೆಯೆತ್ತುವ ಬೇಸಿಗೆ ಶಿಬಿರಗಳು ನಮ್ಮ ಮಂದಿಯನ್ನು ಮರುಳು ಮಾಡಿ ಹಣ ಮಾಡುವಲ್ಲಿ ಮೇಲುಗೈ ಸಾಧಿಸಿವೆ. ಇಷ್ಟಾದರೂ, ನಗರದ ಶ್ರೀ ಅಭಿರಾಮ ಧಾಮದಲ್ಲಿ ಈಗ್ಗೆ ನಾಲ್ಕಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಉಚಿತ ವಸಂತ ಶಿಬಿರಗಳು ಇಲ್ಲಿನ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧಿಸುವಲ್ಲಿ ಪ್ರಧಾನ ಭೂಮಿಕೆ ತಾಳುತ್ತಿದೆ. ಸನಾತನ ಭಾರತದ ಮೂಲ ತತ್ವಗಳ ಕುರಿತಾಗಿ ಎಳೆಯ ವಯಸ್ಸಿನಲ್ಲೇ ನಮ್ಮ ಸಮಾಜದ ಮಕ್ಕಳಿಗೆ ಅರಿವು ಮೂಡಿಸುತ್ತಿರುವುದು ಮಹತ್ತರ ಸಾಧನೆಯಾಗಿದೆ. ಸುಮಾರು 60 ಮಕ್ಕಳ ಭಾಗವಹಿಸುವಿಕೆಯಿಂದ ತುಂಬಿ ತುಳುಕುತ್ತಿರುವ ಅಭಿರಾಮ ಧಾಮ ಸಭಾಂಗಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ಚಿಣ್ಣರ ಕಲರವ ವಸಂತ ಮಾಸದ ಕೋಗಿಲೆಗಳಿಂಚರದಷ್ಟೇ ಮನೋಹರವೆಂದು ಕವಿ-ಗಮಕ ಕಲೆಯ ವ್ಯಾಖ್ಯಾನಕಾರ-ಉಪನ್ಯಾಸಕ ಪಡುಬಿದ್ರಿಯ ಡಾ. ರಾಘವೇಂದ್ರ ರಾವ್ ಬಣ್ಣಿಸಿದರು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಇವರು ಇಂಥಾ ಶಿಬಿರಗಳು ಬೇಸಿಗೆಯಲ್ಲಿ ನಿರಂತರವಾಗಿ ನಡೆದು ಮಕ್ಕಳ ರಜಾ ದಿನಗಳ ವ್ಯರ್ಥ ಕಾಲಹರಣ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿವೆ” ಎಂದು ಅಭಿಪ್ರಾಯಪಟ್ಟರು.

ಏಪ್ರಿಲ್ 28ರ ತನಕ ಸತತ ನಡೆಯುವ ಈ ವಸಂತ ಶಿಬಿರ ತನ್ನ ಬತ್ತಳಿಕೆಯಲ್ಲಿ ದೇಶಭಕ್ತಿ- ದೇವಭಕ್ತಿ- ದೇಹಭಕ್ತಿಗಳ ಬಗ್ಗೆ ವಿಷದವಾಗಿ ಮಕ್ಕಳಿಗೆ ಜ್ಞಾನ ಮೂಡಿಸುವ ಸುಯತ್ನದಲ್ಲಿದೆಯೆಂದು ಶ್ರೀಅಭಿರಾಮ ಧಾಮದ ಸಂಸ್ಥಾಪಕ ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಿತ್ತರಿಸಿದರು. ಹಾಗಾಗಿ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರಿಂದ ಭಾರತ-ದರ್ಶನ, ವಿದುಷಿ ಸುಷ್ಮಾ ಸುದರ್ಶನರವರಿಂದ ದೇವರನಾಮಗಳು, ನಿತ್ಯವೂ ಯೋಗಾಸನ-ಸೂರ್ಯ ನಮಸ್ಕಾರ-ಗಣಪತಿ ನಮಸ್ಕಾರ, ದೇವ ಭಾಷೆ ಸಂಸ್ಕೃತದಲ್ಲಿ ಸಂಭಾಷಣೆ, ಕಸದಿಂದ ರಸ, ಮಕ್ಕಳ ತಜ್ಞರಿಂದ ಆರೋಗ್ಯ ಸಲಹೆಗಳು, ರಂಗೋಲಿ ಕಲೆ, ಪುಷ್ಪಾಲಂಕಾರ, ಇನ್ನೂ ಹಲವಾರು ವಿಶಿಷ್ಟ ಅಪ್ಪಟ ದೇಶೀ ಕಲೆಗಳ ಪರಿಚಯ ನೀಡಿ ಶಿಬಿರಾರ್ಥಿಗಳನ್ನು ಬಹುಮುಖ ಪ್ರತಿಭೆಯಾಗಿಸುವಲ್ಲಿ ದಾಪುಗಾಲು ಹಾಕಲಿದೆ ಅಭಿರಾಮಧಾಮದಲ್ಲಿನ ವಸಂತ ಶಿಬಿರ ಎಂಬ ಸದಾಶಯ ವ್ಯಕ್ತಪಡಿಸಿದರು. ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವಾನ್ ರಾಮಕೃಷ್ಣ ಶಾಸ್ತ್ರಿ, ವಿದುಷಿ ಉಮಾಶಂಕರಿ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಡಾ. ಕೌಶಿಕ್ ಉರಾಳ, ಡಾ. ಸಂದೀಪ್, ಶ್ರೀಮತಿ ಅನುಪಮಾ ವೇಣುಗೋಪಾಲ್ ಮುಂತಾದವರು ಈ ಶಿಬಿರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
