ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ 27ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ 21 ಫೆಬ್ರವರಿ 2025ರ ಶುಕ್ರವಾರದಂದು ಮಗಳೂರಿನ ಕೊಣಾಜೆಯಲ್ಲಿರುವ ಮಂಗಳ ಗಂಗೋತ್ರಿಯ ಸಭಾಂಗಣದಲ್ಲಿ ನಡೆಯಿತು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಮಾತನಾಡಿ “ರಾಜ್ಯದಲ್ಲಿ ಒಂದರಿಂದ 10ನೆಯ ತರಗತಿವರೆಗೆ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯವಾಗಬೇಕು. ಸುಗ್ರೀವಾಜ್ಞೆಯ ಮೂಲಕವಾದರೂ ಇದರ ಅನುಷ್ಠಾನವಾಗಬೇಕು. ಆಂಗ್ಲ ಭಾಷಾ ಕಲಿಕೆ ಬೇಡವೆಂದೇನೂ ಅಲ್ಲ. ಆದರೆ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಇಂಗ್ಲಿಷ್ ಭಾಷೆ ಲಿಂಕ್ ಲ್ಯಾಂಗ್ವೆಜ್ ಆಗಿ ಕಲಿಯುವಂತಾಗಬೇಕು. ಆಗ ಕನ್ನಡ ಇನ್ನಷ್ಟು ಉತ್ತುಂಗಕ್ಕೇರಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಮಂದಿ ತಮ್ಮ ಮಕ್ಕಳನ್ನೂ ಕರೆತರಬೇಕು. ಸಾಹಿತ್ಯ ಪುಸ್ತಕದ ಪರಿಚಯವನ್ನು ಮಕ್ಕಳಿಗೆ ಕಲಿಸಿಕೊಬೇಕು. ವೀಕೆಂಡ್‌ಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಬೀಚ್, ಮಾಲ್‌ಗಳಿಗೆ ಕರೆದೊಯ್ಯುವಂತೆ ಸಾಹಿತ್ಯ ಕಾರ್ಯಕ್ರಮಗಳಿಗೂ ಕರೆತರಬೇಕು. ಪ್ರತಿಯೊಂದು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯವಿರಬೇಕು. ಆರಾಧನಾ ಕೇಂದ್ರ ಗಳಲ್ಲೂ ಗ್ರಂಥಾಲಯಗಳ ನಿರ್ಮಾಣವಾಗಬೇಕು. ಶಾಲಾ ಕಾಲೇಜುಗಳ ವರ್ಧಂತಿಯಂದು ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದರರಿಗೆ ಪುಸ್ತಕವನ್ನೇ ಬಹುಮಾನವಾಗಿ ನೀಡಬೇಕು. ಎಲ್ಲಾ ಯುವಕ ಮಂಡಲಗಳು, ಸಂಘಟನೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಪುಸ್ತಕವನ್ನೇ ಸ್ಮರಣಿಕೆಯಾಗಿ ನೀಡುವಂತಾಗಲಿ. 1990ರ ದಶಕದ ಆರಂಭದಿಂದ ನಮ್ಮ ದೇಶ ಐದು ಆತಂಕಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸಾಮಾಜಿಕವಾಗಿ ಸಮಸ್ತ ಭಾರತ ದೇಶ ಪ್ರತಿಗಾಮೀ ಮೌಲ್ಯಗಳ ತೆಕ್ಕೆಗೆ ಜಾರಿದೆ. ಇದು ಕಲೆ ಮತ್ತು ಸಾಹಿತ್ಯವನ್ನು ಹಿಂದಕ್ಕೆ ಸರಿಸಿ, ಜಾತಿಯನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಜಾಗತೀಕರಣ ಎಂಬ ಹೆಸರಲ್ಲಿ ಕತ್ತು ಕೊಯ್ಯುವ ಸ್ವಾರ್ಥವು ಆರ್ಥಿಕ ಮೌಲ್ಯವಾಗಿ ಬಿಟ್ಟಿದೆ ಎಂದು ಡಾ.ಬಿ.ಪ್ರಭಾಕರ ಶಿಶಿಲ ಹೇಳಿದರು. ರಾಜಕೀಯವು ಕೋಮು ದ್ವೇಷವನ್ನು ಅವಲಂಬಿಸಿದೆ. ಧರ್ಮವು ರಾಜಕೀಯ ಸ್ವರೂಪವನ್ನು ಪಡೆದು ಪರಧರ್ಮ ಸಹಿಷ್ಣುತೆಯನ್ನು ನಾಶ ಮಾಡಿದೆ. ಧರ್ಮ ಪುನರುತ್ಥಾನದ ಹೆಸರಲ್ಲಿ ಕೋಮುವಾದ ತಲೆ ಎತ್ತಿದೆ” ಎಂದರು.
ಸಮ್ಮೇಳನಕ್ಕೆ ಚಾಲನೆ ನೀಡಿದ ಪ್ರಸಿದ್ಧ ಕವಿ ಬಿ. ಆರ್. ಲಕ್ಷ್ಮಣ ರಾವ್ ಮಾತನಾಡಿ “ಕನ್ನಡ ಭಾಷೆ ಇಂದು ಆಂಗ್ಲ ಮತ್ತು ಹಿಂದಿ ಭಾಷೆಗಳ ನಡುವೆ ನಲುಗಿ ಹೋಗುತ್ತಿದೆ. ಕನ್ನಡದ ಉಳಿವಿನ ಬಗ್ಗೆ ಸರ್ಕಾರ ಸೇರಿದಂತೆ ಪ್ರತಿಯೊಬ್ಬ ಕನ್ನಡಿಗರೂ ಚಿಂತಿಸಬೇಕಾದ ಅವಶ್ಯಕತೆ ಇದೆ ಎಂದರು. ಸಾಹಿತ್ಯದಿಂದ ಲಾಭ ಏನೆಂದರೆ ಈ ಜಗತ್ತನ್ನು ಸ್ಪಷ್ಟವಾಗಿ ನೋಡಲು ನಮಗೆ ಕನ್ನಡಕ ಇರುವಂತೆ ಸಾಹಿತ್ಯ ನಮ್ಮೊಂದಿಗೆ ಇದೆ. ಸಾಹಿತ್ಯದಿಂದ ವ್ಯವಹಾರಿಕ ಲಾಭ ಕಡಿಮೆ ಆಂತರಿಕ ಸಂತೋಷ ಹೆಚ್ಚು” ಎಂದವರು ಹೇಳಿದರು.
ಸಮ್ಮೇಳನದ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದ ವಿಧಾನಸಭಾ ಅಧ್ಯಕ್ಷ ಯು. ಟಿ. ಖಾದರ್ ಮಾತನಾಡಿ “ಸಾಹಿತ್ಯ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕು. ನಮ್ಮ ಭಾಷೆ, ಸಂಸ್ಕೃತಿಯನ್ನು ಯಾವ ರೀತಿ ಮುಂದೆ ಕೊಂಡೊಯ್ಯಬೇಕು ಎಂಬುದಕ್ಕೆ ಈ ಸಾಹಿತ್ಯ ಸಮ್ಮೇಳನ ಚರ್ಚೆಯ ವೇದಿಕೆಯಾಗಬೇಕು. ಗ್ರಾಮ ಮಟ್ಟದ ಸಮ್ಮೇಳನಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಸ್ಥಳೀಯ ಸಾಹಿತಿಗಳನ್ನು ಒಳಗೊಂಡು ಪ್ರತಿ ಗಾಮ ಮಟ್ಟದಲ್ಲಿ ಕನಿಷ್ಟ ಎರಡು ವರ್ಷಕ್ಕೊಮ್ಮೆಯಾದರೂ ಸಾಹಿತ್ಯ ಸಮ್ಮೇಳನ ನಡೆಯಬೇಕು. ಗ್ರಾಮ ಪಂಚಾಯತ್ ಗಳು ಈ ನಿಟ್ಟಿನಲ್ಲಿ ಅನುದಾನ ಮೀಸಲಿಟ್ಟು ಮುತುವರ್ಜಿ ವಹಿಸಬೇಕು” ಎಂದು ನುಡಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಅಸೈಗೋಳಿಯ ಕೇಂದ್ರ ಮೈದಾನದಿಂದ ಹೊರಟ ಕನ್ನಡ ಸಾಂಸ್ಕೃತಿಕ ಮೆರವಣಿಗೆಗೆ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಚಾಲನೆ ನೀಡಿದರು. ಎರಡು ದಿನಗಳ ಈ ಸಮ್ಮೇಳನದಲ್ಲಿ ಒಟ್ಟು 18 ಕೃತಿಗಳು ಲೋಕಾರ್ಪಣೆಗೊಳ್ಳಲಿದ್ದು, 13 ಮಂದಿ ಸಾಧಕರಿಗೆ ಸನ್ಮಾನ ನೆರವೇರಲಿದೆ. ವಿವಿಧ ಸಾಹಿತ್ಯ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಅಗಲಿದ ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರರಾಗಿದ್ದ ದಿ. ಗುರುವಪ್ಪ ಎನ್. ಬಾಳೇಪುಣಿಯವರ ಹೆಸರಿನಲ್ಲಿ ಪುಸ್ತಕ ಮಳಿಗೆಯನ್ನು ತೆರೆಯಲಾಗಿದ್ದು, ಪುಸ್ತಕ ಹಾಗೂ ಇತರ ಮಳಿಗೆಯ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್.ಧರ್ಮ ಉದ್ಘಾಟಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಹಾಗೂ ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ, ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾದ ಮಮತಾ ಗಟ್ಟಿ, ಕಸಾಪ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಎಸ್. ಪ್ರದೀಪ ಕುಮಾರ ಕಲ್ಕೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ, ಮಂಗಳೂರು ವಿ.ವಿ.ಇದರ ರಿಜಿಸ್ಟ್ರಾರ್ ರಾಜು ಮೊಗವೀರ, ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಗೀತಾ ದಾಮೋದರ ಕುಂದರ್, ಉಳ್ಳಾಲ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ. ಎನ್., ಕಸಾಪ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಮಾಧವ ಎಂ. ಕೆ., ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಕಿರಣ್ ಪ್ರಸಾದ್ ರೈ, ವಿನಯ ಆಚಾರ್ಯ, ಪ್ರದೀಪಂ ಡಿಸೋಜ, ಎಚ್. ಆರ್.ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.
ಕಸಾಪ ದ. ಕ. ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನ ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿ, ವೇಣುಗೋಪಾಲ ಶೆಟ್ಟಿ ಹಾಗೂ ವಿಜಯ ಲಕ್ಷ್ಮೀ ನಿರೂಪಿಸಿ, ಗೌರವ ಕಾರ್ಯದರ್ಶಿ ರಾಜೇಶ್ವರೀ ಎಂ. ವಂದಿಸಿದರು.