ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ಇವರ ವತಿಯಿಂದ ಯಕ್ಷಗಾನ ಹೆಜ್ಜೆಗಾರಿಕೆ, ವೇಷಭೂಷಣ ಮತ್ತು ಬಣ್ಣಗಾರಿಕೆಯನ್ನೊಳಗೊಂಡ ಬೇಸಿಗೆ ಶಿಬಿರವು ದಿನಾಂಕ 16 ಏಪ್ರಿಲ್ 2026ರಿಂದ ಆರಂಭಗೊಂಡು ಅದರ ಸಮಾರೋಪ ಸಮಾರಂಭವು ದಿನಾಂಕ 25 ಏಪ್ರಿಲ್ 2026ರಂದು ಆಯೋಜನೆಗೊಂಡಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಹೆಯ ಕುಲಸಚಿವರಾದ ಡಾ. ಪಿ. ಗಿರಿಧರ ಕಿಣಿ ಇವರು ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ “ವಿದ್ಯಾರ್ಥಿಗಳು ತಮ್ಮ ರಜಾ ಅವಧಿಯಲ್ಲಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಅಗತ್ಯತೆಯ ಬಗ್ಗೆ ತಿಳಿಸಿ, ಇದು ಅವರ ಶಾಲಾ ಕಲಿಕೆಯೊಂದಿಗೆ ನಮ್ಮ ಕಲೆ ಹಾಗೂ ಪರಂಪರೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಸಮಯದ ಸದುಪಯೋಗವಾಗುತ್ತದೆ” ಎಂದರು.
ಸಭೆಯ ಅಧ್ಯಕ್ಷತೆಯನ್ನು ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆಯವರು ವಹಿಸಿದ್ದರು. ಸಭೆಯಲ್ಲಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾದ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ, ಶ್ರೀ ಮಂಜುನಾಥ ಮಯ್ಯ ಹಾಗೂ ಶ್ರೀಮತಿ ಮೀನಾಲಕ್ಷಿಣಿ ಅಡ್ಯಂತಾಯ ಹಾಗೂ ಕೇಂದ್ರದ ಗುರುಗಳು ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಸಮರ್ಪಿಸಿದರು. ಆರಂಭದಲ್ಲಿ ಬೇಸಿಗೆ ಶಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಶಿಬಿರಾರ್ಥಿಗಳು ಹಾಗೂ ಪೋಷಕರು ಶಿಬಿರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
