ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ದ ಮೂರನೇ ದಿನದ ಕಾರ್ಯಕ್ರಮವು ದಿನಾಂಕ 27 ಮೇ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಶ್ರೀ ವೆಂಕಟ್ರಮಣ ಆಸ್ರಣ್ಣರು ಮಾತನಾಡಿ “ಕಲೆಗಳಲ್ಲೆವೂ ಸಂಪದ್ಭರಿತವಾಗಿದೆ. ಯಕ್ಷಗಾನವೂ ಸರ್ವಾಂಗ ಸುಂದರವಾಗಿ ಬಹುಶ್ರುತ ವಿದ್ಯಾಂಸರನ್ನೂ, ಪಾಮರರನ್ನೂ ಆಕರ್ಷಿಸುತ್ತದೆ. ಮಾತೆ ಕಟೇಲೇಶ್ವರಿಯೂ ಕಲಾಪ್ರಿಯೆ ಹಾಗೆಯೇ ಅಲ್ಲಿಯೂ ನಿತ್ಯ – ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಲೇ ಇರುತ್ತವೆ. ಕದ್ರಿಯಲ್ಲೂ ನಟನ ಪ್ರಿಯ ಮಂಜುನಾಥನ ಸನ್ನಿಧಿಯಲ್ಲಿ ಸರಯೂ ತನ್ನ ಅಷ್ಠಾಹವನ್ನು ನಡೆಸುತ್ತಾ ಅನೇಕ ಯುವ ಕಲಾವಿದರಿಗೆ ವೇದಿಕೆ ಒದಗಿಸಿ ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡುತ್ತಿದೆ. ಈ ಮೂಲಕ ಕಲೆ ಯಕ್ಷವಾಹಿನಿಯಾಗಿ ಹರಿಯಲು ಅವಕಾಶವಾಗಿದೆ. ಈ ಪರಂಪರೆ ಮುಂದುವರಿಯಲಿ” ಎಂದು ಶುಭಾಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕಟೀಲು ಮೇಳದ ಪುಂಡು ವೇಷಧಾರಿ ರವಿ ಮುಂಡಾಜೆಯವರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು.
ಕಾವ್ಯಾ ಸನ್ಮಾನ ಪತ್ರ ವಾಚಿಸಿದರು. ಸಿವಿಲ್ ಇಂಜಿನಿಯರ್ ಗೌತಂ ಭಂಡಾರಿ ಶುಭ ಹಾರೈಸಿದರು. ಕುಮಾರಿ ಕೃತಿ ದೇವಾಡಿಗ ವಂದಿಸಿ, ನಿಹಾಲ್ ಪೂಜಾರಿ ನಿರ್ವಹಿಸಿದರು. ಸರಯೂ ಹಾಗೂ ವೃತ್ತಿಪರ ಕಲಾವಿದರ ಕೂಡುವಿಕೆಯಿಂದ ‘ಕಚ – ದೇವಯಾನಿ’ ಪ್ರಸ೦ಗ ಪ್ರದರ್ಶನಗೊಂಡಿತು.



