ಕೊಪ್ಪಳ : ಹೌದು, ವಿಠ್ಠಪ್ಪ ಗೋರಂಟ್ಲಿಯವರು ಹುಟ್ಟಿನಿಂದ ಬಡತನದ ಬೇಗೆಯಲ್ಲಿ ಬೆಂದು ನೊಂದು ಬೆಳೆದು ಬಂದವರು. ಬಡತನವೇ ಅವರನ್ನು ಗಡಿಗೆರೆ ದಾಟಲು ಕಲಿಸಿದ್ದು.. ಆಶ್ಚರ್ಯದ ಸಂಗತಿ ಎಂದರೆ ಔಪಚಾರಿಕ ಶಿಕ್ಷಣದಲ್ಲಿ ಅವರು ಓದಿದ್ದು ಕೇವಲ ನಾಲ್ಕನೇಯ ತರಗತಿ. ಅಪಾರವಾಗಿ ಓದುವ ಹವ್ಯಾಸ ಅವರನ್ನು ಬಹಳ ಎತ್ತರಕ್ಕೆ ಒಯ್ದು ನಿಲ್ಲಿಸಿತು. ಎಷ್ಟೆಂದರೆ ನಾವೆಲ್ಲ ಅವರನ್ನು ಕೊಪ್ಪಳದ ನಡೆದಾಡುವ ವಿಶ್ವಕೋಶ ಎಂದೇ ಹೇಳುವಂತಾಯಿತು.
ಅವರು ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ಜೀವನ ನಿರ್ವಹಣೆಗೆ ಬಟ್ಟೆ ನೇಯಲು ಆರಂಭಿಸಿದರು. ಆದರೂ ಅವರ ಓದುವ ಹವ್ಯಾಸ ಮಾತ್ರ ಕಡಮೆ ಆಗಲಿಲ್ಲ. ದುಡಿತದ ಜೊತೆಗೆ ರೂಢಿಸಿಕೊಂಡಿದ್ದ ನಿರಂತರ ಓದು ಅವರನ್ನು ಚಿಂತನಶೀಲ ಬರಹಗಾರರನ್ನಾಗಿ ರೂಪಿಸಿತು.
ಕಪ್ಪೋಡಲ ಕರೆ, ಈ ನೆಲದೊಡಲಲ್ಲಿ, ಶ್ರೀ ಸದಾನಂದ ಸಂದೇಶ, ತನಿಖಾ ವರದಿ, ಯಾರು ಹಾಡದ ಹಾಡು, ನಿನ್ನ ನೀ ತಿಳಿ, ಕಡಲೊಳಗಿನ ನೂರೆಂಟು ಹನಿಗಳು, ತುಂಗಭದ್ರೆಯ ಅಳಲು, ಜಿಲ್ಲಾ ರಂಗ ಮಾಹಿತಿ ಅವರ ಪ್ರಕಟಿತ ಕೃತಿಗಳು. ಮಾತ್ರವಲ್ಲದೆ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದು, ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರ್, ಸುದ್ದಿಮೂಲ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರೊಬ್ಬ ಕಲಾವಿದರಾಗಿದ್ದು, ಬಣ್ಣ ಹಚ್ಚಿ ಪಾತ್ರ ಮಾಡಿದ್ದು ಮಾತ್ರವಲ್ಲದೆ ನಾಟಕಗಳ ನಿರ್ದೇಶನವನ್ನೂ ಮಾಡಿದರು. ಸದಾ ನೊಂದವರ ನೋವಿಗೆ ಸ್ಪಂದಿಸುತ್ತಿದ್ದರು. ಹೋರಾಟದ ವಿಚಾರಕ್ಕೆ ಹೇಳುವುದಾದರೆ, ಅವರನ್ನು ಕೊಪ್ಪಳದ ಜನತೆ ಮರೆತಿಲ್ಲ, ಅವರನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ. ಇವರ ಸಾಮಾಜಿಕ ಬದುಕು ಗಮನಿಸಿ ಸಾಧನೆಯನ್ನು ಗುರುತಿಸಿ ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅವರು ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ವಿಶ್ವೇಶ್ವರಯ್ಯ ಪ್ರಶಸ್ತಿ, ಹೂಗಾರ ಸ್ಮಾರಕ ಪ್ರಶಸ್ತಿ, ಬುದ್ಧ ಪ್ರಶಸ್ತಿ, ಕಬೀರ ಜೇಡರ ದಾಸಿಮಯ್ಯ ಪ್ರಶಸ್ತಿ, ತಿರುಳ್ಗನ್ನಡ ಗೌರವ ಸನ್ಮಾನ ಹೀಗೆ ಬಂದ ಪ್ರಶಸ್ತಿಗಳಲ್ಲಿ ಕೆಲವನ್ನು ಹೆಸರಿಸಬಹುದು.
ಇಂಥ ಧೀಮಂತ ವ್ಯಕ್ತಿತ್ವದ ವಿಠ್ಠಪ್ಪ ಗೋರಂಟ್ಲಿ ಅವರ ಹೆಸರನ್ನು ಗವಿಸಿದ್ಧ ಎನ್. ಬಳ್ಳಾರಿ ಹೆಸರಿನ ಜತೆಗೆ ಕೊಪ್ಪಳದಲ್ಲಿ ದಿನಾಂಕ 25-05-2024 ಮತ್ತು 26-05-2024ರಂದು ನಡೆಯಲಿರುವ 10ನೇ ಮೇ ಸಾಹಿತ್ಯ ಮೇಳದ ದ್ವಾರಕ್ಕೆ ಇಟ್ಟು ಅವರನ್ನು ಗೌರವಿಸಲಾಗುತ್ತಿದೆ. ನಮ್ಮ ಚೇತನಗಳನ್ನು ಜೀವಂತವಾಗಿಡುವ ಇಂಥ ವ್ಯಕ್ತಿತ್ವಗಳನ್ನು ನಾವು ಸ್ಮರಿಸಿಕೊಳ್ಳುತ್ತಲೇ ಇರೋಣ.
ಬಸವರಾಜ ಶೀಲವಂತರ