ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ ಹಾಗೂ ವಿವೇಕಾನಂದ ವಿದ್ಯಾರ್ಥಿ ವಸತಿ ನಿಲಯ ಇದರ ಆಶ್ರಯದಲ್ಲಿ ನಿವೇದಿತಾ ವಿದ್ಯಾರ್ಥಿ ವಸತಿ ನಿಲಯದಲ್ಲಿ ದಿನಾಂಕ 12 ಏಪ್ರಿಲ್ 2026ರಂದು ವಿವೇಕ ಸ್ಮೃತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮಂಗಳೂರಿನ ಸ್ವಸ್ಟಿಕ್ ನ್ಯಾಷನಲ್ ಬಿಸಿನೆಸ್ ಕಾಲೇಜಿನ ಸಮಾಜಕಾರ್ಯ ವಿಭಾಗ ಉಪನ್ಯಾಸಕಿ ಡಾ. ಉಷಾರಾಣಿ ಬಿ. “ಹಿಂದೂ ಧರ್ಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನಮಗೆಲ್ಲರಿಗೂ ಆದರ್ಶವಾದವರು ಸಹೋದರಿ ನಿವೇದಿತಾ. ಅಪಾರ ಪ್ರತಿಭಾ ಸಂಪನ್ನೆಯಾದ ಇವರು ಭಾರತೀಯ ಅಧ್ಯಾತ್ಮ, ಸಂಸ್ಕೃತಿಗೆ ಮನಸೋತು ಭಾರತಕ್ಕೆ ಬಂದವರು. ದೇಶಭಕ್ತಿಯನ್ನು ಇಟ್ಟುಕೊಳ್ಳುವುದರ ಜೊತೆಗೆ ಪ್ರತಿಯೊಬ್ಬ ಮಹಿಳೆಯೂ ಬದಲಾಗಬೇಕೆಂದು ಬಯಸಿದವರು. ಬಾಲ್ಯದಲ್ಲೇ ವಿವೇಕಾನಂದರ ಸಂದೇಶವನ್ನು ಮೈಗೂಡಿಸಿಕೊಂಡು ಭಾರತದಲ್ಲಿನ ಮೂಢನಂಬಿಕೆಯನ್ನು ಹೋಗಲಾಡಿಸುವುದರೊಂದಿಗೆ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದರು. ಶಿಕ್ಷಕಿ, ಸಮಾಜಸೇವಕಿ ಹಾಗೂ ಬರಹಗಾರ್ತಿಯಾಗಿ ಭಾರತೀಯ ಸಂಸ್ಕೃತಿಯನ್ನು ತನ್ನಲ್ಲಿ ಬೆಳೆಸಿಕೊಂಡು ಜನರಲ್ಲೂ ಅದನ್ನು ಅಳವಡಿಸಲು ಮುಂದಾದರು ಈಕೆ. ಇಂತಹ ಒಬ್ಬ ಆದರ್ಶ ವ್ಯಕ್ತಿಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಸತಿ ನಿಲಯದ ಅಧ್ಯಕ್ಷ ರಮೇಶ ಪ್ರಭು ಮಾತನಾಡಿ, “ಆದರ್ಶ ಬದುಕನ್ನು ರೂಪಿಸಿಕೊಳ್ಳಲು ಸ್ವಾಮಿ ವಿವೇಕಾನಂದ ಮತ್ತು ನಿವೇದಿತಾರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ವಿದೇಶದಿಂದ ಭಾರತಕ್ಕೆ ಬಂದು ಇಲ್ಲಿನ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ” ಎಂದು ತಿಳಿಸಿದರು.
ವೇದಿಕೆಯಲ್ಲಿ ವಿವೇಕಾನಂದ ವಸತಿ ನಿಲಯದ ಆಡಳಿತಾಧಿಕಾರಿ ಗೋವಿಂದರಾಜ ಶರ್ಮಾ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀ ಕೃಷ್ಣಗಣರಾಜ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಬಿ. ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಸ್ವಾತಿ ವಂದಿಸಿ, ತೃತೀಯ ಬಿ.ಎ. ವಿದ್ಯಾರ್ಥಿನಿ ಸುಮನ ನಿರೂಪಿಸಿದರು.
