ಭದ್ರಾವತಿ : ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾಚನಾಭಿರುಚಿ ಕಮ್ಮಟ ಸಾಹಿತ್ಯ-ಸಂವಾದ-ಕುಶಲತೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ದಿನಾಂಕ 30-11-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಡಿ. ಮಂಜುನಾಥ್ “ನಿತ್ಯದ ಸಮಾಚಾರಗಳನ್ನು ತಿಳಿಸುವ ಹಾಗೂ ಜನರಲ್ಲಿ ಜ್ಞಾನ ಬೆಳಸುವ ಪತ್ರಿಕೆಗಳನ್ನು ಕೊಳ್ಳಲು ನಿರಾಸಕ್ತಿವಹಿಸುವುದು ದುರಂತ. ದಿನಸಿ ಮತ್ತು ಆಹಾರಗಳಂತೆಯೇ ಪತ್ರಿಕೆಗಳು ನಮ್ಮ ಜೀವನದ ಭಾಗವಾಗಬೇಕು. ಆಗ ಮಾತ್ರ ಜ್ಞಾನಯುತ ಸಮಾಜದ ನಿರ್ಮಾಣ ಸಾಧ್ಯ. ಸಾಹಿತ್ಯ ಕಾರ್ಯಕ್ರಮಗಳು ಉಚಿತವಾಗಿರುವುದರಿಂದ ಜನರಲ್ಲಿ ನಿರ್ಲಕ್ಷ್ಯವಿದೆ. ಸಾಹಿತ್ಯ ಕಾರ್ಯಕ್ರಮಗಳು ಜ್ಞಾನ ಹಂಚುವ ಕಾರ್ಯಕ್ರಮಗಳು. ಉಚಿತಗಳು ನಮ್ಮ ಸ್ವಾವಲಂಬನೆ ಕಸಿದುಕೊಳ್ಳುತ್ತವೆ. ವಿದ್ಯಾರ್ಥಿನಿಲಯಗಳಲ್ಲಿ ಕೇವಲ ಊಟ, ಬಟ್ಟೆ ಹಾಗು ದೈನಂದಿನ ಬಳಕೆಯ ವಸ್ತುಗಳನ್ನು ನೀಡುವುದರ ಜೊತೆಗೆ ಸಾಹಿತ್ಯ ಜ್ಞಾನ ನೀಡುವುದು ಅಗತ್ಯ. ಇಂಥದೊಂದು ಪ್ರಯತ್ನದ ಫಲವಾಗಿ ವಾಚನಾಭಿರುಚಿ ಕಮ್ಮಟ ನಡೆಸಲಾಗುತ್ತಿದೆ” ಎಂದರು.
ವೇದಿಕೆಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನಿಲಯಪಾಲಕ ಸಿ.ಎಂ.ರಮೇಶ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಸುಧಾಮಣಿ, ಸಾಹಿತಿಗಳಾದ ಪ್ರೊ.ಸಿರಾಜ್ ಅಹಮದ್, ಡಾ.ಹೆಚ್.ಟಿ.ಕೃಷ್ಣಮೂರ್ತಿ, ಲೇಖಕ ಡಾ.ಕೆ.ಜಿ. ವೆಂಕಟೇಶ್ ಉಪಸ್ಥಿತರಿದ್ದರು.
ಕಾವ್ಯ-ಓದು-ಅಂತರಾಳ-ವಿವೇಕ, ಕಥೆ-ಗ್ರಹಿಕೆ-ಅರಿವು-ಅಭಿವ್ಯಕ್ತಿ ಮತ್ತು ಮುದ್ರಣ ಮಾಧ್ಯಮ ಅಬ್ಬರ ಅಲ್ಲ ಅಭಿವೃತ್ತಿ ಒಟ್ಟು ಮೂರು ಗೋಷ್ಠಿಗಳು ಜರುಗಿದವು. ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಪ್ರೊ. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಎನ್. ಬಾಬು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ನಾಗರತ್ನ ವಾಗೀಶ್ ಕೋಠಿ ಪ್ರಾರ್ಥಿಸಿ, ಸುಮತಿ ಕಾರಂತ್, ಕೋಕಿಲ, ಮಾಯಮ್ಮ ತಂಡದವರು ನಾಡಗೀತ ಹಾಡಿದರು.