ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಕ್ಷಗಾನ ಕೇಂದ್ರ ಇಂದ್ರಾಳಿಯ 51ನೇ ವಾರ್ಷಿಕೋತ್ಸವ ಹಾಗೂ ದಿ. ಎಂ.ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 28-01-2024ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ “ಪಾರಂಪರಿಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಹಾಗೂ ಯುವಕರಿಗೆ ಯಕ್ಷ ಶಿಕ್ಷಣ ನೀಡುವ ಉದ್ದೇಶದಿಂದ ಡಾ. ಕೆ. ಶಿವರಾಮ ಕಾರಂತ ಮತ್ತು ಕು.ಶಿ. ಹರಿದಾಸ ಭಟ್ಟರ ಆಸಕ್ತಿಯಿಂದ ಹುಟ್ಟಿಕೊಂಡ ಯಕ್ಷಗಾನ ಕೇಂದ್ರ ಇಂದು ಮಾಹೆಯ ಸರ್ವರೀತಿಯ ಪ್ರೋತ್ಸಾಹದಿಂದ ಬೆಳೆಯುತ್ತಿದೆ. ಅಲ್ಲದೆ ಯುವ ಜನತೆಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸುವ ಮೂಲಕ ಯಕ್ಷಗಾನ ಕಲೆಯನ್ನು ಬೆಳೆಸುತ್ತಿದೆ. ಗುರುಕುಲ ಪದ್ಧತಿಯಂತೆ ಶಿಕ್ಷಣದ ಜೊತೆಗೆ ಯಕ್ಷಗಾನ ಕಲಿಸಲಾಗುತ್ತಿದೆ.” ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಮೇಳಗಳ ಯಜಮಾನ ಹಾಗೂ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆ “ಜೋಡಾಟದ ಪ್ರಕ್ರಿಯೆಗಳು ನಿಂತು ಹೋಗಿ ಕೂಡಾಟ ಆರಂಭವಾಗಿದೆ. ಜೋಡಾಟದ ಆಯೋಜನೆಯಲ್ಲಿ ಎಂ.ಎಂ. ಹೆಗ್ಡೆಯವರದ್ದು ಮೇರು ವ್ಯಕ್ತಿತ್ವವಾಗಿತ್ತು.” ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ರಾಧಾ ಡೆವಲಪರ್ಸಿನ ಎಂ.ಡಿ ಮನೋಹರ ಶೆಟ್ಟಿ, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಶುಭ ಹಾರೈಸಿದರು. ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಶ್ರೀ ವಿಶ್ವನಾಥ ಶೆಣೈ, ಶ್ರೀ ಭುವನ ಪ್ರಸಾದ್ ಹೆಗ್ಡೆ, ಶ್ರೀ ಮಂಜುನಾಥ ಮಯ್ಯ, ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೇಂದ್ರದ ಭಾಗವತರಾದ ಶ್ರೀ ಉಮೇಶ್ ಸುವರ್ಣ ಅವರಿಗೆ ದಿ. ಎಂ.ಎಂ. ಹೆಗ್ಡೆ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಎಂ. ಹೆಗ್ಡೆ ಟ್ರಸ್ಟ್ ವತಿಯಿಂದ ಹಿರಿಯ ಕಲಾವಿದ ಆನಂದ ರಾವ್ ಉಪ್ಪಿನಕುದ್ರು ಅವರಿಗೆ ಸಹಾಯಧನ ವಿತರಿಸಲಾಯಿತು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದು, ಎಂ. ಜಿ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿ, ವಂದಿಸಿದರು.
ಕೇಂದ್ರದಲ್ಲಿ ತರಬೇತಿಗೊಂಡ ವಿವಿಧ ಹಂತಗಳ ಯಕ್ಷಗಾನದ ವಿದ್ಯಾರ್ಥಿಗಳಿಂದ ಚಂಡೆ, ಮದ್ದಳೆ, ಭಾಗವತಿಕೆ, ಪೀಠಿಕಾ ಭಾಗದ ನೃತ್ಯಗಳು ಕಾರ್ಯಕ್ರಮದ ಆರಂಭದಲ್ಲಿ ಪ್ರದರ್ಶನಗೊಂಡವು. ನಂತರ ಕೇಂದ್ರದ ವಿದ್ಯಾರ್ಥಿಗಳಿಂದ ‘ವಿದ್ಯುನ್ಮತಿ ಕಲ್ಯಾಣ’ ಹಾಗೂ ಹವ್ಯಾಸಿ ಕಲಾವಿದರಿಂದ ‘ಶಶಿಪ್ರಭಾ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು. ಕೇಂದ್ರದ ಪೂರ್ಣಕಾಲಿಕ ವಿದ್ಯಾರ್ಥಿಗಳು, ವಾರಾಂತ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹೆತ್ತವರು, ಹಿರಿಯರು ಎಲ್ಲರೂ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.