ತೆಕ್ಕಟ್ಟೆ : ಕೋಟದ ಕಾರಂತ ಥೀಂಪಾರ್ಕನಲ್ಲಿ ‘ತಿಂಗಳ ಸಡಗರ-ಕಾರಂತ ಬಾಲ ಪುರಸ್ಕಾರ-ಸಂವಾದ ಕಾರ್ಯಕ್ರಮದಲ್ಲಿ ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಬಾಲ ಕಲಾವಿದರು ‘ಯಕ್ಷಗಾನ-ವೈಭವ’ವನ್ನು ದಿನಾಂಕ 26-11-2023ರಂದು ಪ್ರಸ್ತುತಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿಣ್ಣರನ್ನು ಗೌರವಿಸಿ ಕೋಟದ ಸಾಂಸ್ಕೃತಿಕ ರಾಯಭಾರಿ ನರೇಂದ್ರಕುಮಾರ್ ಕೋಟ ಮಾತನಾಡುತ್ತಾ “ಮಕ್ಕಳಿಗೆ ಕಲೆಯ ಬೆಳಕು ತೋರಿದರೆ ಸಮಾಜ ಬೆಳಗುತ್ತದೆ. ಜೊತೆಗೆ ಅವರಿಗಷ್ಟು ಅವಕಾಶ ದೊರೆತರೆ ಕಲಿತ ಕಲೆಗೆ ಸಾರ್ಥಕ್ಯ ದೊರೆತ ಹಾಗೆ. ದೇವರಂತಿರುವ ಮಕ್ಕಳಿಗೆ ಅವಕಾಶ ಕಲ್ಪಿಸಿದರೆ ಮಕ್ಕಳ ಭವಿಷ್ಯ ಭವಿತವ್ಯವಾಗಬೇಕು. ಸನ್ಮಾರ್ಗದಲ್ಲಿ ಸಮಾಜವನ್ನು ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ಇಂತಹ ಕಲಾ ಪ್ರಸ್ತುತಿಯ ಮೂಲಕ ಒಂದಷ್ಟು ಹೊತ್ತು ಕುಳಿತುಕೊಳ್ಳುವ, ಕಲೆಯನ್ನು ಆಸ್ವಾದಿಸುವ ಅವಕಾಶ ಲಭ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಯಶಸ್ವಿ ಕಲಾವೃಂದದ ಪುಟಾಣಿ ವಿ.ಬಿ. ಪರಿಣಿತ ವೈದ್ಯಳಿಗೆ ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣ್ ರಾವ್ ‘ಬಾಲ ಪುರಸ್ಕಾರ’ ನೀಡಿ ಗೌರವಿಸಿದರು. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಕುಂದರ್, ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು. ಬಳಿಕ ಯಶಸ್ವೀ ಕಲಾವೃಂದದ ಬಾಲ ಕಲಾವಿದರಿಂದ ‘ಯಕ್ಷಗಾನ ವೈಭವ’ ಕಾರ್ಯಕ್ರಮ ರಂಗದಲ್ಲಿ ಪ್ರಸ್ತುತಿಗೊಂಡಿತು.