ಉಪ್ಪಿನಂಗಡಿ : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತೊಂಬತ್ತನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2024ರಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ “ಸ್ವಾಮಿ ವಿವೇಕಾನಂದರ ಭವ್ಯ ವ್ಯಕ್ತಿತ್ವ – ದಿವ್ಯ ಸಂದೇಶ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬಂಟ್ವಾಳದ ಪೊಳಲಿಯ ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮಿ ವಿವೇಕ ಚೈತನ್ಯಾನಂದ ಜೀ “ಸ್ವಾಮಿ ವಿವೇಕಾನಂದರು ಭವ್ಯ ವ್ಯಕ್ತಿತ್ವದ ಮಾದರಿ. ಅವರ ವ್ಯಕ್ತಿತ್ವವು ಅಸಾಧಾರಣ ಧೈರ್ಯ, ಜ್ಞಾನ ಮತ್ತು ಸಹಾನುಭೂತಿ ಮಿಶ್ರಿತವಾಗಿತ್ತು. ಅವರು ತಮ್ಮ ಜೀವನವನ್ನು ಮಾನವೀಯತೆ ಮತ್ತು ಸಾಮಾಜಿಕ ಉನ್ನತಿಗಾಗಿ ಸಮರ್ಪಿಸಿದರು. 1893ರ ಚಿಕಾಗೋ ಧರ್ಮಸಮ್ಮೇಳನದಲ್ಲಿ ಅವರು ಮಾಡಿದ ಪ್ರಭಾವಶಾಲಿ ಭಾಷಣವು ಅವರ ಬುದ್ಧಿವಂತಿಕೆಯ ಮತ್ತು ಆತ್ಮಶಕ್ತಿಯ ಸಮ್ಮಿಲನವನ್ನು ಸಿದ್ಧಪಡಿಸಿತು. ವಿವೇಕಾನಂದರು ಯುವಕರಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಮತ್ತು ಶಕ್ತಿ ತುಂಬಿದವರು. ಅವರ ಪ್ರಸಿದ್ಧ ‘ಪಥೋಪದೇಶ’, ‘ಉತ್ತಿಷ್ಠತ ಜಾಗೃತಃ’, ಯುವಕರಿಗೆ ಶ್ರೇಷ್ಠತೆಯ ಮಾರ್ಗದರ್ಶನ ನೀಡಿದವು. ಅವರ ದಿವ್ಯ ಸಂದೇಶಗಳಲ್ಲಿ ಆತ್ಮನಿರ್ಭರತೆ, ಧಾರ್ಮಿಕ ಸಹಿಷ್ಣುತೆ ಮತ್ತು ಮಾನವೀಯ ಸೇವೆಯ ತತ್ತ್ವವಿದೆ. ‘ಜಗತ್ತು ಒಂದು ಕುಟುಂಬ’ ಎಂಬ ಸಂದೇಶದ ಮೂಲಕ ಅವರು ವಿಶ್ವಸಾಮರಸ್ಯವನ್ನು ಬೋಧಿಸಿದರು. ಅವರ ಜೀವನ ಮತ್ತು ಸಂದೇಶಗಳು ನಮಗೆ ಧರ್ಮ, ವೈಜ್ಞಾನಿಕ ಚಿಂತನೆ, ಮತ್ತು ಮಾನವೀಯತೆಯ ಆದರ್ಶಗಳನ್ನು ಒಗ್ಗೂಡಿಸಲು ಯಾವತ್ತೂ ಮಾರ್ಗದರ್ಶಕವಾಗಿವೆ, ಮತ್ತು ಅವು ಇನ್ನೂ ಸಾವಿರಾರು ಜನರನ್ನು ಪ್ರೇರೇಪಿಸುತ್ತಿವೆ.” ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೇಖರ ಎಂ. ಬಿ., ಐ. ಕ್ಯೂ. ಎ. ಸಿ. ಸಂಚಾಲಕರಾದ ಶ್ರೀ ಬಾಲಾಜಿ ಎಂ. ಪಿ., ಗಣಿತ ಶಾಸ್ತ್ರ ವಿಭಾಗದ ಸಹಾಯಕ ಪ್ರಧ್ಯಾಪಕರಾದ ಕೇಶವ ಕುಮಾರ್, ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿಯಾದ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿ, ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹರಿಪ್ರಸಾದ್ ಎಸ್. ವಂದಿಸಿದರು.