ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಶ್ರೀ ಶನೀಶ್ವರ ಪೂಜಾ ಪ್ರಸಂಗವೆಂದೇ ಪ್ರಸಿದ್ದಿ ಪಡೆದ ಚಿನ್ನಯ ದಾಸರ ‘ಶ್ರೀ ಶನೀಶ್ವರ ಮಹಾತ್ಮೆ’ಯು ಇದೀಗ ಮಂಗಳೂರು ಆಕಾಶವಾಣಿಯಿಂದ ಯಕ್ಷಗಾನ ತಾಳಮದ್ದಳೆಯಾಗಿ ಪ್ರಸಾರಗೊಳ್ಳಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಇದನ್ನು ಎರಡು ಕಂತುಗಳಾಗಿ ಪ್ರಸ್ತುತಪಡಿಸುವರು.
ಭರತವರ್ಷದ ಚಕ್ರವರ್ತಿ ರಾಜಾ ವಿಕ್ರಮಾದಿತ್ಯನ ಜನ್ಮ ರಾಶಿಗೆ ಶನಿ ಪ್ರವೇಶವಾಗುವ ಸಂದರ್ಭದ ತಾಳಮದ್ದಳೆಯ ಮೊದಲನೇ ಭಾಗ ‘ಶನಿ ಪ್ರಭಾವ’ ದಿನಾಂಕ 08 ಮೇ 2026ರಂದು ಶುಕ್ರವಾರ ರಾತ್ರಿ ಗಂಟೆ 9-30ಕ್ಕೆ ಪ್ರಸಾರವಾಗಲಿದೆ. ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ (ವಿಕ್ರಮಾದಿತ್ಯ), ಗಣರಾಜ ಕುಂಬ್ಳೆ (ಶನೈಶ್ಚರ), ಎಂ.ಕೆ. ರಮೇಶ ಆಚಾರ್ಯ (ಆಲೋಲಿಕೆ), ರಮೇಶ ಸಾಲ್ವಣ್ಕರ್ (ನಂದಿ ಶ್ರೇಷ್ಟಿ), ಉಮೇಶಾಚಾರ್ಯ ಗೇರುಕಟ್ಟೆ (ಸುಶೀಲೆ) ಮತ್ತು ಹರಿಶ್ಚಂದ್ರ ನಾಯಗ ಮಾಡೂರು (ಚಂದ್ರಶಯನ) ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು; ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯಾರು ಭಾಸ್ಕರ ಭಾಗವಹಿಸಿದ್ದಾರೆ.
ಪ್ರಸಂಗದ ಎರಡನೇ ಭಾಗ ‘ವಿಕ್ರಮಾದಿತ್ಯ ವಿಜಯ’ದಲ್ಲಿ ಏಳೂವರೆ ವರ್ಷಗಳ ಶನಿಪೀಡೆಯಿಂದ ವಿಕ್ರಮನನ್ನು ಬಿಡುಗಡೆಗೊಳಿಸಿ ಅವನಿಗೆ ಸಕಲ ಸೌಭಾಗ್ಯ ಸಂಪತ್ತುಗಳನ್ನು ಕರುಣಿಸಿ, ಶ್ರೀ ಶನೈಶ್ಚರ ವ್ರತಾನುಷ್ಠಾನದ ಫಲಶ್ರುತಿಯೊಂದಿಗೆ ಶನಿದೇವ ಅಂತರ್ಧಾನನಾಗುವ ರೋಚಕ ಕಥೆಯಿದ್ದು ಅದು ಮುಂದಿನ ವಾರದ ದಿನಾಂಕ 15 ಮೇ 2026ರ ಶುಕ್ರವಾರದಂದು ರಾತ್ರಿ 9-30ಕ್ಕೆ ಪ್ರಸಾರವಾಗುವುದು. ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ ಮುಖ್ಯ ಕಾಯ್ದನಿರ್ವಾಹಣಾಧಿಕಾರಿ ಲತೀಶ್ ಪಾಲ್ದನೆ ನಿರ್ಮಿಸಿ ಬಾನುಲಿ ಪ್ರಸಾರಕ್ಕೆ ಸಿದ್ಧಪಡಿಸಿದ್ದಾರೆ. ಚೈತನ್ಯ ಪ್ರಶಾಂತ್ ಧ್ವನಿ ಮುದ್ರಣ ಹಾಗೂ ಸಂಕಲನ ಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿಯು ತಿಳಿಸಿದೆ.

