ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 16 ಫೆಬ್ರವರಿ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ “ಜನರಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಳುಹಿಸಿಕೊಡುವ ಕಲೆ ಎಂದರೆ ಅದು ಯಕ್ಷಗಾನ. ಹಳ್ಳಿ ಜನರಿಗೆ ರಾಮಾಯಣ, ಮಹಾಭಾರತ ಕಳುಹಿಸಿಕೊಟ್ಟಿರುವುದೇ ಈ ಯಕ್ಷಗಾನ. ಯಕ್ಷಗಾನ ಇಂದು ವಿಶ್ವಗಾನವಾಗಲು ನೆರವಾದ ಡಾ. ಕಾರಂತರು ಸೇರಿದಂತೆ ಕಲಾವಿದರನ್ನು ಇಲ್ಲಿ ನೆನಪಿಸಲೇಬೇಕು. ಡಾ. ತಲ್ಲೂರು ಅಧ್ಯಕ್ಷತೆಯಲ್ಲಿ ಯಕ್ಷಗಾನ ಅಕಾಡೆಮಿ ಇಂದು ಉತ್ತಮ ಕಾರ್ಯ ಮಾಡುತ್ತಿದೆ. ಯಕ್ಷಗಾನದ ವೇಷಭೂಷಣಗಳು, ಹಿರಿಯ ಕಲಾವಿದರ ಬಗ್ಗೆ ದಾಖಲಾತಿಯನ್ನು ಅಕಾಡೆಮಿ ಮಾಡಬೇಕು. ಯಕ್ಷಗಾನ ಒಂದು ದೇವರ ಕೆಲಸ ಎಂದು ಅದರ ಬೆಳವಣಿಗೆಗೆ ಶ್ರಮಿಸಿದ ಹಿರಿಯ ಕಲಾವಿದರನ್ನು ಮರೆಯಬಾರದು” ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ, “ಸರಕಾರ ನೀಡಿದ ಅನುದಾನವನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ. ಈಗಾಗಲೇ ಹಿರಿಯ ಕಲಾವಿದರ ಬಗ್ಗೆ 58 ಪುಸ್ತಕಗಳನ್ನು ಮಾಡಿದ್ದೇವೆ. ಮೇರು ಕಲಾವಿದರಾದ ಅರುವ ಕೊರಗಪ್ಪ ಹಾಗೂ ಬನ್ನಂಜೆ ಸಂಜೀವ ಸುವರ್ಣ ಇವರ ಬಗ್ಗೆ ದಾಖಲೀಕರಣ ನಡೆಯಲಿದೆ. ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡಿದರೆ ಕೇವಲ ಕಲೆ ಮಾತ್ರವಲ್ಲದೆ ಮಕ್ಕಳಲ್ಲಿ ಸಂಸ್ಕೃತಿ ಉಳಿಸುವ ಕಾರ್ಯ ಕೂಡಾ ನಡೆಯುತ್ತಿದೆ. ಇಂದು ಅಕಾಡೆಮಿಯಲ್ಲಿ ಒಳ್ಳೆಯ ಸದಸ್ಯರಿದ್ದಾರೆ, ರಿಜಿಸ್ಟ್ರಾರ್ ಇದ್ದಾರೆ. ಹೀಗಾಗಿ ಯಕ್ಷಗಾನ ಕಲಾವಿದರು ಅಕಾಡೆಮಿಯ ಪ್ರಯೋಜನ ಪಡೆಯಲು ಮುಂದಾಗಬೇಕು” ಎಂದರು.
ಮಣಿಪಾಲ ಮಾಹೆಯ ಸಹ ಕುಲಪತಿ ಡಾ. ನಾರಾಯಣ ಸಭಾಹಿತ್ ಮಾತನಾಡಿ, “ಗಂಡುಕಲೆ ಎಂದೇ ಖ್ಯಾತವಾದ ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರು ಕೂಡಾ ಮಿಂಚುತ್ತಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ಲಭಿಸುವ ದಿನಗಳು ದೂರವಿಲ್ಲ” ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, “ಕಲಾವಿದರ ಜೀವನಾದರ್ಶ, ಬದುಕಿನ ಮೌಲ್ಯಗಳು ಎಂದಿಗೂ ಪ್ರಸ್ತುತ. ಕಲಾವಿದರನ್ನು ಗುರುತಿಸಿ, ಸನ್ಮಾನಿಸಿ, ಪ್ರಶಸ್ತಿ ನೀಡುತ್ತಿರುವ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಇವರ ಕಾರ್ಯ ಅಭಿನಂದನೀಯ” ಎಂದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, “ಅಕಾಡೆಮಿ ಅರ್ಜಿ ಸಲ್ಲಿಸದೆ ಯಕ್ಷಗಾನ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ” ಎಂದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, “ಅಕಾಡೆಮಿಗೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯ ಮಾಡಬೇಕಿದೆ. ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 3000ಕ್ಕೂ ಅಧಿಕ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಎಂ.ಎಲ್.ಸಿ. ಮಂಜುನಾಥ ಭಂಡಾರಿಯವರ ಮುಂದಾಳುತ್ವದಲ್ಲಿ ಯಕ್ಷಗಾನ ಕಲೆಗೆ ಸರಕಾರದ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಲು ಶ್ರಮಿಸಬೇಕು” ಎಂದರು.
ಪಾರ್ತಿಸುಬ್ಬ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು, “ಈ ಪ್ರಶಸ್ತಿ ಯಕ್ಷಗಾನ ಕಲಾವಿದರಿಗೆ ಸಂದ ಗೌರವ” ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಅಧ್ಯಕ್ಷ ಎಂ. ಗಂಗಾಧರ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ರಿಜಿಸ್ಟ್ರಾರ್ ನಮೃತಾ ಇವರಿಗೆ ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಸದಸ್ಯರಾದ ಸುರೇಶ್ ಜಿ. ನಾಯ್ಕ, ರಾಘವ ಎಚ್., ಕೃಷ್ಣಪ್ಪ ಪೂಜಾರಿ ಕಿನ್ಯಾ, ಗುರುರಾಜ ಭಟ್, ವಿನಯ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಕೊಪ್ಪಲ ಮೋಹನ ಕದ್ರಿ, ಸತೀಶ್ ಅಡಪ ಸಂಕಬೈಲ್, ರಾಜೇಶ್ ಕುಳಾಯಿ, ದಯಾನಂದ ಪಿ. ಬೆಳಾಲ್, ಸುಧಾಕರ ಶೆಟ್ಟಿ, ಪ್ರಥ್ವಿ ರಾಜೇಶ್ ಕುಮಾರ್, ಪುಟ್ಟಸ್ವಾಮಿ ಎ.ಆರ್., ವಿದ್ಯಾಧರ ಜಲವಳ್ಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2024ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಯನ್ನು ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂ.ನಗದನ್ನು ಒಳಗೊಂಡಿದೆ. ಅಕಾಡೆಮಿಯ ‘ಗೌರವ ಪ್ರಶಸ್ತಿ’ಯನ್ನು ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ, ಕೋಡಿ ವಿಶ್ವನಾಥ ಗಾಣಿಗ, ರಾಘವ ದಾಸ್, ಸುಬ್ರಾಯ ಹೊಳ್ಳ, ಮೂಡಲಪಾಯ ಯಕ್ಷಗಾನ ಕಲಾವಿದ ಕಾಂತರಾಜು ಅವರಿಗೆ ಪ್ರದಾನ ಮಾಡಲಾಯಿತು. ಈ ಪುರಸ್ಕಾರ 50,000 ರೂ. ನಗದನ್ನು ಒಳಗೊಂಡಿದೆ.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಯನ್ನು ಅಡ್ಕ ಗೋಪಾಲಕೃಷ್ಣ ಭಟ್, ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಉಮೇಶ್ ಕುಪ್ಪೆಪದವು, ಶಿವಾನಂದ ಗೀಜಗಾರು, ಮುಗ್ವಾ ಗಣೇಶ್ ನಾಯ್ಕ, ಸುರೇಂದ್ರ ಮಲ್ಲಿ, ಅಂಡಾಲ ದೇವಿಪ್ರಸಾದ ಶೆಟ್ಟಿ, ಕೃಷ್ಣಪ್ಪ, ಹಳುವಳ್ಳಿ ಜ್ಯೋತಿ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 25,000 ರೂ. ನಗದನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ‘ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿ’ಯನ್ನು ಕರ್ಗಲ್ಲು ವಿಶ್ವೇಶ್ವರ ಭಟ್ಟ ಇವರಿಗೆ ನೀಡಲಾಯಿತು. ಪ್ರಶಸ್ತಿ 25 ಸಾವಿರ ರೂ. ನಗದನ್ನು ಒಳಗೊಂಡಿದೆ. ಅಕಾಡೆಮಿ ಸದಸ್ಯ ರಾಘವ ಎಚ್. ಕಾರ್ಯಕ್ರಮ ನಿರೂಪಿಸಿ, ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಸ್ವಾಗತಿಸಿ, ವಂದಿಸಿದರು.