ಮಡಿಕೇರಿ : ಅಲ್ಲಾರಂಡ ರಂಗಚಾವಡಿ ಮತ್ತು ಮಡಿಕೇರಿ ಕೊಡವ ಸಮಾಜದ ವತಿಯಿಂದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 158ನೇ ಜನ್ಮ ದಿನವನ್ನು ದಿನಾಂಕ 21 ಸೆಪ್ಟೆಂಬರ್ 2025ರಂದು ಆಚರಿಸಲಾಗುತ್ತದೆಂದು ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10-30 ಗಂಟೆಗೆ ಕೊಡವ ಸಮಾಜದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಅಪ್ಪಚ್ಚ ಕವಿ ಕಲಾ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಮನೋಜ್ ಮಂದಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಲ್ಲಾರಂಡ ರಂಗಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಪಾಲ್ಗೊಳ್ಳಲಿದ್ದಾರೆ.
ಸಾಕ್ಷ್ಯ ಚಿತ್ರ ಪ್ರದರ್ಶನ : ಕಾರ್ಯಕ್ರಮದಲ್ಲಿ ತನ್ನ ನಿರ್ದೇಶನ ಮತ್ತು ನಿರ್ಮಾಣದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಗೆ ಸಂಬಂಧಿಸಿದ ಸಾಕ್ಷ್ಯ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದು ಅಲ್ಲಾರಂಡ ವಿರಲ ನಂಜಪ್ಪ ತಿಳಿಸಿದರು. ಸಾಕ್ಷ್ಯ ಚಿತ್ರ 30 ನಿಮಿಷದ್ದಾಗಿದ್ದು, ಪ್ರದರ್ಶನವನ್ನು ಕೊಡವ ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ ಹಾಗೂ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಪ್ರದರ್ಶನವನ್ನು ಉದ್ಘಾಟಿನಲಿದ್ದಾರೆ.
ಸಾಹಿತಿ ನಾಗೇಶ್ ಕಾಲೂರುರಿಗೆ ಸನ್ಮಾನ : ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರು ಸಾಹಿತ್ಯ ಕ್ಷೇತ್ರದತ್ತ ಒಲವು ತೋರುವ ಅಂದಿನ ದಿನಮಾನಗಳಲ್ಲಿ ಕೊಡವೇತರರಾದ ವೆಂಕಟಾದ್ರಿ ಶಾಮರಾವ್ ಸೇರಿದಂತೆ ಕೆಲವರು ಪ್ರೋತ್ಸಾಹಿಸಿದ್ದರು. ಈ ಹಿನ್ನೆಲೆಯಲ್ಲಿ ಅಪ್ಪನೆರವಂಡ ಅಪ್ಪಚ್ಚ ಕವಿಯ ಸ್ಮರಣೆಯ ಕಾರ್ಯಕ್ರಮದಲ್ಲಿ ಕೊಡವ ಭಾಷಾ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳ ಹಿನ್ನೆಲೆಯಲ್ಲಿ ನಾಗೇಶ್ ಕಾಲೂರು ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಪುಸ್ತಕಗಳ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಉಳ್ಳಿಯಡ ಡಾಟಿ ಪೂವಯ್ಯ ಅವರು ರಚಿಸಿರುವ ‘ತೇನೆತ್ತೆಕಾರ’ ಪುಸ್ತಕದ ಕುರಿತು ಸಿನಿಮಾ ಕಲಾವಿದೆ ಚೆರುವಾಳಂಡ ಸುಜಲ ನಾಣಯ್ಯ ಅವರು ಮಾತನಾಡಲಿದ್ದಾರೆ. ಡಾ. ಮುಲ್ಲೇಂಗಡೆ ದೇವತಿ ಪೂವಯ್ಯ ಅವರು ರಚಿಸಿರುವ ‘ನೆಲಂಜೊಪ್ಪೆ’ ಕವನ ಸಂಕಲನದ ಕುರಿತು ಸಾಹಿತಿ ಕರವಂಡ ಸೀಮಾ ಗಣಪತಿ ಮತ್ತು ದಿ. ಪಳಂಗಂಡ ಚಂಗಪ್ಪ ಅವರು ಅನುವಾದಿಸಿರುವ ‘ಕೊಡಗ್‌ರ ಗೌರಮ್ಮಂಡ ಕಡೆಮೊತ್ತೆ’ ಕುರಿತು ಪುರಾತತ್ವ ಅಧ್ಯಯನಗಾರ್ತಿ ಮಾಳೇಟಿರ ಸೀತಮ್ಮ ವಿವೇಕ್ ಮತ್ತು ಸಾಹಿತಿ ಐಚಂಡ ರಶ್ಮಿ ಮೇದಪ್ಪ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಕವಿ ಗೋಷ್ಠಿ: ಸಾಹಿತಿ ಬೊಟ್ಟೋಳಂಡ ದಿವ್ಯ ದೇವಯ್ಯ ಅವರು ಮಾತನಾಡಿ, ಅಪ್ಪನೆರವಂಡ ಅಪ್ಪಚ್ಚ ಕವಿ ಸ್ಮರಣೆಯ ಕಾರ್ಯಕ್ರಮದ ಸಂದರ್ಭ, ಕೊಡವ ಹಳೆಯ ಕೆಲ ಪದಗಳನ್ನು ಕೇಂದ್ರೀಕರಿಸಿ ಕವನಗಳನ್ನು ರಚಿಸುವಂತೆ ಕೋರಲಾಗಿತ್ತು. ಅದರಂತೆ ಬಂದಿರುವ ಸುಮಾರು 15 ರಿಂದ 18 ಕವನಗಳ ವಾಚನ ನಡೆಯಲಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತ್ಯಾಸಕ್ತರಾದ ಅಯಲಪಂಡ ದೊರೆ ದೇವಯ್ಯ ಉಪಸ್ಥಿತರಿದ್ದರು.