ಮಂಗಳೂರು : ಸಂದೇಶ ಸಂಸ್ಥೆಯ ಆವರಣದಲ್ಲಿ ದಿನಾಂಕ 21 ಜನವರಿ 2026ರಂದು ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ 35ನೇ ವರ್ಷದ ‘ಸಂದೇಶ ಪ್ರಶಸ್ತಿ 2026’ ಪ್ರದಾನ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ “ಇಂದು ಜಗತ್ತು ಯುದ್ಧದ ಕಾತರ, ತಲ್ಲಣದಿಂದ ತುಂಬಿದೆ. ಲಾಭಕೋರತನ, ಸಾಮ್ರಾಜ್ಯಶಾಹಿತ್ವದ ಲಾಲಸೆಗಳು ಗಾಬರಿ ಹುಟ್ಟಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಮಾತ್ರ ಸಮಾಜವನ್ನು ಒಗ್ಗೂಡಿಸುತ್ತವೆ. ಜಗತ್ತಿಗೆ ಸೌಹಾರ್ದ, ಸಾಮರಸ್ಯ, ಎಲ್ಲರ ಒಳಗೊಳ್ಳುವಿಕೆಯ ಜಾತ್ಯತೀತ ವ್ಯವಸ್ಥೆ ಬೇಕಾಗಿದೆ. ಅದರಿಂದ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. 1998ರಲ್ಲಿ ಸಂದೇಶ ಪ್ರಶಸ್ತಿಯನ್ನು ‘ಅಮೇರಿಕಾ ಅಮೇರಿಕಾ’ ಸಿನೆಮಾಕ್ಕಾಗಿ ಸ್ವೀಕರಿಸಿ ತುಂಬಾ ಸಂತೋಷಗೊಂಡಿದ್ದೆ. ‘ಅಮೇರಿಕಾ ಅಮೇರಿಕಾ ಭಾಗ-2’ ಸದ್ಯದಲ್ಲಿ ಬಿಡುಗಡೆಯಾಗಲಿದ್ದು ಆ ಸಂದರ್ಭ ಪ್ರಶಸ್ತಿ ನೀಡಲು ಬಂದಿರುವುದು ಸಂತೋಷ ತಂದಿದೆ” ಎಂದು ಹೇಳಿದರು.
ಮಂಗಳೂರು ಧರ್ಮಪ್ರಾಂತದ ಬಿಪಷ್ ರೈ1 ರೆÍ ಡಾ। ಪೀಟರ್‌ಪಾವ್ಲ್ ಸಲ್ಡಾನ್ಹಾ ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ರೈ| ರೆ| ಡಾ। ಹೆನ್ರಿ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂದೇಶ ಪ್ರಶಸ್ತಿ ಜ್ಯೂರಿ ಅಧ್ಯಕ್ಷ ನಾ. ದಾಮೋದರ ಶೆಟ್ಟಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್., ಕರ್ನಾಟಕ ಇಕೋ ಟೂರಿಸಂ ಬೋರ್ಡ್ ಅಧ್ಯಕ್ಷೆ ಶಾಲೆಟ್ ಪಿಂಟೊ, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರೀಸ್, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ರೂಪಕಲಾ ಆಳ್ವ, ಬಿ.ಎ. ಮೊಹಮ್ಮದ್ ಹನೀಫ್ ಹಾಗೂ ಕನ್ಸೆಪ್ಟ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನಿರ್ದೇಶಕ ಡಾ. ಸುದೀಪ್ ಪೌಲ್ ಸ್ವಾಗತಿಸಿ, ರಾಯ್ ಕ್ಯಾಸ್ತಲಿನೊ ವಂದಿಸಿದರು. ಡಾ. ನಾ. ಮೊಗಸಾಲೆ, ಪ್ಯಾಟ್ರಿಕ್ ಕಾಮಿಲ್ ಮೋರಸ್, ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಸಂದೇಶ ಸಾಹಿತ್ಯ ಪ್ರಶಸ್ತಿ’, ಶ್ರೀಮತಿ ಎಸ್.ಜಿ. ತುಂಗರೇಣುಕ ಇವರಿಗೆ ‘ಸಂದೇಶ ಮಾಧ್ಯಮ ಪ್ರಶಸ್ತಿ’, ಸೈಮನ್ ಪಾಯ್ಸ್ ಇವರಿಗೆ ‘ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ’, ಶ್ರೀನಿವಾಸ ಜಿ. ಕಪ್ಪಣ್ಣ ಇವರಿಗೆ ‘ಸಂದೇಶ ಕಲಾ ಪ್ರಶಸ್ತಿ’, ಡಾ. ದತ್ತಾತ್ರೇಯ ಅರಳಿಕಟ್ಟೆ ಇವರಿಗೆ ‘ಸಂದೇಶ ಶಿಕ್ಷಣ ಪ್ರಶಸ್ತಿ’ ಮತ್ತು ನವಜೀವನ ರಿಹಬಿಲಿಟೇಷನ್ ಸೆಂಟರ್ ಫಾರ್ ದ ಡಿಸೇಬಲ್ಡ್ ಸಂಸ್ಥೆಗೆ ‘ಸಂದೇಶ ವಿಶೇಷ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.


