ಉಡುಪಿ : 47ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಹಾಗೂ ವಾದಿರಾಜ-ಕನಕದಾಸ ಸಾಹಿತ್ಯ ಮಂಥನ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2025ರ ಆದಿತ್ಯವಾರದಂದು ಉಡುಪಿ ಎಂ.ಜಿ.ಎಂ ಕಾಲೇಜು ಆವರಣದ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಸಂಸ್ಥೆಗಳು ಸಂಘಟಿಸಿವೆ.
ಬೆಳಿಗ್ಗೆ 9-30 ಗಂಟೆಗೆ ಈ ಕಾರ್ಯಕ್ರಮವನ್ನು ಹಿರಿಯ ವಿದ್ವಾಂಸರು, ವಿಶ್ರಾಂತ ಕುಲಪತಿಗಳೂ ಆದ ಡಾ. ಬಿ.ಎ. ವಿವೇಕ ರೈ ಕಾರ್ಯಕ್ರಮ ಉದ್ಘಾಟಿಸಿ ‘ವಾದಿರಾಜ ಕನಕದಾಸ ಸಾಹಿತ್ಯ ಮಂಥನ’ ಕೃತಿ ಬಿಡುಗಡೆ ಮಾಡಲಿದ್ದಾರೆ. ಕನಕ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿಗಳಾದ ಡಾ. ಬಿ. ಜಗದೀಶ್ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದು, ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಡಾ. ರಮೇಶ್ ಟಿ.ಎಸ್. ಇವರು ‘ವಾದಿರಾಜ –ಕನಕದಾಸ’ರ ಕುರಿತು ಉಪನ್ಯಾಸ ನೀಡಲಿದ್ದಾರೆ. 11-00 ಗಂಟೆಯಿಂದ ವಿಭಾ ಎಸ್. ನಾಯಕ್ ಮಂಗಳೂರು ಮತ್ತು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 2-00 ಗಂಟೆಗೆ ವಾದಿರಾಜ ಕನಕದಾಸ ಕೀರ್ತನಾ ಸ್ಪರ್ಧಾ ವಿಜೇತರಿಂದ ಗಾಯನ ಪ್ರಸ್ತುತಿ. ಮಧ್ಯಾಹ್ನ ಗಂಟೆ 3-45ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ, ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ. ಪಿ.ಯು ಕಾಲೇಜಿನ ಶ್ರೀಮತಿ ಮಾಲತಿದೇವಿ ಉಪಸ್ಥಿತರಿರುವರು. ಸಂಜೆ 4-30 ಗಂಟೆಗೆ ಉಷಾ ರಾಮಕೃಷ್ಣ ಭಟ್ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳುವುದು.

