ಉಡುಪಿ : ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರು ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರ ಹೆಸರಿನಲ್ಲಿ ಕೊಡ ಮಾಡುವ ‘ಯಕ್ಷವಿದ್ಯಾಮಾನ್ಯ’ ಪ್ರಶಸ್ತಿಗೆ ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಇವರನ್ನು ಆಯ್ಕೆ ಮಾಡಲಾಗಿದೆ.
ಧರ್ಮಸ್ಥಳ ಮೇಳದಲ್ಲಿ 34 ವರ್ಷ, ಕದ್ರಿ ಮೇಳದಲ್ಲಿ 6 ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ ರಘುರಾಮ ಹೊಳ್ಳರಿಗೆ ತಂದೆ ಪುತ್ತಿಗೆ ರಾಮಕೃಷ್ಣ ಜೋಯಿಸರೇ ಆರಂಭಿಕ ಗುರುಗಳು. ಕಡತೋಕ ಮಂಜುನಾಥ ಭಾಗವತರಿಂದ ಪ್ರೇರಣೆ ಪಡೆದು, ತಮ್ಮ ವಿಶೇಷ ಕಂಠಸಿರಿಯಿಂದ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚೆಂಡೆ, ಮದ್ದಳೆ ವಾದನಗಳಲ್ಲೂ ಪರಿಣತಿ ಹೊಂದಿದ್ದಾರೆ. ದಿನಾಂಕ 02 ಏಪ್ರಿಲ್ 2026ರಂದು ಬೆಳಗ್ಗೆ ಗಂಟೆಗೆ 10-30ಕ್ಕೆ ಪಲಿಮಾರಿನಲ್ಲಿ ನಡೆಯಲಿರುವ ಶ್ರೀಹನುಮಜ್ಜಯಂತಿ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಫಲಕ ಮತ್ತು ರೂ.50 ಸಾವಿರ ಗೌರವಧನವನ್ನು ಒಳಗೊಂಡಿದೆ ಎಂದು ಪಲಿಮಾರು ಮಠದ ದಿವಾನರು ತಿಳಿಸಿದ್ದಾರೆ.
