ಮಂಗಳೂರು : ಡಾ. ವಾಗೀಶ್ವರಿ ಶಿವರಾಮರ 35ನೇ ಕೃತಿ ‘108 ಚೈತನ್ಯದಾಯಿನೀ – ಕಥಾ ಮಾಲಾ’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 22 ಜನವರಿ 2025ರಂದು ಮಂಗಳೂರಿನ ಚಿಲಿಂಬಿಯ ಕೋಟೆಕಣಿ ರಸ್ತೆಯಲ್ಲಿರುವ ಸದ್ಭೋಧ ಗುರುಕುಲದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಎಸ್. ಎಸ್. ನಾಯಕ್ ಮಾತನಾಡಿ “ಜ್ಞಾನ ನೀಡುವ ಪುಸ್ತಕ ಒಬ್ಬ ಒಳ್ಳೆಯ ಗೆಳೆಯ. ದೇಶ, ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಜ್ಞಾನ ನೀಡುವ ಪುಸ್ತಕಗಳನ್ನು ಬಾಲ್ಯದಲ್ಲಿಯೇ ಓದುವ ಹವ್ಯಾಸ ಬೆಳೆಸಿಕೊಂಡಾಗಲೇ ಸತ್ಪ್ರಜೆಗಳಾಗಬಹುದು. ಡಾ. ವಾಗೀಶ್ವರಿ ಶಿವರಾಮರ 35ನೇ ಕೃತಿ ‘108 ಚೈತನ್ಯದಾಯಿನೀ ಕಥಾ ಮಾಲಾ’ ಕೃತಿಯಲ್ಲಿರುವ 108 ಕಥೆಗಳು, ಸುಭಾಷಿತಗಳು ಎಲ್ಲರಲ್ಲೂ ಚೈತನ್ಯವನ್ನು ಅರಳಿಸುವ ಟಾನಿಕ್ (ರಸಾಯನ )ಆಗಿದೆ” ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಎನ್. ಐ. ಟಿ. ಕೆ. ನಿರ್ಮಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಮಾತನಾಡಿ “ಹಿರಿಯರು ಮನೆಯಲ್ಲಿ ಸ್ತೋತ್ರ ಮಂತ್ರಗಳನ್ನು ಗಟ್ಟಿಯಾಗಿ ಉಚ್ಚರಿಸುತ್ತಾ, ಉತ್ತಮ ಕೃತಿಗಳನ್ನು ಓದುತ್ತಾ, ಒಳ್ಳೆಯ ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕು. ಅವಾಗಲೇ ಮಕ್ಕಳು ಸಂಸ್ಕಾರವಂತರಾಗುತ್ತಾರೆ” ಎಂದು ತಿಳಿಸಿದರು.
ಕೃತಿಯ ಲೇಖಕ ಡಾಕ್ಟರ್ ವಾಗೀಶ್ವರಿ ಶಿವರಾಮ್ ಮಾತನಾಡಿ “ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆಗೊಂಡ ದಿನವೇ ಕೃತಿಯು ಲೋಕಾರ್ಪಣೆಯಾಗಿದೆ. ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಕೃತಿಯು ಪ್ರೇರಣೆ ನೀಡಲಿ ಹಾಗೂ ಎಲ್ಲರಲ್ಲೂ ಚೈತನ್ಯ ಅರಳಲಿ” ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀಯುತರಿಂದ ‘ಸುಂದರಕಾಂಡ’ದ ಪ್ರವಚನ ನಡೆಯಿತು. ಗುರುಕುಲದ ಸಂಚಾಲಕರಾದ ಕೃಷ್ಣದೇವ ನಾವಡರು ವಂದನಾರ್ಪಣೆ ಸಲ್ಲಿಸಿದರು.