ಬಾರ್ಯ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಇವರ ಆಯೋಜನೆಯಲ್ಲಿ ನಡೆಯಲಿರುವ ಯಕ್ಷ ಪುರುಷೋತ್ತಮ – 7 ಯಕ್ಷಗಾನ ತಾಳಮದ್ದಳೆ ಸರಣಿ ಸಂಪನ್ನ ಕಾರ್ಯಕ್ರಮವನ್ನು ದಿನಾಂಕ 14 ಜೂನ್ 2026ರಂದು ಪೂರ್ವಾಹ್ನ 10-00 ಗಂಟೆಗೆ ಬಾರ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಧಿಕ ಮಾಸವು ಶ್ರೀಹರಿಯ ಆರಾಧನೆಗೆ ಮೀಸಲಾದ ಮಹಾಪುಣ್ಯದ ಕಾಲ. ಈ ಪಾವನ ಸಂದರ್ಭದಲ್ಲಿ ಸೃಷ್ಟಿಯ ಆದಿಯಿಂದ ಭಕ್ತಿಯ ಪರಮೋನ್ನತ ಶಿಖರದವರೆಗೆ ಕರೆದೊಯ್ಯುವ ಮೂರು ಅಪೂರ್ವ ಪ್ರಸಂಗಗಳು ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಅನಾವರಣಗೊಳ್ಳಲಿವೆ. ಸೃಷ್ಟಿಯ ರಹಸ್ಯವನ್ನು ಬಿಚ್ಚಿಡುವ ‘ವಿಶ್ವರೂಪ ದರ್ಶನ’, ದಾನಧರ್ಮದ ಮಹತ್ವವನ್ನು ಸಾರುವ ‘ತುಳುನಾಡ ಬಲಿಯೇಂದ್ರೆ’ ಹಾಗೂ ಅಚಲ ಭಕ್ತಿಯ ಅಮರ ಸಂದೇಶವನ್ನು ಹೊತ್ತ ‘ಭಕ್ತ ಪ್ರಹ್ಲಾದ’ – ಈ ಮೂರು ಪ್ರಸಂಗಗಳು ಶ್ರೀಹರಿಯ ಮಹಿಮೆಯನ್ನು ವಿಭಿನ್ನ ಆಯಾಮಗಳಲ್ಲಿ ಅನಾವರಣಗೊಳಿಸಲಿವೆ.
‘ವಿಶ್ವರೂಪ ದರ್ಶನ’ ಮೇದಿನಿ ನಿರ್ಮಾಣ ಸಮಯ : 10.00 – 10.45, ಸೃಷ್ಟಿಯ ಆದಿಯಲ್ಲಿ ಮಧು–ಕೈಟಭರ ಅಹಂಕಾರದಿಂದ ಉಂಟಾದ ಅರಾಜಕತೆಯನ್ನು ಶಮನಗೊಳಿಸಿ, ಅನಂತ ಬ್ರಹ್ಮಾಂಡದ ಅಧಿಪತಿಯಾದ ಶ್ರೀಮನ್ನಾರಾಯಣನು ತನ್ನ ದಿವ್ಯ ವಿಶ್ವರೂಪವನ್ನು ಅನಾವರಣಗೊಳಿಸುತ್ತಾನೆ. ಮೇದಿನಿಯ ನಿರ್ಮಾಣ, ಸೃಷ್ಟಿಯ ರಹಸ್ಯ ಹಾಗೂ ಶ್ರೀಹರಿಯ ಅನಂತ ವೈಭವವನ್ನು ಸಾರುವ ಈ ಪ್ರಸಂಗ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ. ಕಲಾವಿದರು ವಿಷ್ಣು – ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು, ಮಧು – ಶ್ರೀಮತಿ ಭಾರತಿ ರೈ, ಕೈಟಭ – ಶ್ರೀಮತಿ ಶಾರದಾ ಅರಸ್.
‘ತುಳುನಾಡ ಬಲಿಯೇಂದ್ರೆ’ (ತುಳು) ಸಮಯ : 10.45 – 11.45 ದಾನ, ಧರ್ಮ ಮತ್ತು ವಚನಪಾಲನೆಯ ಪ್ರತೀಕನಾದ ಮಹಾಬಲಿ ಚಕ್ರವರ್ತಿಯ ಜೀವನಗಾಥೆ. ವಾಮನನ ದಿವ್ಯ ಲೀಲೆಯ ಮೂಲಕ ತ್ಯಾಗ, ವಿನಯ ಹಾಗೂ ಭಕ್ತಿಯ ಶಾಶ್ವತ ಸಂದೇಶವನ್ನು ಸಾರುವ ತುಳು ಭಾಷೆಯ ವಿಶಿಷ್ಟ ಪ್ರಸಂಗ. ಕಲಾವಿದರು ವಾಮನೆ – ಗುಡ್ಡಪ್ಪ ಬಲ್ಯ, ಬಲಿ – ತಾರಾನಾಥ ಸವಣೂರು, ಶುಕ್ರಾಚಾರ್ಯೆ – ಹರಿಣಾಕ್ಷಿ ಶೆಟ್ಟಿ, ವಿಂಧ್ಯಾವಳಿ – ದುಗ್ಗಪ್ಪ ನಡುಗಲ್ಲು, ದಿತಿ – ಅಚ್ಯುತ ಕೋಡಿಬೈಲ್.
‘ಭಕ್ತ ಪ್ರಹ್ಲಾದ’ ಸಮಯ : 11.45 – 1.00, ಅಹಂಕಾರದ ಎದುರು ಭಕ್ತಿಯ ಅಜೇಯ ಶಕ್ತಿಯನ್ನು ಸಾರುವ ಅಮರ ಕಥೆ. ಹಿರಣ್ಯಕಶ್ಯಪನ ದರ್ಪ, ಪ್ರಹ್ಲಾದನ ಅಚಲ ನಾರಾಯಣ ಭಕ್ತಿ ಹಾಗೂ ನರಸಿಂಹನ ದಿವ್ಯ ಅವತಾರದ ಮೂಲಕ ಧರ್ಮದ ವಿಜಯವನ್ನು ಘೋಷಿಸುವ ಪ್ರಸಂಗ. ಕಲಾವಿದರು : ಹಿರಣ್ಯಕಶ್ಯಪು – ಗುಂಡ್ಯಡ್ಕ ಈಶ್ವರ ಭಟ್, ಖಯಾದು – ಭಾಸ್ಕರ ಬಾರ್ಯ, ಪ್ರಹ್ಲಾದ – ಶ್ರೀಮತಿ ಶುಭಾ ಅಡಿಗ, ಗುರುಗಳು – ಗೇರುಕಟ್ಟೆ ದಿವಾಕರ ಆಚಾರ್ಯ.
ಹಿಮ್ಮೇಳದಲ್ಲಿ ಹಳೆನೇರಂಕಿ • ಇರ್ದೆ • ಸವಣೂರು • ಎಂಕಣ್ಣಮೂಲೆ, ಚೆಂಡೆ – ಮದ್ದಳೆಯಲ್ಲಿ ಕೋಡಿಬೈಲ್ • ನೆತ್ತರಕೆರೆ • ಪುಣಚ • ಕಡಂಬಳಿಕೆ. ಬನ್ನಿ … ಶ್ರೀಹರಿಯ ಮಹಿಮೆಯನ್ನು ಸ್ಮರಿಸೋಣ. ವಿಶ್ವರೂಪದ ವೈಭವವನ್ನು ಅನುಭವಿಸೋಣ. ಬಲಿಯ ದಾನಶೀಲತೆಯನ್ನು ಕೊಂಡಾಡೋಣ. ಪ್ರಹ್ಲಾದನ ಭಕ್ತಿಯ ಅಮೃತವನ್ನು ಸವಿಯೋಣ. ಯಕ್ಷಗಾನದ ಸಾಹಿತ್ಯ, ಸಂಗೀತ, ಭಾವ ಮತ್ತು ಭಕ್ತಿಯ ರಸದೌತಣದಲ್ಲಿ ಮಿಂದೇಳೋಣ. ಅಧಿಕ ಮಾಸದ ಈ ಪುಣ್ಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಆತ್ಮೀಯವಾಗಿ ಸ್ವಾಗತಿಸುವ ಅಧ್ಯಕ್ಷರು ಮತ್ತು ಸರ್ವಸದಸ್ಯರು ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ (ರಿ) ಬಾರ್ಯ ಬೆಳ್ತಂಗಡಿ.

