ಬಂಟ್ವಾಳ : ತೆಂಕುತಿಟ್ಟು ಯಕ್ಷಗಾನ ಶೈಲಿಯ ಅಪ್ರತಿಮ ಕಲಾತಪಸ್ವಿ, ದಶಕಗಳ ಕಾಲ ರಂಗಸ್ಥಳವನ್ನು ಆಳಿದ ಹಿರಿಯ ವಿದ್ವಾಂಸ ಶ್ರೀ ಸೂರಿಕುಮೇರು ಕೆ. ಗೋವಿಂದ ಭಟ್ ಇವರು ದಿನಾಂಕ 20 ಮಾರ್ಚ್ 2026ರಂದು ನಿಧನ ಹೊಂದಿದ್ದಾರೆ. ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ, ತೆಂಕುತಿಟ್ಟಿನ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (85) ಅವರು ಗೆಜ್ಜೆ ಕಳಚಿ ಕಣ್ಮರೆಯಾಗಿದ್ದಾರೆ. ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಹಾಗೂ ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು ಸಿದ್ಧಹಸ್ತರು.
1940, ಮಾರ್ಚ್ 22ರಂದು ಬಂಟ್ವಾಳದ ಕೋಡಪದವಿನಲ್ಲಿ ಜನಿಸಿ, 1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ, ಯಕ್ಷಗಾನದ ಇತಿಹಾಸದಲ್ಲೇ ಒಂದು ದಾಖಲೆಯಾಗಿ ಉಳಿಯುವಂಥದ್ದು. ಅವರೊಬ್ಬ ‘ಸವ್ಯಸಾಚಿ’. ತೆಂಕು-ಬಡಗು ಎಂಬ ಬೇಧವಿಲ್ಲದೆ, ಸ್ತ್ರೀ ವೇಷದಿಂದ ಹಿಡಿದು ರಕ್ಕಸ ವೇಷದವರೆಗೆ ಯಾವುದನ್ನಾದರೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಕಲೆಗಾರ ಕೇವಲ ವೇಷಧಾರಿಯಷ್ಟೇ ಅಲ್ಲ, ಅನಿವಾರ್ಯವಾದರೆ ಹಿಮ್ಮೇಳದಲ್ಲಿ ಬೆಂಡೆ-ಮದ್ದಳೆಯನ್ನೂ ನುಡಿಸಬಲ್ಲ, ಭಾಗವತಿಕೆಯನ್ನೂ ಮಾಡಬಲ್ಲ ಸರ್ವಾಂಗೀಣ ಪ್ರತಿಭೆ ಅವರದ್ದು, ಅಕ್ಷಯಾಂಬರ ವಿಲಾಸದ ಕೌರವನಾಗಿ ಅವರು ರಂಗಸ್ಥಳದಲ್ಲಿ ಅಬ್ಬರಿಸುತ್ತಿದ್ದರೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಿದ್ದರು.

ಪಂಚವಟಿಯ ಮಾಯಾ ಶೂರ್ಪನಖಿಯ ಸೊಬಗು ಅಥವಾ ಜಾಂಬವಂತನ ಗಾಂಭೀರ್ಯ-ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಮಾಂತ್ರಿಕತೆ ಅವರಿಗೆ ಸಿದ್ಧಿಸಿತ್ತು. ಗೋವಿಂದ ಭಟ್ಟರು ಕೇವಲ ಪ್ರದರ್ಶನಕಾರರಾಗಿ ಉಳಿಯಲಿಲ್ಲ. ಅವರೊಬ್ಬ ಸಂಶೋಧಕರೂ ಹೌದು. ತೆಂಕುತಿಟ್ಟಿನ ನೃತ್ಯ ವೈವಿಧ್ಯಕ್ಕೆ ಹೊಸ ಆಯಾಮ ನೀಡಲು ಅವರು ಪಟ್ಟ ಶ್ರಮ ಅನನ್ಯ, ಏಕತಾಳವೊಂದಕ್ಕೇ ದಾಖಲೆಯ 24 ವಿಧದ ಕುಣಿತಗಳನ್ನು ಅವಿಷ್ಕರಿಸಿ, ಅಪ್ರತಿಮ ವಿದ್ವಾಂಸ ಶಿವರಾಮ ಕಾರಂತರಿಂದಲೇ ‘ಶಹಬ್ಬಾಸ್’ ಎನಿಸಿಕೊಂಡ ಧೀಮಂತ ಇವರು.
ಧರ್ಮಸ್ಥಳ ಯಕ್ಷಗಾನ ಕೇಂದ್ರದ ಗುರುಗಳಾಗಿ ನೂರಾರು ಶಿಷ್ಯರನ್ನು ರೂಪಿಸಿದ ಅವರು, ಏಳು ಪ್ರಸಂಗಗಳನ್ನು ರಚಿಸಿದ ಲೇಖಕರೂ ಹೌದು, ಜಪಾನ್‌ನಿಂದ ದುಬೈವರೆಗೆ ಯಕ್ಷಗಾನದ ಕಂಪನ್ನು ಪಸರಿಸಿ, ರಾಷ್ಟ್ರೀಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯೋಜನೆಗಳ ಗೋವಿಂದ ಭಟ್ಟರು ರಾಷ್ಟ್ರಪತಿಗಳ ಸಮ್ಮುಖದಲ್ಲೇ ಕಲೆಯ ಅಗ್ಗಳಿಕೆಯನ್ನು ಸಾರಿದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು.
