ಕುಡುಪು : ಯಕ್ಷ ಮಿತ್ರರು ಕುಡುಪು ಇವರ ವತಿಯಿಂದ ಷಷ್ಠಿ ಮಹೋತ್ಸವದ ಪ್ರಯುಕ್ತ ದಿನಾಂಕ 07 ಡಿಸೆಂಬರ್ 2024ರಂದು ಕುಡುಪು ದೇವಸ್ಥಾನದಲ್ಲಿ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂಡಬಿದ್ರೆಯ ರಾಜಕೀಯ ನೇತಾರ, ಧಾರ್ಮಿಕ ಮುಂದಾಳು ಶ್ರೀ ಅಭಯಚಂದ್ರ ಜೈನ್ ಮಾತನಾಡಿ “ಯಕ್ಷಗಾನವು ಜೀವಂತ ಕಲೆ. ಕಲಾಶ್ರಯವನ್ನು ಬಯಸುವ ಅನೇಕ ಕಲಾವಿದರನ್ನು ರಂಗಸ್ಥಳಕ್ಕೆ ಪರಿಚಯಿಸುತ್ತದೆ. ಇದು ಕಲಾವಿದರಲ್ಲಿನ ಸಂಪೂರ್ಣ ಪ್ರತಿಭೆಯನ್ನು ಹೊರಹಾಕಬಲ್ಲ ಸ್ವತಂತ್ರ ಕಲೆ. ಇದರಲ್ಲೇ ಸಂತೃಪ್ತಿ ಪಡೆದ ಕಲಾವಿದರು ಅಸಂಖ್ಯಾತ. ಈ ಕಲೆಯ ಉಳಿವಿಗಾಗಿ ಯಕ್ಷ ಮಿತ್ರರು, ಕುಡುಪು ಒಂದೂವರೆ ದಶಕಕ್ಕೂ ಮೀರಿ ಇಲ್ಲಿನ ಷಷ್ಠಿ ಉತ್ಸವದಂದು ಯಕ್ಷಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸಂಪ್ರದಾಯದಂತೆ ಇಂದೂ ಒಬ್ಬ ಶ್ರೇಷ್ಠ ಕಲಾವಿದನನ್ನು ಗೌರವಿಸಿ-ಸನ್ಮಾನಿಸಿರುವುದು ಶ್ಲಾಘನೀಯ. ಇದು ಈ ಕ್ಷೇತ್ರದ ಪ್ರಸಾದ. ಸಂಸ್ಥೆಯ ಉನ್ನತಿಗೂ ಇದು ಕಾರಣವಾಗುತ್ತದೆ. ಉಭಯತ್ರರಿಗೂ ಶುಭವಾಗಲಿ” ಎಂದು ನುಡಿದರು.
ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ, ದೇವಿ ಭಟ್ರು ಎಂದೇ ಖ್ಯಾತಿಯನ್ನು ಪಡೆದ ಸರವು ರಮೇಶ ಭಟ್ರು “ತಾನು ಕಟೀಲಿನ ಮೇಳದಲ್ಲಿ 35 ವರ್ಷಕ್ಕೂ ಮಿಕ್ಕಿ ತಿರುಗಾಟಗಳನ್ನು ನಡೆಸಿದ್ದೇನೆ. ನಿರಂತರ ಯಕ್ಷಗಾನ ಮತ್ತು ಮಹಾನ್ ಕಲಾವಿದರ ಒಡನಾಟ ನನಗೆ ತುಂಬಾ ಹೆಸರನ್ನು ತಂದುಕೊಟ್ಟಿದೆ. ಇಂದು ಕುಡುಪುವಿನ ಯಕ್ಷ ಮಿತ್ರರು ನನ್ನನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಅತ್ಯಂತ ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತೇನೆ. ಇನ್ನು ಮುಂದೆಯೂ ಈ ವೇದಿಕೆಯಲ್ಲಿ ಉತ್ತಮ ಯಕ್ಷಕಲಾವಿದರ ಸನ್ಮಾನ ನಡೆಯಲಿ. ಕಲೆ ಬೆಳೆಯಲಿ” ಎಂದು ಹೇಳಿದರು.
ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ವೇದಮೂರ್ತಿ ಕೆ. ನರಸಿಂಹ ತಂತ್ರಿಗಳ ಗೌರವ ಉಪಸ್ಥಿತರಿದ್ದರು. ಕುಡುಪು ಶ್ರೀಕೃಷ್ಣರಾಜ ತಂತ್ರಿಗಳು ಸಂಸ್ಥೆಯ ಬಗ್ಗೆ ಪ್ರಸ್ತಾವನೆಯ ಮಾತುಗಳನ್ನಾಡಿದರು. ಕುಡುಪುವಿನ ಜನಾರ್ಧನ ಕೆ. ವಾಮಂಜೂರು ಅಮೃತೇಶ್ವರ ದೇವಸ್ಥಾನದ ಚಂದ್ರಹಾಸ ರೈ, ಪದ್ಮರಾಜ್ ಎಕ್ಕಾರ್, ಸುಧಾಕರ ರಾವ್ ಪೇಜಾವರ್ ಅತಿಥಿಗಳಾಗಿದ್ದರು. ಯಕ್ಷಗುರು ಕಲಾವಿದ ವರ್ಕಾಡಿ ರವಿ ಅಲೆವೂರಾಯ ಅಭಿನಂದನಾ ಭಾಷಣ ಹಾಗೂ ಕುಡುಪು ರಾಘವೇಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಅಧ್ಯಾಪಕ, ಸಂಘಟಕ ಕುಡುಪು ವಾಸುದೇವ ರಾವ್ ನಿರ್ವಹಿಸಿದರು. ಸಭೆಯ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ಯಕ್ಷಮಿತ್ರರು ಕುಡುಪು ಇವರ ನೇತೃತ್ವದಲ್ಲಿ ‘ಇಂದ್ರಜಿತು ಕಾಳಗ’ ಎಂಬ ಯಕ್ಷಗಾನ ಬಯಲಾಟ ನಡೆಯಿತು.