Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪ್ರವಾಸ ಕಥನ | ಮಧ್ಯಪ್ರದೇಶದ ಉಜ್ಜಯಿನಿ-ಇಂದೋರ್ ಪ್ರವಾಸ
    Article

    ಪ್ರವಾಸ ಕಥನ | ಮಧ್ಯಪ್ರದೇಶದ ಉಜ್ಜಯಿನಿ-ಇಂದೋರ್ ಪ್ರವಾಸ

    April 23, 2026No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೊದಲನೆಯ ದಿವಸ : ಬೆಂಗಳೂರಿನ ಎಲಿಗೆಂಟ್ ಟ್ರಾವೆಲ್ಸ್ ಜತೆಗೆ ಮಧ್ಯಪ್ರದೇಶದ ಇಂದೋರ್-ಉಜ್ಜಯಿನಿ- ಮಹೇಶ್ವರಗಳ ಸುತ್ತಮುತ್ತಲಿನ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ನೋಡಲೆಂದು ಪ್ರವಾಸ ಹೊರಟೆವು. ಮಧ್ಯಾಹ್ನ ಎರಡು ಗಂಟೆಗೆ ಮಹೇಶ್ವರ ತಲುಪಿದೆವು. ದಾರಿಯುದ್ದಕ್ಕೂ ಗುಡ್ಡ-ಬೆಟ್ಟಗಳು. ಅವುಗಳನ್ನು ಕಡಿದು ರಾಜರಸ್ತೆ ಮಾಡಿದ್ದಾರೆ. ನಗರವು ಸ್ವಚ್ಛತೆಗೆ ಆದ್ಯತೆ ಕೊಟ್ಟಂತೆ ಕಾಣಿಸಿತು. ಮಹೇಶ್ವರ ದೊಡ್ಡ ನಗರವೇನೂ ಅಲ್ಲ. ನೋಟಕ್ಕೆ ಒಂದು ಪೌರಾಣಿಕ ನಗರದಂತೆ ಕಾಣುತ್ತದೆ. ನಾವು ಹೋಟೆಲ್ ದೇವರಾಜ್ ದಲ್ಲಿ ಇಳಿದುಕೊಂಡು ಊಟಮಾಡಿ ವಿಶ್ರಾಂತಿ ತೆಗೆದುಕೊಂಡೆವು. ಸಂಜೆ ಐದು ಗಂಟೆಗೆ ತಿಲಕ್ ಎಂಬ ಹುಡುಗು ಪ್ರಾಯದ ಗೈಡ್ ನಮ್ಮನ್ನು ಮಹೇಶ್ವರದಲ್ಲಿರುವ ದೇವಾಲಯಗಳನ್ನೂ ಅಹಲ್ಯಾಬಾಯಿ ಹೋಳ್ಕರ್ ಅರಮನೆ-ಕೋಟೆಗಳನ್ನೂ ತೋರಿಸಲು ಕರೆದುಕೊಂಡು ಹೋದರು.

    18ನೇ ಶತಮಾನದಲ್ಲಿ ಮಧ್ಯಪ್ರದೇಶದ ಮಾಹಿಷ್ಮತಿಯ ರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಬಗ್ಗೆ ಅಲ್ಲಿಯವರಿಗೆ ಆರಾಧನಾ ಭಾವವಿದೆ. ತನ್ನ 29ನೇ ವಯಸ್ಸಿನಲ್ಲೇ ವಿಧವೆಯಾಗಿ ಗಂಡ-ಮಾವ-ಮಗ ಎಲ್ಲರನ್ನೂ ಕಳೆದುಕೊಂಡು ರಾಜ್ಯದ ಆಡಳಿತದ ಜವಾಬ್ದಾರಿಯನ್ನು ಹೊರಬೇಕಾಗಿ ಬಂದ ಆಕೆ ಸ್ವಲ್ಪವೂ ಎದೆಗುಂದದೆ ರಾಜ್ಯಭಾರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋದಳಲ್ಲದೆ ರಾಜ್ಯವನ್ನು ಶಿಕ್ಷಣ ಹಾಗೂ ಸಾಂಸ್ಕೃತಿಕ ವಿಚಾರಗಳಲ್ಲಿ ಶ್ರೀಮಂತವಾಗಿಸಿದಳು. ಆಗಿನ ಕಾಲದಲ್ಲಿ ಮುಸಲ್ಮಾನರು ನೂರಾರು ಹಿಂದೂ ದೇವಾಲಯಗಳನ್ನು ನಾಶಮಾಡಿದ್ದರು. ಅಹಲ್ಯಾಬಾಯಿ ಮಧ್ಯಪ್ರದೇಶ ಮಾತ್ರವಲ್ಲದೇ ತನ್ನ ತವರೂರು ಮಹಾರಾಷ್ಟ್ರದಲ್ಲೂ ಅಂತಹ ಎಲ್ಲ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದಳು. ಮಾಹಿಷ್ಮತಿಯಲ್ಲಿ ಹಲವು ರೀತಿಯ ಸುಧಾರಣೆಗಳನ್ನು ತಂದು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಅದರ ಹೆಸರನ್ನು ‘ಮಹೇಶ್ವರ’ ಎಂದು ಬದಲಾಯಿಸಿದಳು. ಮಹಾಶಿವಭಕ್ತೆಯಾದ ಆಕೆ ನರ್ಮದಾ ನದಿಯಿಂದ ಶಿವಲಿಂಗಗಳನ್ನು ತರಿಸಿ ಯಾವಾಗಲೂ ಭಕ್ತಿ-ಶ್ರದ್ಧೆಗಳಿಂದ ಪೂಜಿಸುತ್ತಿದ್ದಳು. ಅವಳು ಪೂಜೆ ಮಾಡುತ್ತಿದ್ದ ದೇವರಕೋಣೆಯಲ್ಲಿ ಶಿವಲಿಂಗಗಳೂ ಶಿವನ ಮೂರ್ತಿಗಳೂ ತುಂಬಿಹೋಗಿವೆ.‌ ಅಹಲ್ಯಾಬಾಯಿ ಮಾಡಿದ ಸಾಧನೆಗಳ ಕಥೆಯನ್ನು ಕೇಳುತ್ತಲೇ ನಾನು ರೋಮಾಂಚನಗೊಂಡೆ.

    ನಾವು ಅಹಲ್ಯಾಬಾಯಿ ಹೋಳ್ಕರ್ ಅವರ ವಿವಿಧ ವಿನ್ಯಾಸದ ಕೆತ್ತನೆಯ ಮರದ ಕಂಬಗಳಿರುವ (ಕಾಷ್ಅಠಶಿಲ್ರಪ) ಮನೆಯನ್ನು ನೋಡಿದೆವು. ದರ್ಬಾರು ನಡೆಸುತ್ತಿದ್ದಾಗ ಆಕೆ ಕುಳಿತುಕೊಳ್ಳುತ್ತಿದ್ದ ಪೀಠವನ್ನೂ ಅದರ ಹಿಂದೆ ಕುಳಿತ ಭಂಗಿಯಲ್ಲಿರುವ ಆಕೆಯ ಮೂರ್ತಿಯನ್ನೂ ನೋಡಿದೆವು. ಅರಮನೆಯ ಸುತ್ತಲಿನ ಕೋಟೆಯನ್ನೂ ನೋಡಿದೆವು. ಮುಂದೆ ಆಹಿಲೇಶ್ವರ ದೇವಾಲಯವನ್ನೂ ಅದರ ಮುಂಭಾಗದಲ್ಲಿರುವ ನರ್ಮದಾ ನದಿಯನ್ನೂ ಅಲ್ಲಿರುವ ಸ್ನಾನಘಟ್ಟಗಳನ್ನೂ ನೋಡಿದೆವು.‌ ನರ್ಮದಾ ತೀರವು ಪ್ರವಾಸಿಗರಿಂದಲೂ ವಿವಿಧ ರೀತಿಯ ಮಾರಾಟಗಾರರ ಗಲಾಟೆಯಿಂದಲೂ ತುಂಬಿತ್ತು. ಕಡುಬೇಸಗೆಯಾದರೂ ನರ್ಮದೆ ತುಂಬಿ ಹರಿಯುತ್ತಿದ್ದಳು. ನಾವು ನರ್ಮದಾಮಾತೆಯ ಮಡಿಲಿಗಿಳಿದು ಅವಳ ಜಲಸ್ಪರ್ಶದಿಂದ ಪುಳಕಿತರಾದೆವು. ದೋಣಿ ಸವಾರಿಯ ಸುಂದರ ಅನುಭವವನ್ನೂ ಪಡೆದೆವು. ಕೊನೆಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ಜೀವನವನ್ನಾಧರಿಸಿದ ಬೃಹತ್ ಪರದೆಯ ಮೇಲಿನ ಒಂದು ಸುಂದರ ಲೇಸರ್‌ ಫಿಲ್ಮ್ ಶೋ ಕೂಡಾ ಇತ್ತು. ಆಗಲೇ ಕತ್ತಲಾವರಿಸಿತ್ತು. ನಾವು ಅಲ್ಲೇ ಪಕ್ಕದಲ್ಲಿರುವ ಅಹಲ್ಯಾಬಾಯಿ ಕಾಶಿಯ ಮಾದರಿಯಲ್ಲಿ ಕಟ್ಟಿಸಿದ ಕಾಶಿ ವಿಶ್ವನಾಥ ದೇವಸ್ಥಾನವನ್ನೂ, ಶಿವ-ವಿಷ್ಣು ಇಬ್ಬರೂ ಜತೆಯಾಗಿ ನೆಲೆಸಿರುವ ಶ್ರೀ ರಾಜರಾಜೇಶ್ವರ ಸಹಸ್ರಬಾಹು ದೇವಸ್ಥಾನವನ್ನೂ ನೋಡಿ ಹೋಟೆಲಿಗೆ ಮರಳಿ ಬಂದೆವು.

    ಎರಡನೇ ದಿವಸ : ಬೆಳಗ್ಗೆ ಐದೂವರೆ ಗಂಟೆಯ ಚುಮುಚುಮು ನಸುಕಿನಲ್ಲಿ ನಾವು ಹೋಟೆಲ್ ದೇವರಾಜ್ ನಿಂದ ಅಟೋರಿಕ್ಷಾಗಳಲ್ಲಿ ನರ್ಮದಾ ನದೀತೀರಕ್ಕೆ ಸ್ನಾನ ಮಾಡಲು ಹೋಗಿದ್ದು ಒಂದು ಅಪೂರ್ವ ಅನುಭವ. ಗಂಗಾತೀರದಲ್ಲಿರುವಂತೆ ಇಲ್ಲಿಯು ತುಂಬಾ ಸ್ನಾನಘಟ್ಟಗಳಿವೆ. ನಾಲ್ಕು-ಐದು ಮೆಟ್ಟಲುಗಳನ್ನಿಳಿದು ನೀರಲ್ಲಿ ಮುಳುಗು ಹಾಕಲು ಏನೂ ಭಯವಿಲ್ಲ. ಸ್ವಲ್ಪ ಸೆಳೆತವೇನೋ ಇತ್ತು. ಆದರೂ ನಾವು ಮಹಿಳೆಯರೆಲ್ಲರೂ ಒಟ್ಟಿಗೆ ನೀರಿಗಿಳಿದೆವು. ನರ್ಮದೆಯ ನೀರು ಸ್ವಚ್ಚವಾಗಿತ್ತು. ನಾವು ಮೂರು ಮುಳುಗಿ ಹಾಕಿ ಮೇಲೆ ಬಂದು ಅಲ್ಲಿದ್ದ ಕೋಣೆಯಲ್ಲಿ ಬಟ್ಟೆ ಬದಲಾಯಿಸಿದೆವು. ಹೋಟೆಲಿಗೆ ಮರಳಿ ಬೆಳಗಿನ ಉಪಾಹಾರ ಮುಗಿಸಿ ನಮ್ಮ TT ಓಂಕಾರೇಶ್ವರ ದೇವಾಲಯದತ್ತ ಸಾಗಿತು. ಅಲ್ಲಿಗೆ ತಲುಪಿದಾಗ ಮಧ್ಯಾಹ್ನ 12 ಗಂಟೆ. ಭಾನುವಾರವಾದ್ದರಿಂದ ಇವತ್ತು ವಿಪರೀತ ಜನಜಂಗುಳಿ. ದೇವಸ್ಥಾನದವರೆಗೆ TT ಹೋಗುವುದಿಲ್ಲವೆಂದು ನಾವು ಮತ್ತೆ ಅಟೋರಿಕ್ಷಾ ಹಿಡಿದೆವು. ಅಟೋರಿಕ್ಷಾ ಕೂಡಾ ಸೇತುವೆ ತನಕ ಮಾತ್ರ ಹೋಗುತ್ತದೆ. ಅಲ್ಲಿಂದ ನಂತರ ಸುಮಾರು ನಡೆದು ಮೆಟ್ಟಲುಗಳನ್ನು ಹತ್ತಿ ಇಳಿದು ವಿಶೇಷ ದರ್ಶನಕ್ಕಾಗಿ ಹಣ ತೆತ್ತು ಜ್ಯೋತಿರ್ಲಿಂಗದ ಮತ್ತು ಪಕ್ಕದಲ್ಲಿರುವ ಪಾರ್ವತಿ ದೇವಿಯ ದರ್ಶನ ಪಡೆದು ಭಾವುಕರಾದೆವು.

    ಅಲ್ಲಿಂದ ಹಿಂದಿರುಗಿ ಬರುವಾಗ ಮಾಮಲೇಶ್ವರ ಜ್ಯೋತಿರ್ಲಿಂಗದ ದರ್ಶನ ಮಾಡಲು ಬೋಟಿನಲ್ಲಿ ಹೋದೆವು. ಆಗಲೇ ಮಧ್ಯಾಹ್ನದ ಬಿಸಿಲು ನೆತ್ತಿಗೇರಿತ್ತು. ನರ್ಮದೆ ಮಾತ್ರ ತಣ್ಣಗೆ ಆಹ್ಲಾದಕರವಾಗಿತ್ತು.‌ ಓಂಕಾರೇಶ್ವರ ದೇವಸ್ಥಾನವಿರುವ ಬೆಟ್ಟ ನರ್ಮದಾ ನದಿಯ ಉತ್ತರಕ್ಕೆ ಖಂಡ್ವಾ ಜಿಲ್ಲೆಯ ಮಾಂಧಾತಾ ಅನ್ನುವ ‘ಓಂ’ ಅಕ್ಷರದಾಕೃತಿಯಲ್ಲಿರುವ ಬೆಟ್ಟದ ಮೇಲಿದೆ. ಮಾಮಲೇಶ್ವರವು ನರ್ಮದಾ ನದಿಯ ದಕ್ಷಿಣಕ್ಕಿದೆ. ಶಿವನ ಅವಳಿ ದೇವಸ್ಥಾನಗಳು, ಆದ್ದರಿಂದ ಒಂದನ್ನು ಸಂದರ್ಶಿಸಿದರೆ ಇನ್ನೊಂದಕ್ಕೂ ಹೋಗದೆ ಯಾತ್ರೆ ಪೂರ್ಣವಾಗುವುದಿಲ್ಲ ಎಂಬ ನಂಬಿಕೆಯಿದೆ. ಎರಡೂ ದೆವಸ್ಥಾನಗಳ ವಾಸ್ತುಶಿಲ್ಪವು ನಾಗರ ಶೈಲಿಯಲ್ಲಿದೆ. ಮಾಮಲೇಶ್ವರನ ಎದುರಿಗಿರುವ ಪುಟ್ಟ ನಂದಿಯನ್ನು ನಾವು ನೋಡುತ್ತಿದ್ದಂತೆ ತುಂಟ ಕೋತಿಯೊಂದು ಬಂದು ನಂದಿಯ ಬೆನ್ನ ಮೇಲೆ ಹತ್ತಿ ಕುಳಿತಿದ್ದನ್ನು ನೋಡಿ ‘ಕೋತಿ ಚೇಷ್ಟೆಯೇ!’ ಎಂದೆಣಿಸಿ ನಗು ಬಂತು. ಮಾಮಲೇಶ್ವರನ ಸಂದರ್ಶನ ಮುಗಿಸುವ ಹೊತ್ತಿಗೆ ಗಂಟೆ ಎರಡಾಗಿತ್ತು. ನಾವು ಹೋಟೆಲೊಂದರಲ್ಲಿ ಊಟ ಮುಗಿಸಿ ಉಜ್ಜಯಿನಿಗೆ ಪ್ರಯಾಣ ಹೊರಟೆವು. ವಾತಾವರಣ ವಿಪರೀತ ಬಿಸಿ. ಬಾಣಲೆ ಇಟ್ಟರೆ ಅರಳು ಸಿಡಿಯ ಬಹುದಾದಷ್ಟು ಬಿಸಿ. ಉಡುಪಿ ಎಷ್ಟೋ ಉತ್ತಮ ಅನ್ನಿಸಿತು.

    ಉಜ್ಜಯಿನಿಗೆ ಓಂಕಾರೇಶ್ವರದಿಂದ ನಾಲ್ಕು ಗಂಟೆ ಪ್ರಯಾಣ. ದಾರಿಯ ಅರ್ಧದಷ್ಟು ಗುಡ್ಡ-ಬೆಟ್ಟಗಳು. ತಿರುವುಗಳುಳ್ಳ ಘಾಟಿರಸ್ತೆಯೂ ಇತ್ತು. ನಿನ್ನೆಯೂ ಇವತ್ತೂ ಪ್ರಯಾಣ ಮಾಡುವಾಗ ನಾನು ಗಮನಿಸಿದ ಒಂದು ವಿಷಯವೆಂದರೆ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲೂ ನೆಟ್ಟು ಬೆಳೆಸಿದ ಕರಿಬೇವಿನ ಮರಗಳು. ಸುತ್ತಮುತ್ತ ಕಹಿಬೇವಿನ ಮರಗಳಿರುವುದು ಆರೋಗ್ಯಕ್ಕೆ ಒಳ್ಳೆಯದು ಅನ್ನುತ್ತಾರೆ. ಹಾಗಿದ್ದರೆ ಮಧ್ಯಪ್ರದೇಶದವರ ಆರೋಗ್ಯ ಚೆನ್ನಾಗಿರಬಹುದು ಅಂದುಕೊಂಡೆ. ರಾತ್ರಿ ಎಂಟುಗಂಟೆಯ ಹೊತ್ತಿಗೆ ನಾವು ಉಜ್ಜಯಿನಿ ತಲುಪಿ ಅಥರ್ವ ಹೊಟೇಲಿನಲ್ಲಿ ಇಳಿದುಕೊಂಡೆವು.

    ಮೂರನೆಯ ದಿವಸ : ಹುಟ್ಟಿನಿಂದ ಸಾವಿನ ತನಕ ಮನುಷ್ಯನದ್ದು ಮೂರು ದಿನದ ಕ್ಷಣಿಕ ಬಾಳು. ಆದರೆ ಅದರ ಅರಿವೇ ಇಲ್ಲದೆ ನಾವು ‘ಸಿಕ್ಕಿದಷ್ಟೂ ಸಾಲದು ಇನ್ನೂ ಬೇಕು’ ಅನ್ನುತ್ತ ಈ ಭೌತಿಕ ಜಗತ್ತು ನಮ್ಮ ಸುತ್ತ ಹರಡಿದ ಮಾಯಾಜಾಲದ ಒಳಗೆ ಸಿಲುಕಿ ಭ್ರಮಾಧೀನರಾಗಿರುತ್ತೇವೆ. ಬ್ರಹ್ಮಾಂಡದ ಸೃಷ್ಟಿಯ ಆದಿಯಲ್ಲಿ ಇದ್ದವನೂ ಅಂತ್ಯದ ನಂತರವೂ ಇರುವವನೂ, ಕಾಲವನ್ನೇ ಗೆದ್ದು ನಿಂತಿರುವವನೂ ಆದ ಮಹಾಕಾಲನೆನಿಸಿದ ಶಿವನು ನಮ್ಮನ್ನು ಪದೇ ಪದೇ ಎಚ್ಚರಿಸಿದರೂ ನಮ್ಮ ಮನಸ್ಸು ಕೇಳುವುದಿಲ್ಲ. ಒಂದು ದಿನ ಅವನು ನಮ್ಮನ್ನು ತನ್ನ ಬಳಿಗೆ ಬರುವ ಅದೃಷ್ಟವನ್ನು ಕೊಟ್ಟು ‘ನಿನ್ನ ಭವದ ಬದುಕಿನ ಮೋಹಜಾಲದಿಂದ ಬಿಡಿಸಿಕೋ. ನಿನ್ನ ದುರಾಸೆಗಳನ್ನೂ ಮೋಹಗಳನ್ನೂ ಸುಟ್ಟು ಭಸ್ಮ ಮಾಡುತ್ತೇನೆ. ನಿನ್ನೊಳಗೆ ಭದ್ರವಾಗಿ ತಳವೂರಿ ನಿನ್ನ ಬದುಕನ್ನು ಹಾಳುಗೈಯುತ್ತಿರುವ ಸದಾ ‘ನಾನು, ನಾನು’ ಎಂದು ಜಪಿಸುತ್ತಿರುವ ನಿನ್ನೊಳಗಿನ ಅಹಂಕಾರವನ್ನು ಸುಟ್ಟು ಭಸ್ಮ ಮಾಡುತ್ತೇನೆ. ಇನ್ನು ಮುಂದಿನ ದಿನಗಳಲ್ಲಾದರೂ ಇತರರಿಗೋಸ್ಕರ ನಿನ್ನ ಬದುಕನ್ನು ಮೀಸಲಿಡು ಕಂದಾ’ ಎಂದು ಪಿಸುಗುಡುತ್ತಾನೆ. ಮಧ್ಯಪ್ರದೇಶದಲ್ಲಿರುವ ಸ್ವಾಮಿ ಮಹಾಕಾಲೇಶ್ವರ ಇವತ್ತು ನಸುಕಿನಲ್ಲಿ ನನಗೆ ಮಾಡಿದ್ದೂ ಅದನ್ನೇ. ಬೆಳಗಿನ ನಾಲ್ಕೂವರೆ ಗಂಟೆಯ ಹೊತ್ತಿಗೆ ಮಹಾಲನ ಸನ್ನಿಧಿಯಲ್ಲಿ ಸಾವಿರಾರು ಮಂದಿ ಭಕ್ತರ ಸಮಕ್ಷಮದಲ್ಲಿ ನಡೆದ ನೋಡಿದವರ ಕಣ್ಣುಗಳನ್ನು ಪಾವನವಾಗಿಸಿದ ‘ಭಸ್ಮಾರತಿ’ಗೆ ಸಾಕ್ಷಿಯಾದ ನನ್ನ ಮನಸ್ಸು ಆಧ್ಯಾತ್ಮಿಕ ಚಿಂತನೆಗಳಿಂದ ಗದ್ಗದಿತವಾಯಿತು. ಇಂಥ ಪವಿತ್ರ ಕ್ಷಣಗಳಿಗಾಗಿ ಬೆಂಗಳೂರಿನಿಂದ ಮಹಾಕಾಲೇಶ್ವರನ ಸನ್ನಿಧಿಗೆ ಹೋಗಿದ್ದ ನಾವು ರಾತ್ರಿ ಹನ್ನೊಂದು ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ಕಷ್ಟಪಟ್ಟೆವು ಕೂಡಾ. ಕೊನೆಗೂ ನಮ್ಮ ಬಹುನಿರೀಕ್ಷೆಯ ಆ ಸುಂದರ ಕ್ಷಣಗಳು ಬಂದೇ ಬಿಟ್ಟವು. ಮೊದಲಿಗೆ ಮಹಾಕಾಲನಿಗೆ ದೇವಾಲಯದ ಹಿಂಬದಿ ಇರುವ ಕೋಟಿತೀರ್ಥ ಕುಂಡದಿಂದ ತಂದ ಜಲಾಭಿಷೇಕ ನಂತರ ಹಾಲು ಮೊಸರು, ತುಪ್ಪ, ಜೇನುತುಪ್ಪಗಳ ಪಂಚಾಮೃತಗಳ ಅಭಿಷೇಕ, ಹೀಗೆ ಅಭ್ಯಂಜನವಾದ ಬಳಿಕ ಲಿಂಗವನ್ನು ಗಂಧ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಿ ಮಂತ್ರಘೋಷದೊಂದಿಗೆ ‘ಜಯಜಯ ಮಹಾಕಾಲ’ದೊಂದಿಗೆ ನೆರೆದಿದ್ದವರ ‘ಹರಹರ ಮಹದೇವ್’ ಘೋಷಣೆಯೊಂದಿಗೆ ಭಸ್ಮಪ್ರಿಯ ಸಿವನಿಗೆ ಭಸ್ಮದಾರತಿ ಆರಂಭವಾಗಿ ಅರ್ಧ ಗಂಟೆಗಳ ಕಾಲ ಮುಂದುವರೆಯಿತು. ಭಕ್ತರ ವೀಕ್ಷಣೆಗೋಸ್ಕರ ಗ್ಯಾಲರಿಗಳ ವ್ಯವಸ್ಥೆಯಿದ್ದು ಪೋಲಿಸರು ಕೈಗೊಂಡ ಶಿಸ್ತಿನ ವ್ಯವಸ್ಥೆ ಬಹಳ ಚೆನ್ನಾಗಿದ್ದುದರಿಂದ ಎಲ್ಲರಿಗೂ ಪೂರ್ತಿ ಕಾರ್ಯಕ್ರಮವನ್ನು ನೋಡುವ ಭಾಗ್ಯ ಒದಗಿ ಬಂತು. ನಾವೆಲ್ಲರೂ ಭಸ್ಮಾರತಿ ಮುಗಿಸಿ ಕೃತಾರ್ಥ ಭಾವದೊಂದಿಗೆ ಹೋಟೆಲಿಗೆ ಮರಳಿ ಒಂದಷ್ಟು ಹೊತ್ತು ವಿಶ್ರಾಂತಿ ತೆಗೆದುಕೊಂಡೆವು. ಬೆಳಗಿನ ಉಪಾಹಾರದ ಬಳಿಕ ಮಹಾಕಾಲೇಶ್ವರದ ಸುತ್ತಮುತ್ತಲಿನ ಪ್ರಮುಖ ದೇವಸ್ಥಾನವಾದ ಮಹಾಕಾಳಿಕಾ ಶಕ್ತಿಪೀಠ, ಸಾಂದೀಪನಿ ಅಶ್ರಮ ಮತ್ತು ಇತರ ವಿಶೇಷ ದೃಶ್ಯಗಳ ವೀಕ್ಷಣೆಗೆಂದು ಹೊರಟೆವು.

    https://roovari.com/wp-content/uploads/2026/04/Video-.mp4

    ಮಧ್ಯಾಹ್ನದ ವಿಶ್ರಾಂತಿಯ ನಂತರ ನಾವು ಹೋಗಿದ್ದು ಕಾರ್ಕೋಟಕೇಶ್ವರ ಮಹಾದೇವ, ಜಗನ್ಮಾತೆ ಮತ್ತು ಚಿಂತಾಹರಣ ಗಣೇಶ ಗುಡಿಗಳು ಒಂದೇ ಆವರಣದಲ್ಲಿ ಸ್ಥಿತಗೊಂಡಿರುವ ಒಂದು ದೇವಾಲಯಕ್ಕೆ. ನಗರದ ಮಧ್ಯೆ ಇರುವ ಚಿಕ್ಕದಾದ ಒಂದು ಜಾಗವದು. ಗುಡಿಗಳ ಮುಂಭಾಗದಲ್ಲಿ ಎರಡು ಬತ್ತಿ ಹಾಕಿ ಉರಿಸುವ ಬೃಹತ್ ದೀಪಸ್ತಂಭಗಳಿವೆ. ಮುಸ್ಸಂಜೆ ಹೊತ್ತಿಗೆ ಇಬ್ಬರು-ಮೂವರು ‘ಟಕಟಕಾ’ ಎಂದು ಮೇಲಕ್ಕೆ ಹತ್ತಿ ‘ಚಕಚಕನೆ’ ಬತ್ತಿಗಳನ್ನು ಉರಿಸಿ ದೀಪಗಳನ್ನು ಬೆಳಗಿಸುವ ಸುಂದರ ದೃಶ್ಯವನ್ನು ವೀಕ್ಷಿಸಲು ಜನಜಂಗುಳಿ ನೆರೆದಿರುತ್ತದೆ.

    ಮುಂದೆ ನಾವು ‘ಮಹಾಕಾಲ-ಮಹಾಲೋಕ’ ಹೊಸದಾಗಿ ನಿರ್ಮಿಸಿದ ಬೃಹತ್ ಕಾರಿಡಾರ್ ನೋಡಲು ಹೋದೆವು. ದಾರಿಯಲ್ಲಿ ಕಾರಿಡಾರಿಗೆ ಸೇರಿದಂತಿದ್ದ ‘ರುದ್ರ ಸರೋವರ’ ಗಮನ ಸೆಳೆಯಿತು. ಕಾರಿಡಾರ್ ಸುಂದರವಾದ ಶಿಲ್ಪಕಲೆಗಳಿರುವ ಕಂಬಗಳಿಂದಲೂ ಮೂರ್ತಿಗಳಿಂದಲೂ ಝಗಮಗಿಸುತ್ತಿದೆ. ಅಲ್ಲೇ ಇನ್ನೊಂದು ಬದಿಯಲ್ಲಿ ಪುರಾಣದ ಲೋಕದ ವಾತಾವರಣವನ್ನು ಮರುಸೃಷ್ಟಿಸಿದ ಮಹಾಕಾಲನ ಮೂರ್ತಿಗಳ ಸುತ್ತಲೂ ಇರುವ ಋಷಿಮುನಿಗಳ ಶಿಲ್ಪಗಳು ಮತ್ತು ಅವರಿಗೆ ಸಂಬಂಧ ಪಟ್ಟ ಕಥೆಗಳನ್ನು ಒರೆಯುವ ಉಬ್ಬುಚಿತ್ರಗಳು ಕಣ್ಣು ತುಂಬಿಕೊಳ್ಳುತ್ತವೆ. ಒಂದೆಡೆ ಮಹಾಕಾಲನ ಕುರಿತಾದ ಲೇಸರ್ ಚಿತ್ರದ ಪ್ರದರ್ಶನ ನಡೆಯುತ್ತಿತ್ತು. ಅದನ್ನು ನೋಡಿ ಮುಗಿಸಿ ನಾವು ಮಹಾಕಾಲೇಶ್ವರನಿಗೆ ಮಾಡುವ ಭಸ್ಮಾರತಿಯನ್ನು ತೋರಿಸುವ ಒಂದು virtual film show ನೋಡಿದೆವು. ರೂ.200/- ಅದರ ಛಾರ್ಜ್. ಅದಂತೂ ಸೂಪರ್ ಆಗಿತ್ತು.‌ ಭಸ್ಮಾರತಿಯ ಪ್ರತಿಯೊಂದು ಹಂತವನ್ನೂ ಎಳೆ ಎಳೆಯಾಗಿ ತೋರಿಸಿದ ಆ 3D filmನ್ನು ತೀರಾ ಹತ್ತಿರದಿಂದ ನೋಡಿ ತುಂಬಾ ಖುಷಿಯಾಯ್ತು. ಅವರು ಹನ್ನೆರಡು ಜ್ಯೋತಿರ್ಲಿಂಗಗಳನ್ನು ತೋರಿಸುವ ಇನ್ನೂ ಒಂದು 3D film ಕೂಡಾ ತೋರಿಸಿದರು. ಎಲ್ಲವನ್ನೂ ನೋಡಿ ಮುಗಿಸಿ ಹೋಟೆಲಿಗೆ ಬಂದು ಮುಟ್ಟಿದಾಗ ಹತ್ತು ಗಂಟೆಯಾಗುತ್ತ ಬಂದಿತ್ತು. ರೆಸ್ಟೋರೆಂಟ್ ಕ್ಲೋಸ್ ಆಗುವ ಸಮಯವಾಗುತ್ತ ಬಂದಿತ್ತು. ನಾವು ಊಟ ಮುಗಿಸಿ ರೂಮು ಸೇರಿದೆವು.

    https://roovari.com/wp-content/uploads/2026/04/Video-1-.mp4

    ನಾಲ್ಕನೆಯ ಮತ್ತು ಕೊನೆಯ ದಿನ : ಬೆಳಗ್ಗೆ ಒಂಬತ್ತು ಗಂಟೆಗೆ ಉಪಾಹಾರ ಮುಗಿಸಿ ನಾವು ಉಜ್ಜಯಿನಿಯಿಂದ ಇಂದೋರ್ ಗೆ ಹೊರಟೆವು.‌ ದಾರಿಯಲ್ಲಿ ಅಲ್ಲಲ್ಲಿ ನಿಂತು ಪ್ರಮುಖವೆನ್ನಿಸಿದ ದೇವಸ್ಥಾನಗಳನ್ನು ಸಂದರ್ಶಿಸಿದೆವು. ಮೊದಲು ಉಜ್ಜಯಿನಿಯಿಂದ ಹೆಚ್ಚು ದೂರವಿಲ್ಲದ ಶನೀಶ್ವರ ಮತ್ತು ನವಗ್ರಹ ಮಂದಿರಕ್ಕೆ. ಇಲ್ಲಿ ಮುಖ್ಯ ದೇವತೆ ಶನೀಶ್ವರನಾದರೂ ಬುಧ, ಶುಕ್ರ, ಮಂಗಳ, ಸೂರ್ಯ, ಚಂದ್ರ, ಭೌಮ, ರಾಹು, ಕೇತು ಮೊದಲಾದ ನವಗ್ರಹಗಳಿಗೆ ಪ್ರತ್ಯೇಕ ಗುಡಿಗಳಿವೆ. ಅಲ್ಲಿಂದ ಮುಂದೆ ನಾವು ಉಲ್ಟಾ ಹನುಮಾನ್ ದೇವಸ್ಥಾನಕ್ಕೆ ಹೋದೆವು. ಅಲ್ಲಿ ತಲೆಕೆಳಗಾಗಿ ನಿಂತ ಹನುಮಾನ್ ಮೂರ್ತಿಯ ಜತೆಗೆ ಶ್ರೀರಾಮ-ಸೀತೆ-ಲಕ್ಷ್ಮಣರು ಮತ್ತು ಶಿವಪಾರ್ವತಿಯರ ಮೂರ್ತಿಗಳೂ ಇದ್ದವು. ಈ ದೇವಸ್ಥಾನದಲ್ಲಿ ತಲೆಕೆಳಗಾಗಿ ನಿಂತ ಹನುಮನ ಮೂರ್ತಿಯ ಹಿಂದೆ ಒಂದು ಕಥೆಯಿದೆ. ರಾಮಾಯಣದಲ್ಲಿ ರಾಮ-ರಾವಣರ ನಡುವೆ ಯುದ್ಧವು ನಡೆಯುತ್ತಿದ್ದಂತೆ ರಾವಣನ ಸಹೋದರ ಅಹಿರಾವಣನು (ಪಾತಾಳ ಲೋಕದ ರಾಜ) ತನ್ನ ಮಂತ್ರಬಲದಿಂದ ರಾಮಲಕ್ಷ್ಮಣರನ್ನು ಪಾತಾಳಕ್ಕೆ ಕದ್ದೊಯ್ಯುತ್ತಾನೆ. ಆಗ ಹನುಮನು ಪಾತಾಳಕ್ಕೆ ಧುಮುಕಿ ರಾಮಲಕ್ಷ್ಮಣರನ್ನು ರಕ್ಷಿಸಿ ತಿರುಗಿ ಕರೆತರುತ್ತಾನೆ. ಹನುಮನು ತಲೆಕೆಳಗಾಗಿ ಧುಮುಕಿದ್ದರಿಂದ ಅವನ ತಲೆಕೆಳಗಾದ ಮೂರ್ತಿಯನ್ನು ಇಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿನ ಹನುಮನಿಗೆ ಪಾತಾಳ ವಿಜಯ ಹನುಮಾನ್ ಎಂಬ ಹೆಸರೂ ಇದೆ. ಈ ದೇವಸ್ಥಾನವು ಇಂದೋರ್ ಜಿಲ್ಲೆಯ ಸಾನ್ವರ್ ಎಂಬಲ್ಲಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ದೇವಸ್ಥಾನವಿದು.

    ನೇರವಾಗಿ ಹೋಗಿ ಇಂದೋರ್ ತಲುಪಿ ಅಲ್ಲಿನ ‘ಸಜನಾರಾ ಗಣೇಶ ಮಂದಿರ’ಕ್ಕೆ ಹೋದೆವು. ಇದು ಹೆಸರಿಗೆ ಗಣೇಶ ಮಂದಿರವಾದರೂ ಗಣೇಶನ ಜತೆಗೆ ದುರ್ಗೆ, ಮಹಾದೇವ, ರಾಧಾಕೃಷ್ಣ, ಹನುಮಾನ್, ಶಿರ್ಡಿ ಸಾಯಿ ಬಾಬಾ, ಶ್ರೀರಾಮ-ಸೀತೆ-ಲಕ್ಷ್ಮಣ, ಶನೀಶ್ವರ, ಹಿಂಗ್ಲಾಜ್ ಮಾತಾ, ಸಂತೋಷಿಮಾತಾ, ನರ್ಮದಾ ಮಾತೆಯರ ಪ್ರತ್ಯೇಕ ಗುಡಿಗಳು ಸುತ್ತಲೂ ಇದ್ದವು. ಎಲ್ಲ ಮೂರ್ತಿಗಳೂ ಭರ್ಜರಿ ಅಲಂಕಾರಗಳಿಂದ ಶೋಭಿಸುತ್ತಿದ್ದವು. ಎಲ್ಲ ಮಂದಿರಗಳನ್ನೂ ನೋಡಿ ಮುಗಿಸಿದಾಗ ಆಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ನಾವು ಅಲ್ಲೇ ಹತ್ತಿರವಿದ್ದ ಚಿಕ್ಕದೊಂದು ಹೋಟೆಲಿನಲ್ಲಿ ಊಟ ಮುಗಿಸಿ ನಂತರ ನಗರ ಕೇಂದ್ರಭಾಗದಲ್ಲಿರುವ ‘ಅನ್ನಪೂರ್ಣಾ ಮಾತೆಯ ಮಂದಿರ’ ನೋಡಲು ಹೋದೆವು.

    ಅನ್ನಪೂರ್ಣಾ ಮಾತೆಯ ಮಂದಿರವು ಭವ್ಯವಾಗಿತ್ತು. ಅಲ್ಲಿ ಒಳಗೂ ಹೊರಗೂ ತುಂಬಿಕೊಂಡ ಶಿಲ್ಪಕಲೆ ನೋಡಿ ನಾನು ಬೆರೆಗಾದೆ. ತೆರೆದೇ ಇರುವ ಗರ್ಭಗುಡಿಯಲ್ಲಿ ನಡುವೆ ಅನ್ನಪೂರ್ಣೆ, ಎಡಬದಿಯಲ್ಲಿ ಗಾಯತ್ರಿ ಮತ್ತು ಬಲಬದಿಯಲ್ಲಿ ಮಹಾಕಾಳಿಯರ ಅಲಂಕೃತ ಮಾರ್ಬಲ್ ವಿಗ್ರಹಗಳ ಥಳಥಳಿಸುತ್ತಿದ್ದವು. ಗರ್ಭಗುಡಿಯ ಎದುರು ರಾಮಾಯಣ-ಮಹಾಭಾರತ-ಭಾಗವತಗಳ ಪೌರಾಣಿಕ ಕಥೆಗಳನ್ನು ಬಿತ್ತರಿಸುವ ಮಾರ್ಬಲ್ ಶಿಲ್ಪಗಳಿಂದ ತುಂಬಿರುವ 44 ದಪ್ಪದ ಚೌಕ ಕಂಬಗಳು, ಗರ್ಭಗುಡಿಯ ಹೊರಭಾಗದಲ್ಲೂ ಸುತ್ತಲೂ ಪೌರಾಣಿಕ ಪಾತ್ರಗಳ ಮೂರ್ತಿಗಳು, ದೇವಾಲಯದ ಹೊರಸುತ್ತಿನಲ್ಲೂ ಅದೇ ರೀತಿಯ ಶಿಲ್ಪಕಲೆ, ಹೆಬ್ಬಾಗಿಲ ಗೋಪುರದಲ್ಲೂ ಶಿಲ್ಪಕಲೆ- ಹೀಗೆ ಈ ದೇವಸ್ಥಾನವು ಶಿಲ್ಪಕಲೆಗೆ ಪ್ರಸಿದ್ಧವಾದ ಯಾವುದೇ ಹೆಸರಾಂತ ದೇವಾಲಯಗಳಿಗೆ ಯಾವುದರಲ್ಲೂ ಕಡಿಮೆಯಿಲ್ಲ ಅನ್ನಿಸಿತು. ಅನ್ನಪೂರ್ಣಾ ದೇವಿಯ ಎಡಭಾಗದಲ್ಲಿ ಒಂದು ಕಾಶಿ ವಿಶ್ವೇಶ್ವರನ ಗುಡಿಯಿತ್ತು.‌ ಅಲ್ಲಿ ವಿಶ್ವೇಶ್ವರನ ಮೂರ್ತಿ ಮತ್ತು ಲಿಂಗ ಮಾತ್ರವಲ್ಲದೆ ಎಲ್ಲಾ ಹನ್ನೆರಡು ಜ್ಯೋತಿರ್ಲಿಂಗಗಳ ಭಾವಚಿತ್ರಗಳನ್ನು ಗೋಡೆಗೇರಿಸಿದ್ದರು. ನಾವು ದೇವರಿಗೆ ನಮಿಸಿ ಹೊರಗೆ ಉಚಿತವಾಗಿ ಕೊಡುತ್ತಿದ್ದ ಲೆಮನ್ ಟೀ ಕುಡಿದೆವು.

    ಆಗಲೇ ಗಂಟೆ ಐದೂವರೆಯಾಗಿತ್ತು. ನಾವು ಒಂದೆಡೆ ವಾಹನ ನಿಲ್ಲಿಸಿ ಚಹ ಕುಡಿದೆವು. ವಿಮಾನ ನಿಲ್ದಾಣಕ್ಕೆ ಎರಡು ಗಂಟೆ ಮೊದಲೇ ಹೋಗಬೇಕಾಗಿದ್ದುದರಿಂದ ನಮ್ಮ ವಾಹನ ನೇರವಾಗಿ ಇಂದೋರ್ ಏರ್ ಪೋರ್ಟ್ ನತ್ತ ಚಲಿಸಿತು. ನಮ್ಮ ಟೂರ್ ನ್ನು ಯಶಸ್ವಿಯಾಗಿ ಯಾರಿಗೂ ಯಾವ ರೀತಿಯಲ್ಲೂ ಬೇಸರವಾಗದಂತೆ ನಡೆಸಿ ಕೊಟ್ಟ ಮನೋಜ್ ಮತ್ತು ಹರೀಶ್ ಅವರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿ ನಾವು ಪರಸ್ಪರ ಗುಡ್ ಬೈ ಹೇಳಿದೆವು.

    ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು

    article baikady roovari sculpture
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಕನ್ನಡ ಝೇಂಕಾರ’ | ಏಪ್ರಿಲ್ 25
    Next Article ಮೈಸೂರಿನ ಕಿರು ರಂಗಮಂದಿರದಲ್ಲಿ ‘ಪಾರ್ಟಿ’ ಕನ್ನಡ ನಾಟಕ ಪ್ರದರ್ಶನ | ಏಪ್ರಿಲ್ 25 ಮತ್ತು 26
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.