ಮಂಗಳೂರು : ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್, ರಂಗಸ್ಥಳ ಮಂಗಳೂರು (ರಿ.) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಆಶ್ರಯದಲ್ಲಿ ನಾಲ್ಕನೇ ಬಾರಿಗೆ ಬಡಗು ತಿಟ್ಟಿನ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಕಾಲಮಿತಿ ಯಕ್ಷಗಾನ ಪೌರಾಣಿಕ ಪ್ರಸಂಗ ‘ದ್ರೌಪದಿ ಪ್ರತಾಪ ವಿದ್ಯುಜ್ಜಿಹ್ವ’ ಬಯಲಾಟ ಪ್ರದರ್ಶನವು ದಿನಾಂಕ 22 ಮಾರ್ಚ್ 2026ರಂದು ಸಂಜೆ 03-30 ಗಂಟೆಗೆ ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಸಿದ್ಧ ಅರ್ಥದಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ ಇವರಿಗೆ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರ ಪ್ರದಾನ ಮಾಡಲಾಗುವುದು.

‘ದ್ರೌಪದಿ ಪ್ರತಾಪ’ ಪ್ರಸಂಗದಲ್ಲಿ ಅತಿಥಿ ಕಲಾವಿದರಾಗಿ ಅಶ್ವಿನಿ ಕೊಂಡದಕುಳಿ ಇವರು ದ್ರೌಪದಿ ಪಾತ್ರವನ್ನು ಮಾಡಲಿದ್ದಾರೆ. ಅಂತೆಯೇ ಮೆಕ್ಕೆಕಟ್ಟು ಮೇಳದ ಸುಪ್ರಸಿದ್ಧ ಕಲಾವಿದರಾದ ನಾಗರಾಜ್ ಭಂಡಾರಿ, ರಾಜೇಶ್ ಭಂಡಾರಿ, ರಮೇಶ್ ಭಂಡಾರಿ ಸೇರಿದಂತೆ ಭಾಗವತರಾದ ಶ್ರೀಸುಧೀರ್ ಭಟ್ ಪೆರ್ಡೂರು, ಸುರೇಶ್ ಭದ್ರಾಪುರ ಸೇರಿದಂತೆ ಇತರ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಅಭ್ಯಾಗತರಾಗಿ ಮಂಗಳೂರು ನಗರದ ದಕ್ಷಿಣ ವಿಧಾನ ಸಭಾಕ್ಷೇತ್ರ ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ್ ಕಲ್ಕೂರ, ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಎಸ್.ಎಸ್. ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಎಸ್.ಎಲ್. ನಾಯಕ್ ಮತ್ತು ದಿನೇಶ್ ಪೈ ಮಂಗಳೂರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಅಣ್ಣಯ್ಯಕುಲಾಲ್, ಹಿರಿಯ ಸಾಹಿತಿ ಜನಾರ್ದನ ಹಂದೆ, ಮೇಳದ ಯಜಮಾನರಾದ ರಂಜಿತ್‌ಕುಮಾರ್ ವಕ್ವಾಡಿ ಇವರು ಭಾಗವಹಿಸಲಿದ್ದಾರೆ ಎಂದು ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟಿನ ಪರವಾಗಿ ಕರುಣಾಕರ ಬಳ್ಕೂರು ತಿಳಿಸಿರುತ್ತಾರೆ.
ಡಾ. ಎಂ. ಪ್ರಭಾಕರ ಜೋಶಿ : ಕಾರ್ಕಳ ತಾಲೂಕಿನ ಮಾಳದಿಂದ ಬಂದು ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾಗಿ, ಕಾಲೇಜು ಪ್ರಾಂಶುಪಾಲರಾಗಿ ದೀರ್ಘಕಾಲಿಕ ಶೈಕ್ಷಣಿಕ ಸೇವೆಯಿಂದ ಅಪಾರ ಜನಾದರಣೆಗೆ ಪಾತ್ರರಾದ ಇವರು, ಎಳವೆಯಿಂದಲೇ ಹವ್ಯಾಸವಾಗಿ ರೂಢಿಸಿಕೊಂಡ ಯಕ್ಷಗಾನ ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ಅಗ್ರಪಂಕ್ತಿಯ ಕಲಾವಿದರಾಗಿ ಪಡೆದ ಮನ್ನಣೆ, ಜನಪ್ರಿಯತೆ ಅಸಾಧಾರಣವಾದುದು. ಸೃಷ್ಟಿಶೀಲ ಮಾತುಗಾರಿಕೆಯಿಂದ ಉಪನ್ಯಾಸ, ಪ್ರವಚನಗಳಲ್ಲೂ ಪ್ರಸಿದ್ಧಿ ಪಡೆದಿರುತ್ತಾರೆ. ಯಕ್ಷಗಾನವು ಅಕಾಡೆಮಿಕ್ ಮೌಲ್ಯವನ್ನು ಪಡೆಯುವಲ್ಲಿ ಇವರ ಕೊಡುಗೆ ಮಹತ್ತರವಾದುದು. ಯಕ್ಷಗಾನದ ಪದಕೋಶ ರಚನೆ, ಯಕ್ಷಗಾನ ಸಂಶೋಧನೆ, ಅನೇಕ ಕೃತಿಗಳ ಸಂಪಾದನೆ, ಕಾರ್ಯಕ್ರಮಗಳ ಸಂಘಟನೆ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವಿಕೆ, ವಿಮರ್ಶೆ, ಅಂಕಣ ಬರೆಹ–ಮೊದಲಾಗಿ ಹಲವಾರು ಕ್ಷೇತ್ರಗಳಲ್ಲಿ ಇವರ ಸಾಧನೆಗಮನಾರ್ಹ. ಬಹುಭಾಷಾವಿದರಾಗಿ, ಭಾರತೀಯ ತತ್ವ ಶಾಸ್ತ್ರ, ಭಾರತೀಯ ಋಷಿ ಪರಂಪರೆಯ ಜ್ಞಾನ ಪ್ರಸರಣದಲ್ಲಿ ತೊಡಗಿಸಿಕೊಂಡು, ಸಕಾಲಿಕವಾದ ಸ್ಪಂದನಶೀಲತೆ, ವಿನೋದ ಪ್ರವೃತ್ತಿ, ಹೃದಯ ಶ್ರೀಮಂತಿಕೆಯಿಂದ ಇವರು ಅಪೂರ್ವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಹೀಗೆ ಇವರ ಯಕ್ಷಪರಂಪರೆಯನ್ನು, ಕಲಾಸೇವೆಯನ್ನು ಗುರುತಿಸಿ ಗಣ್ಯರ ಸಮ್ಮುಖದಲ್ಲಿ ‘ಬಳ್ಕೂರು ಯಕ್ಷ ಕುಸುಮ ಪುರಸ್ಕಾರ’ವನ್ನು ನೀಡಿ ಗೌರವಿಸಲಿದ್ದೇವೆ.
