ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ 40ನೆ ವರ್ಷದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ದಿನಾಂಕ 03ರಿಂದ 15 ನವೆಂಬರ್ 2026ರವರೆಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಮುಹೂರ್ತ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ ದಿನಾಂಕ 10 ಏಪ್ರಿಲ್ 2026ರಂದು ಸಂಜೆ ಗಂಟೆ 4-00ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಲಾಂಛನ ಬಿಡುಗಡೆಗೊಳಿಸುವರು. ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ ಹಾಗೂ ಗೋವಾದ ಕಲಾವಿದ ಮೈಕಲ್ ಗ್ರೇಶಿಯಸ್ ಭಾಗವಹಿಸಲಿದ್ದಾರೆ.
ಸಂಗೀತ ಮಹಾ ಸಮಾವೇಶದಲ್ಲಿ 12 ದಿನ, 12 ಗಂಟೆ ಗಂಟೆ, 12 ನಿಮಿಷಗಳ, ಸಮೂಹ ಗಾಯನದ ಅತೀ ದೀರ್ಘ ಸಮಯದ ಗಿನ್ನೆಸ್ ದಾಖಲೆ ರಚಿಸಲು ಪ್ರಯತ್ನಿಸಲಾಗುವುದು. ಈ ಪ್ರಯತ್ನದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳಿಂದಲೂ ಹಾಗೂ ವಿದೇಶಗಳಿಂದಲೂ 6000ಕ್ಕೂ ಮಿಕ್ಕಿ ಹಾಡುಗಾರರು ಭಾಗವಹಿಸಲಿದ್ದಾರೆ. ಈ ದಾಖಲೆಯಲ್ಲಿ ಕ್ರೈಸ್ತ, ಜಿ.ಎಸ್.ಬಿ., ದಾಲ್ವಿ, ಕುಡ್ಲಿ, ಖಾರ್ವಿ, ಸಿದ್ದಿ, ಸಿರಿಯನ್ ಆರ್ಥೋಡಾಕ್ಸ್ ಮತ್ತಿತರ ಸಮುದಾಯಗಳ ಗಾಯಕರು ಸುಮಾರು 5000 ಕೊಂಕಣಿ ಹಾಡುಗಳನ್ನು ಹಾಡಲಿದ್ದಾರೆ. ಆ ದಿನಗಳಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ವಿವಿಧ ಸಂವಾದ ಗೋಷ್ಟಿಗಳನ್ನು ಆಯೋಜಿಸಲಾಗುವುದು. ಸಂಗೀತದಲ್ಲಿ ಮಹತ್ತರ ಸಾಧನೆಗೈದ ಹಿರಿಯರನ್ನು ಸಮ್ಮಾನಿಸಲಾಗುವುದು, ಕೀರ್ತಿಮಂದಿರ ಹಾಗೂ ಸಂಗೀತ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು. ಕೊಂಕಣಿ ಸಂಗೀತಕ್ಕೆ ಮಹೋನ್ನತ ಕೊಡುಗೆ ನೀಡಿದ ಎರಿಕ್ ಒಝೇರಿಯೊ ಅವರಿಗೆ ಅರ್ಪಣೆಯಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಜೆ. ಪಿಂಟೊ ತಿಳಿಸಿದ್ದಾರೆ.

