ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸುವ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನವನ್ನು ದಿನಾಂಕ 26 ಮತ್ತು 27 ಜೂನ್ 2026ರಂದು ಸಂಜೆ ಗಂಟೆ 5-00ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮಹಮ್ಮದ್ ಕುಂಞು ಇವರ ಕಾದಂಬರಿ ಆಧಾರಿತ ನಾಟಕಕ್ಕೆ ನಟರಾಜ್ ಹೊನ್ನವಳ್ಳಿ ರಂಗಪಠ್ಯ ವಿನ್ಯಾಸ ಮತ್ತು ನಿರ್ದೇಶನ, ಮಂಜುನಾಥ್ ಗೋಮಾರದಹಳ್ಳಿ ನಾಟಕ ರೂಪಾಂತರ ಮತ್ತು ಸಲ್ಮಾ ದಂಡಿನ್ ಸಹ ನಿರ್ದೇಶನ, ರಾಘವ ಕಮ್ಮಾರ ಇವರು ಸಂಗೀತ, ಮಧುಸೂದನ್, ರಮೇಶ್ ಎಸ್. ಮೈಸೂರು ಮತ್ತು ಶಂಕರ್ ಕೆ. ಬೆಳಲಕಟ್ಟೆ ಇವರು ರಂಗಸಜ್ಜಿಕೆ ನಿರ್ಮಾಣ ಹಾಗೂ ಮಂಜು ನಾರಾಯಣ್ ಬೆಳಕಿನ ವಿನ್ಯಾಸ ಮಾಡಿರುತ್ತಾರೆ.
ತನ್ನ ಸೃಜನಶೀಲ ಗದ್ಯಕೃತಿಗಳಿಗಾಗಿ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞ ಇವರ ಕಾದಂಬರಿಯನ್ನು ಆಧರಿಸಿದ ಈ ನಾಟಕವು ವಿಭಜನೆಯ ಕರಾಳ ದಿನಗಳನ್ನು ಅನಾವರಣಗೊಳಿಸುತ್ತದೆ. ನೆಲೆ ಕಳೆದುಕೊಂಡ ಜನರ ನೋವು, ನಿರಾಶ್ರಿತ ಜೀವನ, ಪರಸ್ಪರ ಸೋದರರಂತೆ ಬದುಕುತ್ತಿದ್ದ ಜನಗಳಲ್ಲಿ ಎದುರಾಗುವ ಜನ್ಮಭೂಮಿ ಮತ್ತು ಕರ್ಮಭೂಮಿಯ ನಡುವಿನ ಅಂತರಂಗದ ಸಂಘರ್ಷವನ್ನು ಆಳವಾಗಿ ಬಿಂಬಿಸುತ್ತದೆ. ಭಿನ್ನತೆಗಳ ನಡುವೆ ಸಾಮರಸ್ಯ ಸಹಬಾಳ್ವೆ ಮತ್ತು ಮಾನವೀಯತೆ ಹೇಗೆ ಸೇತುವೆಯಾಗುತ್ತದೆ ಎಂಬ ಸಂದೇಶವನ್ನು ಈ ನಾಟಕ ತೋರಿಸುತ್ತದೆ.
ಸರ್ವ ಜಾತಿ ಧರ್ಮದ ಪ್ರತಿಯೊಬ್ಬರೂ ನೋಡಬೇಕಾದ ವಿಶೇಷ ನಾಟಕವಾಗಿದ್ದು, 1111 ಪುಟಗಳ ಈ ಬೃಹತ್ ಕಾದಂಬರಿಯನ್ನು 3 ಗಂಟೆಯ ಪ್ರಯೋಗವನ್ನಾಗಿ ಮಾಡಲಾಗಿದೆ. ಕಲಾವಿದರ ಭಾವನಾತ್ಮಕ ಅಭಿನಯ, ಕವ್ವಾಲಿ, ಗಝಲ್ ಮುಂತಾಗಿ ಭಾರತೀಯ ಸಂಗೀತದಿಂದ ಕೂಡಿದ ‘ಸ್ವಾತಂತ್ರ್ಯದ ಓಟ’ವು ಪ್ರತಿಕ್ಷಣವೂ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಪ್ರವೇಶ ಉಚಿತವಾಗಿರುವ ಈ ಕಾರ್ಯಕ್ರಮದಲ್ಲಿ ಯಾವುದೇ ಸಭಾ ಕಾರ್ಯಕ್ರಮ ಇರದೆ ಸಮಯಕ್ಕೆ ಸರಿಯಾಗಿ ನಾಟಕ ಆರಂಭವಾಗಲಿದೆ.
