ಮಂಗಳೂರು : ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಲೆ ಅಷ್ಟಾಹ ಸಂಭ್ರಮ ‘ಯಕ್ಷಮಂಜರಿ’ಯ ತೃತೀಯ ದಿನದ ಕಾರ್ಯಕ್ರಮವು ದಿನಾಂಕ 03 ಮಾರ್ಚ್ 2026ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾವಿದರೂ ನಾಟಕ ರಚನೆಕಾರರೂ, ವಾಗ್ಮಿಗಳೂ ಆದ ಕದ್ರಿ ನವನೀತ ಶೆಟ್ಟಿ ಇವರು ಯಕ್ಷಗಾನ ಕ್ಷೇತ್ರದ ತನ್ನ ಅನುಭವಗಳನ್ನು ಮೆಲುಕು ಹಾಕುತ್ತಾ “ಯಕ್ಷಗಾನ ಕ್ಷೇತ್ರಕ್ಕೆ ಬರುವ ಹೊಸ ಕಲಾವಿದರು ಮೊದಲು ಉತ್ತಮ ಪ್ರೇಕ್ಷಕರಾಗಬೇಕು. ಹಾಗಾದರೆ ಮಾತ್ರ ಅವರು ಕಲಾವಿದರಾಗಬಲ್ಲರು. ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ತಾಳಮದ್ದಳೆ ಅಷ್ಟಾಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ. ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರು ಸಂಘಟಿತರಾಗಲಿ” ಎಂದು ಶುಭ ಹಾರೈಸಿದರು.

ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ರಂಗನಾಥ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಶುಭಾಶೀರ್ವಾದ ನೀಡಿದರು. ವೇದಿಕೆಯಲ್ಲಿ ಯುವ ಮುಂದಾಳು ಶ್ರೀ ರಾಘವೇಂದ್ರ ಉಡುಪ, ಯಕ್ಷಗಾನ ಕಲಾವಿದರೂ ಉದ್ಯಮಿಗಳಾದ ಶಿವಪ್ರಸಾದ್ ಪ್ರಭು, ದುರ್ಗಪರಮೇಶ್ವರೀ ವೆಂಕಟರಮಣ ದೇವಸ್ಥಾನದ ಮಹಿಳಾ ವೇದಿಕೆ ಅಧ್ಯಕ್ಷೆ ಜ್ಯೋತಿ ಪ್ರವೀಣ್, ಯಕ್ಷ ಕಲಾ ಮಹಿಳಾ ತಂಡ ಸುರತ್ಕಲ್ ಇದರ ಸಂಚಾಲಕಿ ಶ್ರೀಮತಿ ಕೆ. ಕಲಾವತಿ, ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ, ಅಧ್ಯಕ್ಷೆ ಗೀತಾ ಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ನಂತರ ಸುರತ್ಕಲ್ ಯಕ್ಷ ಕಲಾ ಮಹಿಳಾ ತಂಡದ ಮಹಿಳಾ ಕಲಾವಿದರಿಂದ ವಾಗ್ವೈಭವದ ‘ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
