ಮಂಗಳೂರು : ಕಲಾಭಿ (ರಿ.) ಮಂಗಳೂರು ವತಿಯಿಂದ ಆಯೋಜಿಸಲಾದ ಮಕ್ಕಳ ವೃತ್ತಿಪರ ರಂಗಭೂಮಿ ಕಾರ್ಯಾಗಾರ “ಅರಳು 2026” ಇದರ ಸಮಾರೋಪ ಸಮಾರಂಭವು ದಿನಾಂಕ 23 ಏಪ್ರಿಲ್ 2026ರಂದು ಬೊಂದೆಲ್‌ನಲ್ಲಿರುವ ಕಲಾಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು.
ಕಲಾಗ್ರಾಮವು ಕಳೆದ ಒಂದು ವರ್ಷದಿಂದ ಕಲಾವಿದರು ನಿರಂತರವಾಗಿ ತಮ್ಮನ್ನು ಕಲೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕಲಾವಿದರ ಮನೆಯಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆ ಮೆರೆದಿದ್ದು, ಅವರು ಆತ್ಮವಿಶ್ವಾಸ ಮತ್ತು ಸೃಜನಾತ್ಮಕತೆಯೊಂದಿಗೆ ವೇದಿಕೆಯ ಮೇಲೆ ಅದ್ಭುತವಾಗಿ ಪ್ರದರ್ಶನ ನೀಡಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಐ ಶಭಾಷ್’ ನಾಟಕವನ್ನು ಶ್ರೀ ಚರಿತ್ ಸುವರ್ಣ ನಿರ್ದೇಶಿಸಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತು.

ಕಾರ್ಯಕ್ರಮವು ಮಕ್ಕಳ ರಂಗ ಸಂಗೀತದೊಂದಿಗೆ ಪ್ರಾರಂಭಗೊಂಡಿತು. ಸಭಾ ಕಾರ್ಯಕ್ರಮದಲ್ಲಿ ರಂಗಭೂಮಿ ಮತ್ತು ಚಲನಚಿತ್ರ ನಟ ಶ್ರೀ ಮೋಹನ್ ಶೇಣಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ಗಾಯಕರಾಗಿರುವ ಶ್ರೀ ಮೈಮ್ ರಾಮದಾಸ್ ಇವರು ಸಮಾರೋಪ ನುಡಿಗಳನ್ನಾಡಿದರು. ಗೌರವಾನ್ವಿತ ಅತಿಥಿಗಳಾಗಿ ದೇರಳಕಟ್ಟೆ ಏನಪೋಯ ಮೆಡಿಕಲ್ ಕಾಲೇಜಿನ ಹೆಲ್ತ್ ಇನ್ಸ್ಪೆಕ್ಟರ್ ಶ್ರೀಮತಿ ರಮ್ಯಾ ಪ್ರದೀಪ್ ಕುಮಾರ್ ಹಾಗೂ ನ್ಯೂ ಓಷನ್ ಕಿಡ್ಸ್ ಡಾನ್ಸ್ ಇನ್ಸ್ಟಿಟ್ಯೂಟ್ ಇದರ ನೃತ್ಯ ನಿರ್ದೇಶಕರು ಹಾಗೂ ಸಂಯೋಜಕರು ಶ್ರೀ ಚರಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅರಳು 2026ರ ‘ಐ ಶಭಾಷ್’ ನಾಟಕದ ನಿರ್ದೇಶಕರಾದ ಶ್ರೀ ಚರಿತ್ ಸುವರ್ಣ ಹಾಗೂ ಕಲಾಭಿ (ರಿ.) ಮಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಸುರೇಶ್ ಬಿ. ವರ್ಕಾಡಿ ಇವರು ವೇದಿಕೆಯಲ್ಲಿ ಉಪಸ್ಥಿತರಾಗಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆಗಳನ್ನು ಪ್ರಶಂಶಿಸುವ ನಿಟ್ಟಿನಲ್ಲಿ ಅರಳು ಸಂಚಾರದಲ್ಲಿ ಭಾಗವಹಿಸಿ ಅದ್ಭುತವಾಗಿ ಅಭಿನಯಿಸಿದ ಎರಡು ತಂಡಗಳಿಗೆ ಉತ್ತಮ ಬಹುಮಾನವನ್ನು ಹಾಗೂ ಪ್ರಾಮಿಸಿಂಗ್ ಆರ್ಟಿಸ್ಟ್ – ಶ್ರಾವ್ಯ ಶ್ರೀಯನ್, ಬೆಸ್ಟ್ ಪರ್ಫಾರ್ಮರ್ – ಮಯಾಂಕ್ ಪಿ. ಕುಮಾರ್, ಡೆಡಿಕೇಟೆಡ್ ಆರ್ಟಿಸ್ಟ್ – ಜೀತ್ ವಿ. ದೇವಾಡಿಗ, ಸ್ಟಾರ್ ಆಫ್ ಸ್ಟೇಜ್ – ನಿಕಿಲನ್ ಎಸ್., ಅರಳು ಕ್ರಿಯೇಟಿವ್ ಆರ್ಟಿಸ್ಟ್ – ಪ್ರತೀಷಾ ಕೆ.ಜೆ., ಎಮರ್ಜಿಂಗ್ ಆಕ್ಟರ್ – ರಿಷಿಕಾ ಡಿ. ದೇವಾಡಿಗ ಹೀಗೆ ಮಕ್ಕಳಿಗೆ ಹಲವಾರು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು.
ಅತಿಥಿಗಳು ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿ, ಕಲಾಭಿಯ ಕಾರ್ಯವನ್ನು ಪ್ರಶಂಸಿಸಿದರು. ಕಾರ್ಯಕ್ರಮವನ್ನು ಸ್ಕಂದ ಸುಗಮವಾಗಿ ನಿರೂಪಿಸಿ, ಅಸ್ಮಿತಾ ಸ್ವಾಗತಿಸಿ, ಶ್ರೀ ಉಜ್ವಲ್ ಯು.ವಿ. ವಂದನಾರ್ಪಣೆ ಸಲ್ಲಿಸಿದರು. ಪ್ರೇಕ್ಷಕರು ಮಕ್ಕಳ ಪ್ರದರ್ಶನಗಳಿಗೆ ಚಪ್ಪಾಳೆ ತಟ್ಟುತ್ತಾ ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ಕಲಾಭಿಯ ಮಕ್ಕಳ ರಂಗಭೂಮಿ ಅಭಿವೃದ್ದಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
