ಮುಧೋಳ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ಮುಧೋಳ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ದಿನಾಂಕ 15 ಮಾರ್ಚ್ 2025ರಂದು ರಾಜ್ಯ ಮಟ್ಟದ ದ್ವಿತೀಯ ‘ಯುವ ಸಾಹಿತ್ಯ ಸಮ್ಮೇಳನ’ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಕವಿ ಆರಿಫ್ ರಾಜಾ ಮಾತನಾಡಿ “ಕವಿ ಅಥವಾ ಲೇಖಕನಿಗೆ ನಿರ್ದಿಷ್ಟ ದೇಶ, ಕಾಲ ಅಥವಾ ಭಾಷೆಯ ಹಂಗಿಲ್ಲ. ಆತ್ಮ ಕಥೆ ಮತ್ತು ಕಾವ್ಯಗಳನ್ನೇ ದೇಶವಾಗಿಸಿಕೊಂಡು ಸಾಹಿತ್ಯದ ನಾಡಿಗೆ ಸೇರಿದವನಾಗಿರುತ್ತಾನೆ. ಪಂಪನಿಂದ ಲಂಕೇಶರವರೆಗೆ ಕನ್ನಡ ಸಾಹಿತ್ಯವು ಮಾನವೀಯತೆ ಬಿಟ್ಟುಕೊಟ್ಟಿಲ್ಲ. ತಂತ್ರಜ್ಞಾನ ಮುಖ್ಯವಾಗಿದ್ದರೂ ಮನುಷ್ಯನ ಸಂವೇದನೆ ಮತ್ತು ನೋವು ಅನುಭವಿಸಿ ಬರೆಯುವ ಸೃಜನಶೀಲತೆಗೆ ಜವಾಬ್ದಾರಿಯಿದೆ” ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ವೆಂಕಟೇಶ ಗುಡೆಪ್ಪನವರ ಮಾತನಾಡಿ “ಕನ್ನಡವು ಕೇವಲ ಭಾವನಾತ್ಮಕವಾಗಿ ಉಳಿಯದೆ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಕೃಷಿ ವಿಜ್ಞಾನದಂತಹ ತಾಂತ್ರಿಕ ಕ್ಷೇತ್ರಗಳಲ್ಲಿಯೂ ಲಭ್ಯವಾಗುವ ಮೂಲಕ ‘ಬದುಕಿನ ಭಾಷೆಯಾಗಿ’ ಬೆಳೆಯಬೇಕಿದೆ. ಸಾಹಿತ್ಯ ಅಕಾಡೆಮಿಗಳ ಕಚೇರಿಗಳು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರವಾಗಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಪತ್ರಕರ್ತೆ ರಶ್ಮಿ ಎಸ್., ಹಿರಿಯ ಸಂಶೋಧಕ ಪ್ರಕಾಶ ಖಾಡೆ, ವೈದ್ಯ ಸಾಹಿತಿ ಡಾ. ಶಿವಾನಂದ ಕುಬಸದ ಮಾತನಾಡಿದರು. ಸಮ್ಮೇಳನದ ಧ್ವಜಾರೋಹಣವನ್ನು ರನ್ನ ಪ್ರತಿಷ್ಠಾನದ ಸದಸ್ಯ ಡಾ. ಕೆ.ಎಲ್. ಉದಪುಡಿ ನೆರವೇರಿಸಿದರು. ಪುಸ್ತಕ ಮಳಿಗೆಗಳನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ಹೊಸಮನಿ ಉದ್ಘಾಟಿಸಿದರೆ, ಹಿರಿಯ ಸಾಹಿತಿ ಪ್ರಕಾಶ ಖಾಡೆ ಅವರು ವೆಂಕಟೇಶ ಗುಡಪ್ಪನವರ ಅವರ ‘ಶೋಧ’ ಮಕ್ಕಳ ಸಾಹಸ ಕಾದಂಬರಿ ಸೇರಿದಂತೆ ಹಲವು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಸಂಘದ ಅಧ್ಯಕ್ಷ ಎಂ. ರಮೇಶ ಕಮತಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ.ಸಾ.ಪ. ತಾಲೂಕು ಅಧ್ಯಕ್ಷ ಆನಂದ ಪೂಜಾರಿ ಆಶಯ ನುಡಿ ನುಡಿದರು ಹಾಗೂ ಶಿವಾನಂದ ಕುಬಸದ, ಸಂಘಟಕ ಚಂದ್ರಶೇಖರ ದೇಸಾಯಿ,ಕಾನಿಪ ಅಧ್ಯಕ್ಷ ಬಿ. ರತ್ನಾಕರ ಶೆಟ್ಟಿ, ಸಾಹಿತಿ ಇಂದಿರಾ ಸಾತನೂರ, ಆರ್.ಜಿ. ಪಾಟೀಲ್, ಡಾ. ನ. ಗಂಗಾದರಪ್ಪ ಹುಸೇನ ಪತ್ತೇಖಾನ ಸಂಗೀತಾ ದಾಸ್ಕಾಳ, ಹೇಮಾ ಬಡಿಗೇರ, ಶ್ರೀದೇವಿ ಬಾಡಗಿ ಉಪಸ್ಥಿತರಿದ್ದರು.
