ಮೈಸೂರು : ಧೀಮಹಿ ಥಿಯೇಟರ್ ಅರ್ಪಿಸುವ ಕಾರ್ತಿಕ್ ಹೆಬ್ಬಾರ್ ರಚನೆ, ಸಂಗೀತ ಮತ್ತು ನಿರ್ದೇಶನದಲ್ಲಿ ‘#36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 01 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9742119911 ಸಂಖ್ಯೆಯನ್ನು ಸಂಪರ್ಕಿಸಿರಿ.
‘36 ಸತಿ ಸಾವಿತ್ರಿ ನಿವಾಸ’ ನಾಟಕವು ಮೂವರು ಮಧ್ಯಮ ವರ್ಗದ ಮಹಿಳೆಯರ ಸಾಮಾನ್ಯ ಕಥೆ. ಈ ಮೂವರು ಮಹಿಳೆಯರ ಜೀವನದಲ್ಲಿ ಪ್ರಶ್ನೆಯಾಗಿ ಬರುವಂತಹ ಒಂದು ವಿಶೇಷ ಸನ್ನಿವೇಶವನ್ನು ಅವರು ಎದುರಿಸುವ ಬಗೆ ಹಾಗೂ ತನ್ಮೂಲಕ ಕಂಡುಕೊಳ್ಳುವ ಹೊಸ ಅರ್ಥಗಳ, ಸ್ನೇಹದ ಹಾಗೂ ಮೈತ್ರಿಯ ಕಥೆಯನ್ನು ಈ ನಾಟಕ ಹಿಡಿದಿಡುತ್ತದೆ. ಈ ನಾಟಕ ಮಹಿಳೆಯರ ಜೀವನೋತ್ಸಾಹ, ಸಿಸ್ಟರ್ಹುಡ್ (ಭಗಿನಿ ಬಂಧುತ್ವ), ಮುಪ್ಪು, ಒಂಟಿತನ ಮುಂತಾದ ಎಲ್ಲಾ ಭಾವಗಳ ಒಂದು ಕಾಮನಬಿಲ್ಲಾಗಿ ನಿಲ್ಲುತ್ತದೆ. ಮಧ್ಯಮ ವರ್ಗದ ಒಂದು ಕಟ್ಟಡದಲ್ಲಿ ವಾಸವಾಗಿರುವ ಮಹಿಳೆಯರ ಜೀವನಕ್ಕೆ ಇದ್ದಕ್ಕಿದ್ದಂತೆ ಪ್ರವೇಶ ಮಾಡುವ ಒಂದು ವಿಶೇಷ ವ್ಯಕ್ತಿಯಿಂದಾಗಿ ಅವರ ಜೀವನದಲ್ಲಾಗುವ ಪರಿವರ್ತನೆ ಹಾಗೂ ಅವರು ಎದುರಿಸುವ ಪ್ರಶ್ನೆಗಳ ಕಥೆ ಇದಾಗಿರುತ್ತದೆ. ಈ ಮಹಿಳೆಯರ ಜೀವನದ ಸುಖ, ದುಃಖ ಅಲ್ಲದೆ ಅತಿರೇಕಗಳಂತೆ ಅವರನ್ನು ಆವರಿಸಿರುವ ಧಾರವಾಹಿ ಹಾಗೂ ಸಿನಿಮಾಗಳನ್ನೂ ಕೂಡ ಈ ನಾಟಕ ಚಿತ್ರಿಸುತ್ತದೆ. ಇಲ್ಲಿ ಸಂಗೀತವಿದೆ, ಸ್ವಲ್ಪ ನಾಟ್ಯವೂ ಇದೆ, ಪ್ರೇಮವೂ ಇದೆ, ಒಡನಾಟವೂ ಇದೆ ! ಎಲ್ಲದಕ್ಕಿಂತ ಹೆಚ್ಚು ನಗು ಹಾಗೂ ಹುಚ್ಚುತನವಿದೆ. ಪುರುಷಪ್ರಧಾನ ಸಮಾಜದಲ್ಲಿ ಹೋರಾಡಿ, ಸೋತು-ಗೆದ್ದು, ಸದಾ ಜೀವನೋತ್ಸಾಹ ಹಾಗೂ ಭರವಸೆಯ ದೀಪವನ್ನು ಹಿಡಿದು ನಿಂತಿರುವ ಮಹಿಳೆಯರಿಗೆ ಈ ನಾಟಕವನ್ನು ನಾವು ಅರ್ಪಿಸುತ್ತೇವೆ.