ಬ್ರಹ್ಮಾವರ : ಕರ್ನಾಟಕ ರಾಜ್ಯ ಸರಕಾರದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆಯವರ ‘ಶಿಕ್ಷಣದೊಂದಿಗೆ ಯಕ್ಷಗಾನ’ ಗುರುಕುಲ ಪದ್ಧತಿಯ ವಸತಿ ಶಾಲೆಗೆ ಅರ್ಜಿ ಆಹ್ವಾನಿಸಲಾಗಿದೆ. ಕಳೆದ 54 ವರ್ಷಗಳಿಂದ ಯಕ್ಷಗಾನ ತರಬೇತಿ ತರಗತಿಯನ್ನು ನಡೆಸುತ್ತಾ ಬಂದ ದಿವಂಗತ ಕಾಳಿಂಗ ನಾವಡ, ಧಾರೇಶ್ವರರಂತ 3000ಕ್ಕೂ ಮಿಕ್ಕಿ ಕಲಾವಿದರನ್ನು ಯಕ್ಷಗಾನ ಪ್ರಪಂಚಕ್ಕೆ ನೀಡಿರುವ, ಯಕ್ಷಗಾನ ಚಿಂತಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರರಿಂದ ಸ್ಥಾಪಿಸಲ್ಪಟ್ಟ, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರು ಪ್ರಾಚಾರ್ಯರಾಗಿದ್ದ, ನಮ್ಮ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆಯು ಶಾಲಾ ಬಾಲಕರಿಗಾಗಿ ಗುರುಕುಲ ಪದ್ಧತಿಯಂತೆ ವಸತಿ ಶಾಲೆಯನ್ನು ಕಳೆದ ಹನ್ನೆರಡು ವರ್ಷಗಳಿಂದ ನಡೆಸುತ್ತಾ ಬಂದಿರುತ್ತದೆ. ‘ಶಿಕ್ಷಣದೊಂದಿಗೆ ಯಕ್ಷಗಾನ’ ಎಂಬ ಧ್ಯೇಯದೊಂದಿಗೆ ಪ್ರಾರಂಭವಾಗಿರುವ ಈ ವಸತಿ ಶಾಲೆಯಲ್ಲಿ ಆರನೆಯ ತರಗತಿಯಿಂದ ಹತ್ತನೆಯ ತರಗತಿಯ ತನಕದ ಬಾಲಕರಿಗೆ ಪ್ರವೇಶ ನೀಡಲಾಗುವುದು. ಅವಕಾಶ ಪಡೆದ ಬಾಲಕರಿಗೆ ಹತ್ತಿರದ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದಲ್ಲದೇ ಉಚಿತ ಊಟ, ಉಪಹಾರ, ವಸತಿಯ ವ್ಯವಸ್ಥೆಯೊಂದಿಗೆ ಯಕ್ಷಗಾನದ ಭಾಗವತಿಕೆ, ಮದ್ದಲೆ, ಚೆಂಡೆ, ನೃತ್ಯ ಶಿಕ್ಷಣವನ್ನೂ ನೀಡಲಾಗುವುದು. ಅಲ್ಲದೇ ನಮ್ಮ ಸಂಸ್ಥೆಯು ಕರ್ನಾಟಕ ರಾಜ್ಯ ಸರಕಾರದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿದ್ದು, ವಿಶ್ವವಿದ್ಯಾನಿಲಯದ ನಿಯಮದಂತೆ ಯಕ್ಷಗಾನದ ಸರ್ಟಿಫಿಕೇಟ್ ಮತ್ತು ಡಿಪ್ಲೋಮೋ ಕೋರ್ಸ್ ಗಾಗಿ ಪರೀಕ್ಷೆ ನಡೆಸುವುದಲ್ಲದೇ ಉತ್ತೀರ್ಣರಾದವರಿಗೆ ವಿಶ್ವವಿದ್ಯಾನಿಲಯದ ಸರ್ಟಿಫಿಕೇಟ್ ನೀಡಲಾಗುವುದು, ಗುರುಕುಲ ಪದ್ಧತಿಯಂತೆ ನಡೆಸಲುದ್ದೇಶಿಸುವ ಈ ಶಾಲೆಗೆ ಸೇರ ಬಯಸುವವರು ದಿನಾಂಕ 25 ಮೇ 2026ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದ್ದು, ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಅಂಚೆ : ಐರೋಡಿ 576226, ಉಡುಪಿ ತಾಲೂಕು ಮತ್ತು ಜಿಲ್ಲೆ, ದೂರವಾಣಿ 9880605610ಯನ್ನು ಸಂಪರ್ಕಿಸಲು ಕೇಳಿಕೊಳ್ಳಲಾಗಿದೆ.
