ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ‘ವಿಂಶತಿ ಹಬ್ಬ’ 20ನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 10 ಮೇ 2026ರಂದು ಮಧ್ಯಾಹ್ನ 2-00 ಗಂಟೆಗೆ ಕಾಸರಗೋಡಿನ ಬೀರಂತಬೈಲು ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಡಾ. ಅನಂತ ಕಾಮತ್ ಪ್ರಾಯೋಜಿತ ದಿ. ಹರಿರಾಯ ಕಾಮತ್ ಮತ್ತು ಪ್ರೇಮಾ ಕಾಮತ್ ಸ್ಮರಣಾರ್ಥ ನೀಡುವ ‘ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ಪುರಸ್ಕಾರ’ವನ್ನು ಯಕ್ಷಗಾನ ಕ್ಷೇತ್ರದ ಶ್ರೀ ಪದ್ಮನಾಭ ಶೆಟ್ಟಿ ಮಜಕಾರ, ಶಶಿಕಾಂತ ರಾವ್ ಬೇಕಲ್ ಪ್ರಾಯೋಜಿತ ಎನ್.ಆರ್. ಬೇಕಲ್ ಸ್ಮರಣಾರ್ಥ ಮತ್ತು ಡಾ. ರೆಮ ಅಯ್ಯರ್ ಪ್ರಾಯೋಜಿತ ಡಾ. ಆರ್.ಡಿ. ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಸ್ಮರಣಾರ್ಥ ನೀಡುವ ‘ರಂಗಚಿನ್ನಾರಿ ಪ್ರಶಸ್ತಿ’ಯನ್ನು ರಂಗಭೂಮಿಯ ಜಯಪ್ರಕಾಶ ತೂಮಿನಾಡು ಹಾಗೂ ಹರಿಕಥೆ ಕ್ಷೇತ್ರದ ಶ್ರೀಮತಿ ಮಂಜುಳಾ ಗುರುರಾಜ್ ಇರಾ ಹಾಗೂ ಸುಧಾಕರ ಸಾಲ್ಯಾನ್ ಪ್ರಾಯೋಜಿತ ದಿ. ದೇರಪ್ಪ ಸ್ಮರಣಾರ್ಥ ಮತ್ತು ಡಾ. ರೆಮ ಅಯ್ಯರ್ ಪ್ರಾಯೋಜಿತ ಡಾ. ಆರ್.ಡಿ. ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಸ್ಮರಣಾರ್ಥ ನೀಡುವ ‘ರಂಗಚಿನ್ನಾರಿ ಯುವ ಪ್ರಶಸ್ತಿ’ಯನ್ನು ಕ್ರೀಡಾ ಕ್ಷೇತ್ರದ ದೇವಾಂಶ ರೈ ಮತ್ತು ಸಂಗೀತ ಕ್ಷೇತ್ರದ ಅನ್ವಿತಾ ಟಿ. ಇವರಿಗೆ ನೀಡಿ ಸನ್ಮಾನಿಸಲಾಗುವುದು.
ಮಧ್ಯಾಹ್ನ 2-00 ಗಂಟೆಗೆ ಸ್ವರಚಿನ್ನಾರಿ ಮತ್ತು ನಾರಿಚಿನ್ನಾರಿಯ ಸದಸ್ಯ–ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಡನೀರು ಇಲ್ಲಿನ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಇದರ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಮತ್ತು ಶಿಷ್ಯ ವೃಂದದವರಿಂದ ‘ನೃತ್ಯೋಲ್ಲಾಸ’ ಭರತನಾಟ್ಯ ಪ್ರದರ್ಶನ ನಡೆಯಲಿದೆ.

