ಮೂಡುಬಿದಿರೆ : ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸಮ್ಮುಖದಲ್ಲಿ ಸಮಗ್ರ ಭಾರತದ ಸಾಂಸ್ಕೃತಿಕ ಚಿತ್ರಣವು ಜೀವ ಪಡೆದಂತೆ ಕಂಗೊಳಿಸಿದರೆ, ಅಷ್ಟೇ ವಿನೀತರಾದ ಶಿವರಾಜ್ ಕುಮಾರ್ ದಂಪತಿ ವಿನಮ್ರತೆ ತೋರಿದರು. ಇದು ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ದಿನಾಂಕ 21 ಮಾರ್ಚ್ 2026ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- 2026’ರ ಝೋಷ್.
ಇದರಿಂದ ಪುಳಕಿತರಾದ ಶಿವರಾಜ್ ಕುಮಾರ್, ತಾಳ ಹಿಡಿದು, ‘ಕೋಲು ಮಂಡೆ ಜಂಗಮ ದೇವರು…..’ ಹಾಡಿ, ಹೆಜ್ಜೆ ಹಾಕಿದರು. ತಮ್ಮ ಆರಂಭಿಕ ‘ಆನಂದ್” ಸಿನಿಮಾದ ‘ಟುವ್ವಿ ಟುವ್ವಿ’ ಹಾಡಿನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅವರ ‘ ಬೊಂಬೆ ಹೇಳುತೈತೆ… ನೀನೆ ರಾಜಕುಮಾರ… ವರೆಗಿನ ಹಾಡುಗಳನ್ನು ಹಾಡಿದರು. ಕಿಕ್ಕಿರಿದ ವಿದ್ಯಾರ್ಥಿ ಸಾಗರವು ಪುನೀತವಾಯಿತು. ಸಾಕ್ಷಾತ್ಕರಿಸಿದ ಡಾ. ಎಂ. ಮೋಹನ ಆಳ್ವ ಖುಷಿ ಪಟ್ಟು, ನಸುನಕ್ಕರು.

ಇದಕ್ಕೂ ಮೊದಲು ದೀಪ ಬೆಳಗಿ, ಚೆಂಡೆ ಪರಿಕರ ಬಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವರಾಜ್ ಕುಮಾರ್ ಅವರು, “ಏನನ್ನೇ ಸಾಧಿಸ ಬೇಕಾದರೂ ಮನಸ್ಸಿನಲ್ಲಿ ಧಾರಾಳತನ ಬೇಕು. ಅದನ್ನು ನಾನಿಲ್ಲಿ ಕಂಡಿದ್ದೇನೆ. ಆಳ್ವರಿಗೆ ಧನ್ಯವಾದ. ಎಲ್ಲರನ್ನೂ ಒಳಗೊಳ್ಳುವುದೇ ಕನ್ನಡ- ಕರ್ನಾಟಕದ ಸಂಸ್ಕೃತಿ. ಇಡೀ ಭಾರತದ ವಿಭಿನ್ನ ಸಂಸ್ಕೃತಿ ಒಂದುಗೂಡಿರುವುದನ್ನು ನಾನು ಇಲ್ಲಿ ಕಂಡೆನು. ನೀವೆಲ್ಲ ಹೀಗೆಯೇ ಮುಂದೆಯೂ ಜೊತೆಯಾಗಿ ಜೀವಿಸಿ. ಎಲ್ಲರೂ ಒಂದಾಗಿ ಬದುಕಿ ಸಾಧಿಸಿ” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ‘ಮೂಡುಬಿದಿರೆಗೆ ನಾನು ಎರಡನೇ ಬಾರಿಗೆ ಬರುತ್ತಿದ್ದೇನೆ. ಸ್ಮೈಲ್ ಸಿನಿಮಾಕ್ಕಾಗಿ ಬಂದಿದ್ದೆವು. ಈಗ ತುಂಬಾ ಖುಷಿಯಾಯಿತು. 40 ವರ್ಷಗಳ ಬಳಿಕವೂ ನನ್ನ ಮೇಲೆ ಅದೇ ಪ್ರೀತಿ ತೋರುತ್ತಿದ್ದೀರಲ್ಲಾ. ನಾನೇ ಪುಣ್ಯವಂತ’ ಎಂದು ಕೃತಜ್ಞರಾದರು. ಟಟುವ್ವಿ ಟುವ್ವಿ ಟುವ್ವಿ…, ಮುತ್ತಣ ಪೀಪಿ ಊದುವ…, ಮಣಿ ಮಣಿ…, ಇವನಾರ ಮಗನೋ…, ಬೇಡುವನು ವರವನ್ನು ಜೋಗಿ…, ಯಾರೇ ಕೂಗಾಡಲಿ…, ಬೊಂಬೆ ಹೇಳುತೈತೆ… ಹಾಡುಗಳನ್ನು ಹಾಡಿ ಕುಣಿದರು. ಭಾರತದ ಬಹುತ್ವ ಸಾರುವ ಸಾಂಸ್ಕೃತಿಕ ದರ್ಶನ ಮೆರವಣಿಗೆ ಮೂಲಕ ವೇದಿಕೆಗೆ ಅವರನ್ನು ಆರಂಭದಲ್ಲಿ ಕರೆತರಲಾಯಿತು.

“ನಾವು ಬಾರದಿದ್ದರೆ ತಪ್ಪಾಗುತ್ತಿತ್ತು. ಎಲ್ಲ ಸಂಸ್ಕೃತಿ ಒಂದೆಡೆ ನೋಡುವುದು ಪುಣ್ಯ” ಎಂದೇ ಮಾತು ಆರಂಭಿಸಿದ ಗೀತಾ ಶಿವರಾಜ್ ಕುಮಾರ್, ‘ಆಳ್ವಾಸ್‌ನ ಹುಡುಗಿಯರನ್ನು ನೋಡುವಾಗಲೇ ಮುದ್ದು ಮುದ್ದು ಆಗುತ್ತದೆ. ಚಂದ” ಎಂದು ಮಮತೆಯ ನಗೆ ಬೀರಿದರು. ಆಗ ಸಭಾಂಗಣದಿಂದ ಕೇಳಿಬಂದ ಝೇಂಕಾರಕ್ಕೆ, ‘ಹುಡುಗರೂ ಚಂದ ಕಾಣ್ತಾರೆ’ ಎಂದರು. ಜೋಶ್ ಹೆಚ್ಚಾಯಿತು. ‘ಇಂಥ ಸಂಸ್ಥೆ ಕಟ್ಟಿದ ಆಳ್ವಾಸ್ ಗೆ ಧನ್ಯವಾದ’ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರಿಗೆ, ‘ನಿಮ್ಮ ಮಾತು’ ಎಂದು ಶಿವರಾಜ್ ಕುಮಾರ್ ಕೇಳಿದಾಗ, ‘ಇಂದು ನಿಮ್ಮ, ವಿದ್ಯಾರ್ಥಿಗಳ ದಿನ’ ಎಂದು ಕೈ ಸನ್ನೆ ಮಾಡಿದರು. ಸಂಘಟನಾ ಶಿಸ್ತಿಗೆ ಅವರು ‘ಭೇಷ್’ ವ್ಯಕ್ತಪಡಿಸಿದರು. ವಿದ್ಯಾರ್ಥಿ ಕೌಶಿಕ್ ಬರೆದ ಚಿತ್ರವನ್ನು ದಂಪತಿಗೆ ನೀಡಲಾಯಿತು.

ದಿನದ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ಚಿತ್ರರಂಗದ ಪ್ರಮುಖರಾದ ನಟ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ ಹಾಗೂ ಸಾಹಿಲ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಮಹಾರಾಷ್ಟ್ರ, ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಕಲಾಕೃತಿಗಳಿಂದ ಸಿಂಗರಿಸಲ್ಪಟ್ಟ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟ ವಿದ್ಯಾರ್ಥಿಗಳೇ ಪ್ರಮುಖ ಆಕರ್ಷಣೆ ಆಗಿದ್ದರು.
