ಉಡುಪಿ : ಆಂಧ್ರ ಪ್ರದೇಶದ ಹಿಂದೂಪುರದ ‘ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿ’ ಇದರ ಆಶ್ರಯದಲ್ಲಿ ಪರ್ಯಾಯ ಪುತ್ತಿಗೆ ಕೃಷ್ಣ ಮಠದ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದ ಮಧ್ವಮಂಟಪ ಹಾಗೂ ರಾಜಾಂಗಣದಲ್ಲಿ 100 ಮಂದಿ ನೃತ್ಯ ಕಲಾವಿದರಿಂದ ಸತತ 14 ಗಂಟೆಗಳ ಶಾಸ್ತ್ರೀಯ ನೃತ್ಯ ಪ್ರದರ್ಶನ ಗುರುವಾರ ದಿನಾಂಕ 17 ಅಕ್ಟೋಬರ್ 2024ರಂದು ನಡೆಯಿತು.
ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಆಯ್ದ 100 ನೃತ್ಯ ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದರು. 5ರಿಂದ 60 ವರ್ಷದವರೆಗಿನ ಹಿರಿ ಕಿರಿಯ ಒಟ್ಟು 100 ಮಂದಿ ಕಲಾವಿದೆಯರು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಸತತ 14 ಗಂಟೆಗಳ ಕಾಲ ಎಡೆಬಿಡದೆ ಕೂಚುಪುಡಿ, ಭರತನಾಟ್ಯ,ಆಂಧ್ರ ನೃತ್ಯ ಹಾಗೂ ತೆಲಂಗಾಣ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನೃತ್ಯ ಪ್ರದರ್ಶನ ಉದ್ಘಾಟಿಸಿ, ಶುಭ ಹಾರೈಸಿದರು. ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಚಾಲಕಿ ಚಂದ್ರಭಾನು ಚತುರ್ವೇದಿ, ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು. ಶ್ರೀಮಠದ ದಿನಾನ ನಾಗರಾಜ ಆಚಾರ್ ಸ್ವಾಗತಿಸಿ, ಕಾವ್ಯದರ್ಶಿ ಪ್ರಸನ್ನಾಚಾರ ವಂದಿಸಿದರು.