ಮಂಗಳೂರು : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ದಿನಾಂಕ 08 ಮಾರ್ಚ್ 2026ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ್ ನಲ್ಲಿ ಸರಿಸುಮಾರು ಇನ್ನೂರಕ್ಕೂ ಮಿಕ್ಕಿ ಮಹಿಳೆಯರಿಂದ ‘ಸುರ್ ಸಂಭ್ರಮ್- 2026’ ಎಂಬ ಸಂಗೀತ ಕಾರ್ಯಕ್ರಮವು ಜರಗಲಿರುವುದು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2025-26ನೇ ಸಾಲಿಗೆ ಆಯ್ದ ಕೊಂಕಣಿ ಕವಿತೆಗಳನ್ನು ಹಾಗೂ ಕಥೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಖ್ಯಾತ ಭಾಷಾಂತರಕಾರರಾದ ಸ್ಟೀವನ್ ಕ್ವಾಡ್ರಸ್ ಪೆರ್ಮೆದೆಯವರನ್ನು ಈ ಯೋಜನೆಯ ಪ್ರಧಾನ ಸಂಪಾದಕರನ್ನಾಗಿಸಿ ವಿಸ್ತ್ರತ ಸಂಪಾದಕೀಯ ಮಂಡಳಿಯನ್ನು ರೂಪಿಸಲಾಗಿತ್ತು. ಭಾಷಾಂತರಗೊಂಡಿರುವ ಕವಿತೆಗಳ ಸಂಕಲನ ‘ಕಾವ್ಯಪಲ್ಲವಿ’ ಹಾಗೂ ಕಥೆಗಳ ಸಂಪುಟ ‘ಕಥಾಪಲ್ಲವಿ’ ಕೃತಿಗಳು ಅದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿರುವುದು.
ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಐವನ್ ಡಿ’ಸೋಜಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಖ್ಯಾತ ಚಿಂತಕ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಶಾಲೆಟ್ ಲವೀನಾ ಪಿಂಟೊ, ಬೆಥನಿ ಧರ್ಮ ಸಂಘದ ಮಹಾ ಮುಖ್ಯಸ್ಥರಾದ ಭಗಿನಿ ರೋಜ್ ಸೆಲಿನ್ರವರು ಅತಿಥಿಗಳಾಗಿ ಭಾಗವಹಿಸಲಿರುವರು.
