ತುಮಕೂರು : ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ‘ಚಿಣ್ಣರ ಬಣ್ಣದ ಶಿಬಿರ’ದ ಸಮಾರೋಪ ಸಮಾರಂಭವು ತುಮಕೂರು ತಾಲೂಕಿನ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ದಿನಾಂಕ 10-05-2024ರಂದು ಸಂಪನ್ನಗೊಂಡಿತು. ಈ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಮಕ್ಕಳ ಹಕ್ಕುಗಳ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡುತ್ತಾ “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಬಹಳ ಮುಖ್ಯ. ಡಮರುಗ ಸಂಸ್ಥೆ ಗ್ರಾಮೀಣ ಮಕ್ಕಳನ್ನು ಗುರಿಯಾಗಿಸಿಕೊಂಡು ಉಚಿತವಾಗಿ ರಂಗಶಿಬಿರ ನಡೆಸಿಕೊಂಡು ಬರುತ್ತಿರುವುದು ಅಭಿನಂದರಾರ್ಹ” ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಸುಧಾ, “ನಾನು 40 ವರ್ಷ ದೆಹಲಿ ಮತ್ತು 10 ವರ್ಷ ಬೆಂಗಳೂರಿನಲ್ಲಿ ಇದ್ದು ರಂಗ ತಂಡಗಳ ನಿರಂತರ ಸಂಪರ್ಕದಲ್ಲಿದ್ದುಕೊಂಡು ಬಂದವಳು. ಆದರೆ ಗ್ರಾಮೀಣ ಮಟ್ಟದಲ್ಲಿ ಒಂದು ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೆ ಪೂರ್ಣಾವಧಿ ರಂಗಶಿಬಿರವನ್ನು ಆಯೋಜಿಸಿರುವುದು ತೀರಾ ಅಪರೂಪ. ಆದ್ದರಿಂದಲೇ ವಿಷಯ ತಿಳಿದು ಒಂದು ದಿನ ಮುಂಚಿತವಾಗಿ ಬಂದು ಶಿಬಿರದಲ್ಲಿ ಭಾಗವಹಿಸಿ ಅಂತರಾಳದಿಂದ ಹೇಳುತ್ತಿದ್ದೇನೆ. ಇದೊಂದು ಅದ್ವಿತೀಯ ರಂಗಕಾರ್ಯ. ಇದರ ರೂವಾರಿ ಮೆಳೇಹಳ್ಳಿ ದೇವರಾಜ್ ಮತ್ತು ತಂಡಕ್ಕೆ ಶುಭವಾಗಲಿ” ಎಂದರು. ಸಭಾ ಸಮಾರಂಭದ ನಂತರ ನಾಲ್ಕು ಕಥೆಗಳ ‘ಕಥಾಲೋಕ’ ಪ್ರಯೋಗಗೊಂಡಿತು.
ಮೊದಲ ಕಥೆಯಲ್ಲಿ ದಿನನಿತ್ಯದ ಅಗತ್ಯತೆಗೆ ನಾವು ವಿದೇಶಗಳನ್ನೇ ಅವಲಂಭಿಸಿ ಅವುಗಳು ಇಲ್ಲದಿದ್ದರೆ ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಎಲ್ಲರೂ ದೇಶೀಯತೆಗೆ ವಾಲಬೇಕಿದೆ ಎಂಬ ಸಂದೇಶವುಳ್ಳ ‘ಉದ್ಯಾನವನ’, ಆಳುವ ವರ್ಗಗಳು ಯಾವ ವಿಷಯಕ್ಕೆ ಆದ್ಯತೆ ಕೊಡಬೇಕು ಯಾವ ವಿಷಯಕ್ಕೆ ಆದ್ಯತೆ ಕೊಡಬಾರದೆಂಬ ಸಾಮಾನ್ಯ ಜ್ಞಾನವಿಲ್ಲದೇ ಸಾಮಾನ್ಯ ಜನರ ಜೀವನ ದುಸ್ಥಿತಿಗಿಳಿದಿದೆ ಎಂಬ ಸಂದೇಶ ಹೊತ್ತ ‘ನ್ಯಾಯಸ್ಥಾನ’ ಹಾಗೂ ರಕ್ಷಣಾ ಇಲಾಖೆ ಸಾಮಾನ್ಯರ ಜೀವನದಲ್ಲಿ ಯಾಂತ್ರಿಕವಾಗಿ ಸ್ಪಂದಿಸುತ್ತಿದೆ. ಮೃಗೀಯ ವರ್ತನೆ ಇಲಾಖೆಯ ನಂಬಿಕೆಯನ್ನೇ ಪ್ರಶ್ನಿಸುವಂತಿದೆ. ಅದರಲ್ಲಿನ ಒಂದು ಮಗುವಿನ ಮಾತಿನ೦ತೆ ಮೃಗೀಯ ಮನಸ್ಸಿನ ಮನುಷ್ಯನಿಗಿಂತ ಮಗುವಿನ ಮನಸ್ಸಿನ ಪ್ರಾಣಿಗಳೇ ಮೇಲು ಎಂಬಂತಾಗಿದೆ. ಕೊನೆಯದಾಗಿ ಗುಮಾಸ್ತರು ಮನಸ್ಸು ಮಾಡಿದರೆ ಯಾರನ್ನಾದರೂ ಯಾಮಾರಿಸಿ ಗೊಂದಲ ಸೃಷ್ಟಿಸುತ್ತಾರೆಂಬ ‘ಯಮ ವರ್ಸಸ್ ಗುಮಾಸ್ತ’ ಎಂಬ ನಾಲ್ಕು ಪ್ರಯೋಗಗಳು ಜನರ ಮನಸೂರೆಗೊಂಡವು. ಈ ನಾಟಕಗಳನ್ನು ಮೆಳೇಹಳ್ಳಿ ದೇವರಾಜ್ ರಚಿಸಿ ನಿರ್ದೇಶಿಸಿದ್ದು 52 ಮಕ್ಕಳು ಲವಲವಿಕೆಯಿಂದ ಅಭಿನಯಿಸಿದರು.