ಪಣಂಬೂರು : ಶ್ರೀ ಕೊಲ್ಲಂಗಾನ ಮೇಳದ ವತಿಯಿಂದ ‘ಯಕ್ಷ ಪಂಚಕ’ ಎಂಬ ಯಕ್ಷಗಾನ ಕಾರ್ಯಕ್ರಮವು ದಿನಾಂಕ 16 ಡಿಸೆಂಬರ್ 2024ರಂದು ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಇವರು ಮಾತನಾಡಿ “ಯಕ್ಷ ರಂಗ ಸದಾ ಲಾಲಿತ್ಯ ಹೊಂದಿದ್ದು, ಭಾರತೀಯ ಲಲಿತಕಲೆಗಳಲ್ಲಿ ಮೇರು ಸ್ಥಾನವನ್ನು ಪಡೆದಿದೆ. ಹಲವು ರಂಗ ಪ್ರಾಕಾರಗಳೂ ಇದರಲ್ಲಿ ಮಿಳಿತವಾಗಿದ್ದು, ಸರ್ವ ಜನಾಂಗಕ್ಕೂ ಒಪ್ಪಿತವಾದ ರಂಗ ಕಲೆ. ಗಡಿನಾಡ ಮೇಳವೊಂದು ಪಣಂಬೂರಿಗೆ ಬಂದು ಈ ಪಂಚಕವನ್ನು ನಡೆಸುತ್ತಿರುವುದು ಕಲೆಯನ್ನು ಕಾಪಾಡಿಕೊಳ್ಳುವಲ್ಲಿ ಉತ್ತಮ ಪ್ರಯತ್ನ” ಎಂದು ಹೇಳಿದರು.
ವೇದಮೂರ್ತಿ ಸುಬ್ರಹ್ಮಣ್ಯ ಮಯ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. “ಬಿಡುಗಡೆಗೊಂಡ ಅತ್ಯಲ್ಪ ಸಮಯದಲ್ಲಿ 60ಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ಹೊಂದಿದ ತಾನು ನೀಡಿದ ಕಥೆ ಶೂರ್ಪನಖಾವಧಾ ಪ್ರಸಂಗ ಈ ಮೇಳದಲ್ಲಿ ಪ್ರದರ್ಶಿತವಾಗುತ್ತಿರುವುದು ಸಂತಸದ ವಿಷಯ” ಎಂದು ನಿವೃತ್ತ ಯೋಧ ಹಾಗೂ ಕಲಾ ಸಂಘಟಕ ಪಿ. ಮಧುಕರ ಭಾಗವತ್ ಹೇಳಿದರು.
ಹಿರಿಯ ಕಲಾವಿದ ಶ್ರೀಧರ ಐತಾಳ್, ಪಿ. ಅನಂತ ಐತಾಳ್, ವಿಷ್ಣುಮೂರ್ತಿ ಐಗಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮೇಳದ ವಿಶ್ವಸ್ಥ ಬ್ರಹ್ಮಶ್ರೀ ಗಣಾಧಿರಾಜ ತಂತ್ರಿಗಳು ಪ್ರಸ್ತಾವನೆಗೈದರು. ಕಲಾವಿದ ಸುಮನ್ ರಾಜ್ ನೀಲಂಗಳ ಪ್ರಾರ್ಥನೆ ಮಾಡಿ, ಯಕ್ಷಗುರು ವರ್ಕಾಡಿ ಶ್ರೀ ರವಿ ಅಲೆವೂರಾಯ ನಿರ್ವಹಿಸಿ, ವಂದಿಸಿದರು.