ಉಪ್ಪಿನಕುದ್ರು : “ಎಲ್ಲಿ ಸಂಕಲ್ಪದ ಶುದ್ಧಿ ಇರುತ್ತದೋ ಅಲ್ಲಿ ಸಂಕಲ್ಪದ ಸಿದ್ಧಿಯಾಗುತ್ತದೆ” ಅನ್ನುವುದು ನಾಣ್ಣುಡಿ. ಈ ನಿಟ್ಟಿನಲ್ಲಿ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿ ಒಂದು ಉತ್ತಮ ಉದಾಹರಣೆಯಾಗಿ ನಮ್ಮ ಮುಂದಿದೆ. 350 ವರ್ಷದ ಸುಧೀರ್ಘ ಇತಿಹಾಸ 6ನೇ ತಲಾಂತರದಲ್ಲಿ ನಿರಂತರ ಪ್ರವಹಿಸುತ್ತಿರುವ ಈ ಕನ್ನಡದ ಮಣ್ಣಿನ ಜಾನಪದ ಕಲೆ ಸರಕಾರದ ಯಾವುದೇ ಧನ ಸಹಾಯ ಪಡೆಯದೇ ತನ್ನದೇ ಆದ ಸ್ವಂತ ಹೋರಾಟದ ಹಾದಿಯಲ್ಲಿ ಅನೇಕ ಸಾಧನೆಗಳನ್ನು ಈಗಾಗಲೇ ಮಾಡಿ ತೋರಿಸಿರುವುದಂತೂ ಸುಳ್ಳಲ್ಲಾ.
ಅನೇಕ ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಪ್ರಶಸ್ತಿ, ಸಂಮಾನ, ಹತ್ತು ಹಲವು ಬಾರಿ ವಿದೇಶ ಪ್ರವಾಸ ದಾಖಲೆಗೈದ ಈ ಕಲೆ ಕನ್ನಡದ ಜಾನಪದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ, ಬೆಳೆಸಿ, ಬೆಳಗಿಸುವಲ್ಲಿ ನಾಡಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ಈ ವಿಶಿಷ್ಟ ಸಂಸ್ಕೃತಿಯನ್ನು ಭವಿಷ್ಯತ್ತಿನ ತಲೆಮಾರಿಗೆ ದಾಟಿಸುವಲ್ಲಿ ಸಶಕ್ತ ಕಲಾವಿದನನ್ನು ರೂಪಿಸಲು, ಸಂಪ್ರದಾಯವನ್ನು ಯುವ ಜನತೆಗೆ ಮುಟ್ಟಿಸಲು ಗೊಂಬೆಯಾಟ ಅಕಾಡೆಮಿ ಧೃಢ ಸಂಕಲ್ಪ ಮಾಡಿದೆ.
ಈ ನಿಟ್ಟಿನಲ್ಲಿ ‘ಸೂತ್ರ ಸಂಕಲ್ಪ’ದಡಿಯಲ್ಲಿ ಭವಿಷ್ಯತ್ತಿನ ಸೂತ್ರಧಾರರನ್ನು ರೂಪಿಸುವ ಕೈಂಕರ್ಯಕ್ಕೆ ನಾಂದಿ ಹೇಳಿದೆ. ಈ ಮೂಲಕ ನಾಡಿನ ಶಾಲಾ-ಕಾಲೇಜು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಮಾಜದ ಎಲ್ಲಾ ವರ್ಗದ ಆಸಕ್ತರು, ಎಲ್ಲಾ ವಯೋಮಾನದವರಿಗೆ ತರಬೇತಿ ನೀಡಿ ಹೊಸ ಸಾಧ್ಯತೆ, ಪ್ರಯೋಗ ಹಾಗೂ ಹಿರಿಯರಿಂದ ಬಂದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ, ಬೆಳೆಸಿ, ಬೆಳಗಿಸಲು ತುದಿಗಾಲಿನಲ್ಲಿ ನಿಂತಿದೆ.
ಆಸಕ್ತರು, ವಿದ್ಯಾರ್ಥಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಈ ಕೆಳಗಿನ ಮಾಹಿತಿ ಗಮನದಲ್ಲಿಟ್ಟುಕೊಂಡು ‘ಸೂತ್ರ ಸಂಕಲ್ಪ’ದಲ್ಲಿ ಹೆಸರು ನೊಂದಾಯಿಸಕೊಳ್ಳಬಹುದಾಗಿದೆ.
1. ‘ಸೂತ್ರ ಸಂಕಲ್ಪ’ದಡಿ ಎಲ್ಲಾ ವಯಸ್ಸಿನ ಅದರಲ್ಲೂ 7ನೇ ತರಗತಿ ಹಾಗೂ ಮೇಲ್ಪಟ್ಟು ಕಲಿಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಿಕೊಳ್ಳಬಹುದು.
2. ಯಕ್ಷಗಾನ ತಾಳ, ಲಯ, ಕುಣಿತ ತಿಳಿದಿದ್ದರೆ ಪ್ರಾಶಸ್ತ್ಯ ಹೆಚ್ಚು. ಉಳಿದವರಿಗೂ ಕೂಡ ಅವರ ಆಸಕ್ತಿ ಮೇರೆಗೆ ಕಲಿಸಿಕೊಡಲಾಗುವುದು.
3. ಈ ನಿಟ್ಟಿನಲ್ಲಿ ಟ್ರಸ್ಟ್ ಗೆ ಯಾವುದೇ ಹಣದ ಭದ್ರತೆ ಇಲ್ಲದಿರುವುದರಿಂದ ಎಲ್ಲಾ ಕೆಲಸ ಸೇವಾಕಾರ್ಯಗಳ ಮೂಲಕ ನಡೆಯುತ್ತಿರುವುದರಿಂದ ಯಾರಿಗೂ ಕೂಡ ಶಿಷ್ಯವೇತನ ಇತ್ಯಾದಿ ಹಣದ ಯಾವುದೇ ವ್ಯವಹಾರಕ್ಕೆ ಆಸ್ಪದ ಇರುವುದಿಲ್ಲ. ಎಲ್ಲವೂ ಕೂಡ ಉಚಿತವಾಗಿರುತ್ತದೆ.
4. ಕಲಿಯುವವರು ಶಿಸ್ತಿನಿಂದ ಕಲಿತು ಪ್ರದರ್ಶನದ ಹಂತದ ವರೆಗೆ ಅಭ್ಯಾಸ ಮಾಡಿ ತೋರಿಸುವುದಿದ್ದರೆ ಮಾತ್ರ ಹೆಸರು ನೊಂದಾಯಿಸಬೇಕು.
5. ತರಬೇತಿಯಲ್ಲಿ ಕೇವಲ ಗೊಂಬೆ ಕುಣಿಸುವುದು ಮಾತ್ರ ಅಲ್ಲಾ ಅದರೊಂದಿಗೆ ಸಂಬಂಧಪಟ್ಟ ಅರ್ಥಗಾರಿಕೆ, ಗೊಂಬೆಯಾಟಕ್ಕೆ ಸಂಬಂಧಪಟ್ಟ ಇನ್ನಿತರ ವಿಷಯಗಳನ್ನು ಕಲಿಸಿಕೊಡಲಾಗುವುದು.
6. ನಿಬಂಧನೆಗಳನ್ನು ಒಪ್ಪಿದ ಬಗ್ಗೆ ಹೆಸರನ್ನು ನೊಂದಾಯಿಸಿಕೊಳ್ಳುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅವರ ಹತ್ತಿರದ ಸಂಬಂಧಿಗಳು ಅಥವಾ ಹೆತ್ತವರ ಒಪ್ಪಿಗೆ ಪತ್ರ ಅವಶ್ಯವಾಗಿ ನೀಡಬೇಕಾಗುತ್ತದೆ.
7. ‘ಸೂತ್ರ ಸಂಕಲ್ಪ’ದ ತರಬೇತಿ ಉಪ್ಪಿನಕುದ್ರಿನ ಗೊಂಬೆ ಮನೆಯಲ್ಲಿ ನಡೆಯಲಿದ್ದು ಅಲ್ಲಿಗೆ ಬಂದು ಹೋಗುವ ಜವಾಬ್ದಾರಿ ತಮ್ಮದಾಗಿರುತ್ತದೆ.
8. ಹೆಸರು ನೊಂದಾಯಿಸಲು ಕೊನೆಯ ದಿನಾಂಕ 30 ಜೂನ್ 2026 ಆಗಿರುತ್ತದೆ.
ಈ ನಿಬಂಧನೆಗೆ ಒಪ್ಪಿರುವ ವಿದ್ಯಾರ್ಥಿ/ವಿದ್ಯಾಥಿನಿಯರು, ಆಸಕ್ತರು ಕೂಡಲೇ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು ಹೆಸರು ನೊಂದಾಯಿಸಿಕೊಳ್ಳಬಹುದು. 9448437848 / 7019599689
