ಮಂಗಳೂರು : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಜೂನ್ 12ರಿಂದ 26ರವರೆಗೆ ನಡೆದ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರವು ದಿನಾಂಕ 26 ಜೂನ್ 2026ರಂದು ಶಿಲ್ಪಗಳ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು.

ಮುಖ್ಯ ಅತಿಥಿ ಮಂಗಳೂರಿನ ಪ್ರೊವಿಟ್ ಫುಡ್ಸ್ ಪ್ರೈ.ಲಿ. ಇದರ ಮಾಲಕ ಹಾಗೂ ಕಲಾಭಿಮಾನಿ ವಿನ್ಸೆಂಟ್ ಕುಟಿನ್ಹಾ ರಿಬ್ಬನ್ ಕತ್ತರಿಸುವ ಮೂಲಕ ಶಿಲ್ಪಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ “ನೂರಾರು ವರ್ಷಗಳ ಹಿಂದೆ ನಿರ್ಮಿಸಲಾದ ಪ್ರಾಚೀನ ಶಿಲ್ಪಗಳು ಮತ್ತು ಗುಹಾಚಿತ್ರಗಳು ಇಂದಿಗೂ ಜನರೊಂದಿಗೆ ಸಂವಹನ ನಡೆಸುತ್ತಿವೆ. ಇದು ಕರಕುಶಲತೆಯ ಅಜರಾಮರ ಮೌಲ್ಯವನ್ನು ಸಾಬೀತುಪಡಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಕಲೆಯ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಬೆಳಕು ಚೆಲ್ಲಿದ ಅವರು ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ರಕ್ಷಿಸುವ ಅಗತ್ಯದ ಬಗ್ಗೆ ತಿಳಿ ಹೇಳಿದರು”.


ಶಿಲ್ಪಗಳಲ್ಲಿ 15 ಅಡಿ ಎತ್ತರದ ಕೈಯಲ್ಲಿ ಎತ್ತಿ ಹಿಡಿದ ಗುಮಟೆ, ಹಾಡುತ್ತಿರುವ ಎರಿಕ್ ಒಝೇರಿಯೊ, ಓರ್ವ ಕವಿ, ಮೀನು ಹಿಡಿಯುವ ಖಾರ್ವಿ, ಅಂಬಿಗ, ದಫ್ ನುಡಿಸುವ ದಾಲ್ದಿ, ವಯೊಲಿನ್, ವೀಣೆ, ಟ್ರಂಪೆಟ್, ಮಾಂಡೊ ಮತ್ತು ಬಾಯ್ಲಾ ನೃತ್ಯಗಾರರು ಹಾಗೂ ನಾಟಕಕಾರರ ಶಿಲ್ಪಗಳನ್ನು ರಚಿಸಲಾಗಿದೆ. ಅದೇ ರೀತಿ ಗೋಡೆ ಮೇಲೆ 6 ಉಬ್ಬು ಶಿಲ್ಪಗಳನ್ನು ರಚಿಸಲಾಗಿದೆ. ಗೋವಾದಿಂದ ಮಂಗಳೂರಿಗೆ ವಲಸೆ, ಕುಡುಮಿಗಳ ಹಗ್ಗದಾಟ, ಮೊಂತಿ ಹಬ್ಬ, ನವಾಯತಿ ಮುಸ್ಲಿಮರು, ರಥ ಬೀದಿಯ ತೇರು ಮತ್ತು ಗೋವಾದ ಕಾರ್ನಿವಲ್ ಸಂಭ್ರಮ ಕಲಾಂಗಣಕ್ಕೆ ಮೆರುಗು ನೀಡಿವೆ.






ಸಮಾರೋಪ ಭಾಷಣ ಮಾಡಿದ ಕೇಂದ್ರ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿ. ಸು. ಕೃಷ್ಣಶೆಟ್ಟಿ ಅವರು, “ಕಲೆಗಳಲ್ಲೆಲ್ಲಾ ಶಿಲ್ಪಕಲೆಯೇ ಶ್ರೇಷ್ಠ ಎಂಬ ಅರ್ಥವನ್ನು ನೀಡುವ ಕಲಾನಾಂ ಪ್ರವರಂ ಶಿಲ್ಪಂ ಎಂಬ ಪ್ರಾಚೀನ ಉಕ್ತಿಯನ್ನು ಉಲ್ಲೇಖಿಸುವ ಮೂಲಕ ಶಿಲ್ಪಕಲೆಯ ಶ್ರೇಷ್ಠತೆಯ ಬಗ್ಗೆ ಮಾತನಾಡಿದರು. ಭಾರತದ ಭವ್ಯವಾದ ದೇವಾಲಯಗಳು, ಸ್ಮಾರಕಗಳು ಮತ್ತು ಕಲಾತ್ಮಕ ಸೃಷ್ಟಿಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತಗಳಾಗಿ ನಿಂತಿವೆ. ಭಾರತದಲ್ಲಿ ಸಿಮೆಂಟ್ ಶಿಲ್ಪಕಲೆಯು ತನ್ನದೇ ಆದ ವಿಶೇಷ ಗುರುತನ್ನು ಬೆಳೆಸಿಕೊಂಡಿದೆ. ಶಾಂತಿನಿಕೇತನದ ಪ್ರಸಿದ್ಧ ಸಿಮೆಂಟ್ ಶಿಲ್ಪಗಳಾದ ಸಂತಾಲ್ ಫ್ಯಾಮಿಲಿ ಮತ್ತು ಸುಜಾತಾ ಕಲಾಕೃತಿಗಳು, ಈ ವಿಶಿಷ್ಟ ಕಲಾ ಪ್ರಕಾರವನ್ನು ಪ್ರೇರೇಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ” ಎಂದರು.

ಶಿಬಿರದ ನಿರ್ದೇಶಕ ಶಿವಮೊಗ್ಗ ಜಿಲ್ಲೆಯ ಕೆ. ನಾರಾಯಣ ರಾವ್, ಹಿರಿಯ ಶಿಲ್ಪಿಗಳು ಹಾಗೂ ಸಹಾಯಕ ಶಿಲ್ಪಿಗಳನ್ನು ಆಯೋಜಕರು ಸನ್ಮಾನಿಸಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಸಿ. ರಮೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಆಲ್ವಾರಿಸ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿಬಿರದ ಸಂಚಾಲಕ ಕುಮಾರ್ ವೈ. ಅವರು ವಂದನಾರ್ಪಣೆ ಮಾಡಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
