ಮೂಡುಬಿದಿರೆ: ಯಕ್ಷ ಮೇನಕಾ ಮೂಡುಬಿದಿರೆ ಇದರ 17ನೇ ವರ್ಷದ ಕಾರ್ಯಕ್ರಮದಂಗವಾಗಿ ಭಾಗವತ ಪ್ರಫುಲ್ಲಚಂದ್ರ ನೆಲ್ಯಾಡಿ ಇವರಿಗೆ ಸನ್ಮಾನ ಹಾಗೂ ಹಾಸ್ಯಗಾರ ಕಡಬ ದಿನೇಶ ರೈ ಇವರಿಗೆ ಯಕ್ಷ ಪ್ರೋತ್ಸಾಹ ನಿಧಿ ಸಮಾರ್ಪಣಾ ಸಮಾರಂಭವು ದಿನಾಂಕ 29 ಜೂನ್ 2025ರ ರವಿವಾರದಂದು ಮೂಡುಬಿದಿರೆಯ ಪೊನ್ನೆಚಾರಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಕಲಾ ಮಂದಿರದಲ್ಲಿ ನಡೆಯಿತು.
ರಂಗಸ್ಥಳ ಮಂಗಳೂರು ಇದರ ಅಧ್ಯಕ್ಷ ಹಾಗೂ ಪ್ರಧಾನ ಪ್ರೋತ್ಸಾಹಕರಾದ ಎಸ್. ಎಲ್. ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಶ್ರೀಪತಿ ಭಟ್ ಮೂಡುಬಿದಿರೆ, ಕೆನರಾ ಬ್ಯಾಂಕ್ ಇದರ ನಿವೃತ್ತ ಅಧಿಕಾರಿ ಎ. ಎಸ್. ಭಟ್ ಮಂಗಳೂರು, ಯಕ್ಷ ಚೈತನ್ಯದ ಅಧ್ಯಕ್ಷರಾದ ಕೃಷ್ಣಮೂರ್ತಿ ಕಟೀಲು, ಭಾಗವತ ಮಾಧವ ಆಚಾರ್ಯ ಸಂಪಿಗೆ, ಪ್ರಗತಿಪರ ಕೃಷಿಕ ರಮೇಶ್ ಭಟ್ ಕೇಂಜೆ, ಪೊನ್ನೆಚಾರಿ ದೇವಳದ ಆನುವಂಶಿಕ ಆಡಳಿತ ಮೊಕೇಸರ ಅಶೋಕ ಕಾಮತ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಯಕ್ಷ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ ಮಾತನಾಡಿ “ಕಲಾ ಸಂಘಟನೆ ಸುಲಭದ ಕಾರ್ಯ ಅಲ್ಲ, ಅದು ಶ್ರದ್ಧೆ, ಪರಿಶ್ರಮ ಬೇಡುವ ಕೈಂಕರ್ಯ. ಯಕ್ಷ ಮೇನಕಾದವರು ಆಟ, ಕೂಟಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವುದು ಶ್ಲಾಘನೀಯ. ದಿನೇಶ ರೈ ಯವರು ಹಾಸ್ಯಗಾರರು. ಕಥೆಗೆ ಪೂರಕವಾಗಿ ಯಾವುದೋ ಸಂದೇಶ ನೀಡುವ ಉತ್ಸಾಹ ಹೊಂದಿರುತ್ತಾರೆಯೇ ಹೊರತು ಇತರ ಉದ್ದೇಶದಿಂದಲ್ಲ” ಎಂದು ಸ್ಪಷ್ಟಪಡಿಸಿದರು. ಅನಂತ ನೆಲ್ಲಿಮಾರು, ನಾಗರಾಜ ಶರ್ಮ ಸಮ್ಮಾನ ಪತ್ರಗಳನ್ನು ವಾಚಿಸಿದರು. ‘ಯಕ್ಷ ಮೇನಕಾ’ ಇದರ ಅಧ್ಯಕ್ಷರಾದ ಸದಾಶಿವ ರಾವ್ ನೆಲ್ಲಿಮಾರು ಸ್ವಾಗತಿಸಿ ಪ್ರಸ್ತಾವನೆಗೈದು, ಶಿವದತ್ತ ಭಟ್ ನಿರೂಪಿಸಿ, ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ನಡೆದ ‘ಶ್ರೀ ರಾಮಾಂಜನೇಯ’ ಯಕ್ಷಗಾನ ತಾಳಮದ್ದಳೆಯಲ್ಲಿ ನೆಲ್ಯಾಡಿ, ಭರತ್‌ರಾಜ್, ದೇವಾನಂದ, ಶ್ರೀಧರ, ವಗೆನಾಡು, ಮುರಾರಿ, ಉಜಿರೆ, ಹಿರಣ್ಯ, ಪವನ್, ಪಶುಪತಿ, ಡಾ. ಮಹೇಶ್, ದಿನೇಶ್ ರೈ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.