ಕಾರ್ಕಳ: ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 06 ಡಿಸೆಂಬರ್ 2024ರ ಶುಕ್ರವಾರದಂದು ಶಿರ್ಲಾಲು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.


ಸಮ್ಮೇಳನವನ್ನು ಉದ್ಘಾಟಿಸಿದ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಮಾತನಾಡಿ “ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಸಾಹಿತ್ಯ ಸಮ್ಮೇಳನದ ಮೂಲಕ ನಡೆಯುತ್ತಿದೆ.” ಎಂದರು.

ಈಸಂದರ್ಭದಲ್ಲಿ ಆರ್. ರಮೇಶ್ ಪ್ರಭು ಇವರ ‘ಹೊಂಗನಸು’, ಎಚ್. ವಿಧಾತ್ರಿ ರವಿಶಂಕರ್ ಇವರ ‘ನಕ್ಷತ್ರ ಪಟಲ’ ಹಾಗೂ ಶೈಲಜಾ ಹೆಗ್ಡೆ ಬರೆದ ‘ಭಾವ ಲಹರಿ’ ಕೃತಿಗಳನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಲೋಕಾರ್ಪಣೆಗೊಳಿಸಿ, ಆಶಯ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಕಂಬಳ ಕ್ಷೇತ್ರದ ಸಾಧಕ ಶ್ರೀಕಾಂತ್ ಭಟ್ ನಂದಳಿಕೆ ಮತ್ತು ಕಂಬಳದ ಕೋಣ ಪಾಂಡು, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿನಾಯಕ ನಾಯ್ಕ, ಜಾಗತಿಕ ದಾಖಲೆಯ ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಕೋಣಗಳ ಯಜಮಾನ ಮಿಜಾರು ಶಕ್ತಿಪ್ರಸಾದ್ ಶೆಟ್ಟಿ, ವರ್ಣಚಿತ್ರ ಕಲಾವಿದ ಗಂಜೀಫಾ ರಘುಪತಿ ಭಟ್ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕಿ ವಿನಮ್ರ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಿರಾಜ ಜೈನ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಪರಿಷತ್ ಧ್ವಜಾರೋಹಣಗೈದರು. ಕರ್ನಾಟಕ ಬ್ಯಾಂಕ್ ಇದರ ಶಾಖಾ ಪ್ರಬಂಧಕ ಉದಯ್ ಶಂಕರ್ ಸಮ್ಮೇಳನದ ಮೆರವಣಿಗೆಗೆ ಹಾಗೂ ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷರಾದ ಎಸ್. ನಿತ್ಯಾನಂದ ಪೈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಪ್ರೊ. ಕೆ. ಗುಣಪಾಲ ಕಡಂಬ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೂಡ ಸದಾನಂದ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ., ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕ್ವಾರಿ ಮತ್ತು ಕ್ರಷರ್ ಓನರ್ ಅಸೋಸಿಯೇಶನ್ ಇದರ ರಾಜ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೊಳಿ, ಮಾಜಿ ಸಮ್ಮೇಳನಾಧ್ಯಕ್ಷ ವಿಠಲ್ ಶೆಟ್ಟಿ ಬೇಲಾಡಿ, ಮುನಿರಾಜ್ ರೆಂಜಾಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಜೈನ್, ಶಿರ್ಲಾಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬೇಬಿ ಕೆ. ಈಶ್ವರಮಂಗಲ, ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕ ನರಸಿಂಹ ನಾಯಕ್, ಶಿರ್ಲಾಲು ಗ್ರಾ.ಪಂ. ಅಧ್ಯಕ್ಷೆ ಭಾರತಿ ದೇವಾಡಿಗ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲಿಕ ಮರಾಠ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸ್ವಾಗತಿಸಿ, ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ದೇವದಾಸ್ ಕೆರೆಮನೆ ವಂದಿಸಿದರು. ಶಿರ್ಲಾಲು ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯಿಂದ ಸಾಂಸ್ಕೃತಿಕ ಕಲಾ ತಂಡಗಳು, ಹುಲಿ ವೇಷ, ಚೆಂಡೆವಾದನದ ಮೂಲಕ ಪುರ ಮೆರವಣಿಗೆ ನಡೆಯಿತು.
