ಬೆಂಗಳೂರು : ಸಂಗೀತ ಮತ್ತು ನೃತ್ಯ – ಭಾವ ಮತ್ತು ಭಾವನೆಗಳ ಎರಡು ರೆಕ್ಕೆಗಳು. ಈ ಎರಡನ್ನೂ ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಿ, ರಸದೌತಣವನ್ನು ನೀಡುವುದು ಅಪರೂಪದ ಸಾಹಸವೇ ಸರಿ. ಅದನ್ನು ಸಾರ್ಥಕಗೊಳಿಸಿದ ಉತ್ಸವವೇ ನಾದಾಮೃತ ಕಲಾದೀಪ ಸಂಸ್ಥೆಯ ‘ಸ್ವರ ಮಯೂರ’ ನಾದ-ನೃತ್ಯೋತ್ಸವ. ಬೆಂಗಳೂರಿನ ಎನ್.ಆರ್. ಕಾಲೋನಿಯ ರಾಮಮಂದಿರದ ಪತ್ತಿ ಸಭಾಂಗಣವು ದಿನಾಂಕ 14 ಮತ್ತು 15 ಮಾರ್ಚ್ 2026ರಂದು ನಾದ–ನರ್ತನಗಳ ಪಾವನ ಕಾವ್ಯವಾಗಿ ರೂಪಾಂತರಗೊಂಡಿತ್ತು. ಅಲಂಕೃತ ವೇದಿಕೆ, ಸೊಗಸಾದ ವಿನ್ಯಾಸ ಮತ್ತು ಭಕ್ತಿಭಾವಪೂರ್ಣ ವಾತಾವರಣ – ಎಲ್ಲವೂ ಸೇರಿ, ಕಲಾರಸಿಕರಿಗೆ ಒಂದು ಆಧ್ಯಾತ್ಮಿಕ ಅನುಭವವನ್ನು ನೀಡಿದವು. ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದ ಅಂಗವಾಗಿ ನಡೆದ ಈ ಮಹೋತ್ಸವದ ಹಿಂದೆ ಸಂಸ್ಥಾಪಕರಾದ ಗಾನಕಲಾರತ್ನ ವಿದ್ವಾನ್ ಎಂ.ಎಸ್. ದೀಪಕ್ ಅವರ ದೃಷ್ಟಿ, ಶ್ರದ್ಧೆ ಮತ್ತು ಕಲಾಪ್ರೇಮ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಅವರ ಸಂಯೋಜನಾ ಚಾತುರ್ಯವೇ ಈ ಉತ್ಸವದ ಜೀವನಾಡಿಯಾಯಿತು.
ಮೊದಲ ದಿನದ ಆರಂಭವೇ ನೃತ್ಯ ಮತ್ತು ಸಂಗೀತಗಳ ಅದ್ಭುತ ಸಂವಾದದಿಂದ ಕೂಡಿತ್ತು. ವಿದ್ವಾನ್ ದೀಪಕ್ ಅವರ ಗಾಯನವು ನಾದದ ರೂಪದಲ್ಲಿ ಹರಿದುಬಂದರೆ, ಅದಕ್ಕೆ ಪ್ರತಿಧ್ವನಿಯಾಗಿ ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯೆ, ವಿದ್ವಾನ್ ಮಿಥುನ್ ಶ್ಯಾಮ್ ಮತ್ತು ವಿದ್ವಾನ್ ಪವಿತ್ರ ಕೃಷ್ಣ ಭಟ್ ಇವರ ಭರತನಾಟ್ಯ ಹೆಜ್ಜೆಗಳು ರಸದ ಹರಿವನ್ನು ಸೃಷ್ಟಿಸಿದವು. ಆ ಕ್ಷಣದಲ್ಲಿ, ನಾದ ಮತ್ತು ನೃತ್ಯ ಒಂದೇ ಭಾಷೆಯಾಗಿ ರೂಪುಗೊಂಡವು. ‘ಪಂಚದಶ ಸನ್ಮಾನ ಸಮಾರಂಭ’ವು ಈ ಉತ್ಸವದ ಗೌರವದ ಶಿಖರವಾಗಿತ್ತು. ಸಂಗೀತ ಮತ್ತು ನೃತ್ಯ ಎರಡೂ ಕ್ಷೇತ್ರದಿಂದ ಹದಿನೈದು ಗಣ್ಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ, ಸಂಸ್ಥೆಯು ಕೇವಲ ವ್ಯಕ್ತಿಗಳನ್ನು ಮಾತ್ರವಲ್ಲ, ಅವರ ಸಾಧನೆಯ ಪಥವನ್ನೇ ಗೌರವಿಸಿತು. ಪರಮ ಪೂಜ್ಯ ಗುರು ಶ್ರೀ ವಾದಿರಾಜರ ದಾಸರೇ ಆಗಿರುವ ವಿದ್ವಾನ್ ದೀಪಕ್ ಇವರು ರಾಗಮಾಲಿಕೆಯಲ್ಲಿ ನೀಡಿದ ‘ಗಾನ–ಸ್ವಾಗತ’ ಸಭೆಗೆ ಮಂಗಳಪ್ರಾರಂಭವಾಯಿತಾದರೆ, ರೇವತಿ ರಾಗದಲ್ಲಿ ಹದಿನೈದು ಸನ್ಮಾನಿತರ ಹೆಸರುಗಳನ್ನೂ ಜೋಡಿಸಿದ ಸ್ವರಚಿತ ಕೃತಿಯನ್ನು ಪಾಡಿ ಮಾಡಿದ ‘ಗಾನ–ಸನ್ಮಾನ’ವು ಕಲಾತ್ಮಕ ನಮನವಾಗಿ ಮನಸೆಳೆಯಿತು. ಗುರು ಗಾನಕಲಾಭೂಷಣ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಇವರಿಗೆ ಪ್ರದಾನಗೊಂಡ ‘ನಾದಾಮೃತ ಚಕ್ರವರ್ತಿ ಮೈಸೂರು ವಾಸುದೇವಾಚಾರ್ಯ ಪ್ರಶಸ್ತಿ’, ‘ನಾದಾಮೃತ ಪುರಸ್ಕಾರ’ ಹಾಗೂ ‘ನಾದಾಮೃತ ಕಲಾಚಾರ್ಯ’ ಬಿರುದು ಆ ಸಂಜೆಯ ಕೇಂದ್ರ ಬಿಂದುವಾಗಿತ್ತು. ವಿದ್ವಾನ್ ಸಂಪಗೋಡು ಎಸ್. ವಿಘ್ನರಾಜ ಇವರಿಗೆ ದೊರೆತ ‘ನಾದಾಮೃತ ಸಮ್ರಾಟ್ ಮ್ಯಾಂಡೋಲಿನ್ ಯು. ಶ್ರೀನಿವಾಸ್ ಪ್ರಶಸ್ತಿ’, ‘ನಾದಾಮೃತ ಯುವ ಪುರಸ್ಕಾರ’ ಹಾಗೂ ‘ನಾದಾಮೃತ ಕಲಾತೇಜ’ ಬಿರುದು ಯುವ ಸಾಧಕರಿಗೆ ಪ್ರೇರಣೆಯ ಬೆಳಕಾಗಿದ್ದವು.


ಇದೇ ವೇಳೆ ರುದ್ರಪಟ್ಟಣ ಸಹೋದರರಾದ ಪದ್ಮಶ್ರೀ ಪುರಸ್ಕೃತ ವಿದ್ವಾನ್ ಆರ್.ಎನ್. ತ್ಯಾಗರಾಜನ್ ಮತ್ತು ವಿದ್ವಾನ್ ಡಾ. ಆರ್.ಎನ್. ತಾರಾನಾಥನ್, ವಿದುಷಿ ಸುಕನ್ಯಾ ರಾಮಗೋಪಾಲ್, ವಿದುಷಿ ಉಷಾ ದಾತರ್, ವಿದುಷಿ ರೇವತಿ ನರಸಿಂಹನ್, ವಿದುಷಿ ತುಳಸಿ ರಾಮಚಂದ್ರ, ವಿದ್ವಾನ್ ಅಮಿತ್ ನಾಡಿಗ್, ವಿದ್ವಾನ್ ಸೋಮಶೇಖರ ಜೋಯಿಸ್, ವಿದ್ವಾನ್ ಕಾರ್ತಿಕ್ ನಾಗರಾಜ್, ವಿದ್ವಾನ್ ಪಾರ್ಶ್ವನಾಥ್, ವಿದ್ವಾನ್ ಮಿಥುನ್, ವಿದುಷಿ ಪವಿತ್ರ ಭಟ್ ಮತ್ತು ಶ್ರೀ ವರದರಾಜನ್ ಇವರು ಸೇರಿದಂತೆ 15 ಮಂದಿ ಹಿರಿಯ-ಕಿರಿಯ ಸಂಗೀತ – ನೃತ್ಯ ಕ್ಷೇತ್ರದ ವಿದ್ವಾಂಸರುಗಳನ್ನು ‘ನಾದಾಮೃತ ಪುರಸ್ಕಾರ’ ಹಾಗೂ ‘ನಾದಾಮೃತ / ನಾಟ್ಯಾಮೃತ ಕಲಾಚಾರ್ಯ / ಕಲಾತೇಜ’ ಬಿರುದುಗಳಿಂದ ಸನ್ಮಾನಿಸಲಾಯಿತು. ಹಾರ, ಶಾಲು, ಬಿನ್ನವತ್ತಳೆ, ನಾಮಾಂಕಿತ ಕಡಗ, ಸ್ಮರಣಿಕೆ ಮತ್ತು ಗುಲಾಬಿ ದಳಗಳ ಅಭಿಷೇಕ – ಇವೆಲ್ಲವೂ ಸೇರಿ, ಸನ್ಮಾನವನ್ನು ಕೇವಲ ವಿಧಿವಿಧಾನವಲ್ಲ, ಒಂದು ಹೃದಯಸ್ಪರ್ಶಿ ಸಂಭ್ರಮವನ್ನಾಗಿ ರೂಪಿಸಿತು.


ಗೋಷ್ಠಿ ಗಾಯನವು ಈ ಉತ್ಸವದ ಮತ್ತೊಂದು ಅಮೂಲ್ಯ ಅಧ್ಯಾಯ. ವಿದ್ವಾನ್ ದೀಪಕ್ ಇವರ ಸುಮಾರು ಮೂವತ್ತು ಶಿಷ್ಯರು ಒಂಬತ್ತು ವಾಗ್ಗೇಯಕಾರರ ಕೃತಿಗಳನ್ನು ಗಾನಮಾಲೆಯಾಗಿ ಅರ್ಪಿಸಿದರೆ, ಅವರ ಪ್ರಶಿಷ್ಯರಾದ ಐವತ್ತು ಬಾಲ ಕಲಾವಿದರು ತಮ್ಮ ಧ್ವನಿಗಳ ಮೂಲಕ ಪಿಳ್ಳಾರಿ ಗೀತೆಗಳನ್ನು ಹಾಗೂ ಪರಮಗುರು ಪದ್ಮನಾಭರ ಗಣಪತಿ ಕೃತಿಯನ್ನು ಜೀವಂತಗೊಳಿಸಿದರು. ನಾಲ್ಕು ತಲೆಮಾರಿನ ಗುರು–ಶಿಷ್ಯ ಪರಂಪರೆ ಒಂದೇ ವೇದಿಕೆಯಲ್ಲಿ ಮೂಡಿಬಂದ ಕ್ಷಣ, ಕಾಲವೇ ನಿಂತಂತೆ ಭಾಸವಾಯಿತು. ಮೊದಲ ದಿನದ ಅಂತ್ಯದಲ್ಲಿ ಆರ್.ಕೆ. ಪದ್ಮನಾಭ ಇವರ ಸಂಗೀತ ಕಚೇರಿ ಉತ್ಸವಕ್ಕೆ ಕಿರೀಟಪ್ರಾಯವಾಯಿತು. ಅವರು ಸೃಷ್ಟಿಸಿದ ‘ಶೈಲದೀಪ’ ರಾಗದಲ್ಲಿ ವಿದ್ವಾನ್ ದೀಪಕ್ ಹಾಗೂ ಸಂಸ್ಥೆಯನ್ನು ಸ್ಮರಿಸಿದ ಸ್ವರಚಿತ ಕೃತಿ, ನಾದದ ಹೊಸ ದಿಕ್ಕನ್ನು ಪರಿಚಯಿಸಿದಂತಿತ್ತು.


ಎರಡನೇ ದಿನ ವಿದ್ವಾನ್ ಸಂಪಗೋಡು ಎಸ್. ವಿಘ್ನರಾಜ ಇವರ ಸುಮುಖ ವೀಣೆಯ ನಾದದಿಂದ ಪ್ರಾರಂಭವಾಗಿ, ವೀಣಾ–ವೇಣು–ವಯೊಲಿನ್ ತ್ರಯವಾದ್ಯ ಕಚೇರಿಯ ಮೂಲಕ ಸಂಗೀತದ ವೈವಿಧ್ಯಮಯ ರಂಗಗಳನ್ನು ತೆರೆದಿಟ್ಟಿತು. ಅಂತಿಮವಾಗಿ, ಡಾ. ಸಂಜಯ್ ಶಾಂತಾರಾಂ ಇವರ ನೇತೃತ್ವದಲ್ಲಿ ‘ಶಿವಪ್ರಿಯ ನಾಟ್ಯ ತಂಡ’ ನೀಡಿದ ‘ಶಿವ ತಾಂಡವ’ ನೃತ್ಯ ಪ್ರದರ್ಶನ ಅಮೋಘವಾಗಿತ್ತು ಹಾಗೂ ಸಭಾಭವನ ನಾದ-ನರ್ತನ ತರಂಗಗಳಿಂದ ತುಂಬಿ, ಎರಡು ದಿನಗಳ ಉತ್ಸವ ಭವ್ಯವಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಅವಧಿಯಲ್ಲಿ ರಸಿಕರಿಗೆ ಫುಡ್ ಸ್ಟಾಲ್‌ಗಳ ವ್ಯವಸ್ಥೆಯ ಮೂಲಕ ವಿವಿಧ ರುಚಿಕರ ಆಹಾರವನ್ನು ಸವಿಯುವ ಅವಕಾಶ ಕಲ್ಪಿಸಲಾಗಿತ್ತು. ವಿದ್ವಾನ್ ದೀಪಕ್ ಇವರ ಸಂಘಟನಾ ಚಾತುರ್ಯ, ಶುದ್ಧ ಕನ್ನಡ ಭಾಷಣ ಶೈಲಿ, ಸ್ನೇಹ ಸೌಹಾರ್ದತೆ ಹಾಗೂ ಕಲೆಯ ಮೇಲೆ ಅವರಿಗಿರುವ ನಿಷ್ಠೆಯಿಂದ ಈ ಉತ್ಸವದಲ್ಲಿ ಸಹಸ್ರಾರು ಮಂದಿ ಕಲಾರಸಿಕರು ಬಂದು ಪಾಲ್ಗೊಳ್ಳುವಂತಾಗಿ, ಅದರ ಯಶಸ್ಸಿಗೆ ಕಾರಣೀಭೂತವಾಯಿತು. ಒಟ್ಟಾರೆಯಾಗಿ, ‘ಸ್ವರ ಮಯೂರ’ ಕೇವಲ ಒಂದು ಉತ್ಸವವಲ್ಲ, ಅದು ನಾದ-ನೃತ್ಯಗಳ ಪವಿತ್ರ ಸಂಗಮದಲ್ಲಿ ಮೂಡಿದ ಜೀವಂತ ಕಾವ್ಯ. ಗುರು–ಶಿಷ್ಯ ಪರಂಪರೆಯ ಸೌಂದರ್ಯವನ್ನು, ಕಲೆಯ ಆತ್ಮವನ್ನು ಮತ್ತು ಸಮರ್ಪಣೆಯ ಮಹತ್ವವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಈ ನಾದ-ನೃತ್ಯೋತ್ಸವ, ಕಲಾರಸಿಕರ ಮನದಲ್ಲಿ ದೀರ್ಘಕಾಲ ನೆಲೆಯೂರುವುದಂತು ನಿಶ್ಚಿತ.


