ಬೆಂಗಳೂರು: ಸ್ಪಂದನ, ಬೆಂಗಳೂರು -ನಾಟಕ ತಂಡ ತನ್ನ ಐವತ್ತನೆಯ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ನೇಷನಲ್ ಹೈಸ್ಕೂಲಿನ ಸಭಾಂಗಣದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ದಿನಾಂಕ 31-05-2023ರಂದು ಆಯೋಜಿಸಿತು. ತನ್ನಂತೆ ಐವತ್ತರ ಆಸುಪಾಸಿನ ತಂಡಗಳೆಷ್ಟಿವೆ ರಾಜಧಾನಿಯಲ್ಲಿ? ಎಲ್ಲರನ್ನೂ ಕರೆದು ಮಾತನಾಡಿಸೋಣ ಎಂಬ ಯೋಚನೆಯೊಂದು ಸ್ಪಂದನದ ನೇತಾರರಾದ ಬಿ.ಜಯಶ್ರೀ- ಅವರಿಗೆ ಹೊಳೆದಿರಬೇಕು. ಅದನ್ನು ಕಾರ್ಯಗತಗೊಳಿಸುವವರಾರು ಎಂಬ ಪ್ರಶ್ನೆ ಉದಿಸಿದಾಗ ಉತ್ತರ ರೂಪದಲ್ಲಿ ದೊರಕಿದವರೇ ಕನ್ನಡ ರಂಗಭೂಮಿಯ ಸವ್ಯಸಾಚಿ ಶ್ರೀನಿವಾಸ್ ಜಿ. ಕಪ್ಪಣ್ಣ. ಕಾರ್ಯಕ್ರಮ ಜಯಶ್ರೀಯವರ ಸ್ಪಂದನದ್ದಾದರೂ ಅದಕ್ಕೊಂದು ಚೌಕಟ್ಟು ಒದಗಿಸಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟವರು ಕಪ್ಪಣ್ಣ.
ನೋಡಿದರೆ ಒಂದು ಕಾಲದ ಗಟ್ಟಿಮುಟ್ಟಾದ ಎಂಟು ತಂಡಗಳು! ನಟರಂಗ, ಸ್ಪಂದನ, ಕಲಾಗಂಗೋತ್ರಿ, ರಂಗಸಂಪದ, ಬೆನಕ, ಸಮುದಾಯ, ಸಂಕೇತ್ ಹಾಗೂ ಕನ್ನಡ ಸಾಹಿತ್ಯ ಕಲಾಸಂಘ (ನಾಟ್ಯದರ್ಪಣ). (ಅವುಗಳಲ್ಲಿ ʻಸಮುದಾಯʼದಂಥ ಕೆಲವು ತಂಡಗಳು ಇವತ್ತಿಗೂ ತನ್ನ ಗಟ್ಟಿತನವನ್ನು ಉಳಿಸಿಕೊಂಡಿದೆ.) ಒಂದೊಂದು ರಂಗ ತಂಡಕ್ಕೂ ಬೃಹತ್ತಾದ ಇತಿಹಾಸ. ಇತ್ತೀಚೆಗಷ್ಟೇ ʻನಟರಂಗಕ್ಕೆ ಐವತ್ತು ವರ್ಷʼ ಕಾರ್ಯಕ್ರಮವನ್ನು ಆಯೋಜಿಸಿ ಗೆದ್ದ ಕಪ್ಪಣ್ಣ, ಸ್ಪಂದನದ ಈ ಕಾರ್ಯಕ್ರಮಕ್ಕೆ ಬೇರೆಯೇ ಆಯಾಮ ಕೊಡಲು ಯೋಚಿಸಿದರು. ಪ್ರತಿತಂಡಕ್ಕೂ ಸುಮಾರು ಅರ್ಧ ಗಂಟೆಯಷ್ಟು ಅವಧಿ. ಮೊದಲಿಗೆ ಆಯಾ ತಂಡದಿಂದ ಅವರು ಆಡಿದ ನಾಟಕಗಳ ಪ್ರಸಿದ್ಧ ಎರಡು ಹಾಡುಗಳು. ಹಾಡು ಮುಗಿದ ಬಳಿಕ ಆಯಾ ತಂಡದ ಪ್ರತಿನಿಧಿಯೊಬ್ಬರಿಂದ ಅವರ ತಂಡ ಬೆಳೆದು ಬಂದ ದಾರಿಯ ಕುರಿತ, ತಂಡದಲ್ಲಿ ನಡೆದ ವಿಶೇಷ ಘಟನೆಗಳ ಕುರಿತ, ತಂಡದ ಸದಸ್ಯರ ಸಾಮಾಜಿಕ ಬದುಕಿನ ಕುರಿತ ಅನೇಕ ವಿಚಾರಗಳ ವಿವರಣೆ. ಕೊನೆಯಲ್ಲಿ ಡಾ. ಚಂದ್ರಶೇಖರ ಕಂಬಾರರಿಂದ ಸಮಾರೋಪ.
ಸುಮಾರು ಐದು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಕಳೆದ ಶತಮಾನದ ಎಪ್ಪತ್ತರ ದಶಕದಿಂದ ಇಲ್ಲಿಯ ತನಕ ರಂಗಭೂಮಿಯನ್ನು ಉಸಿರಾಗಿಸಿದ ಹಿರಿಯ ಕಲಾವಿದರನೇಕರು ಮಾತನಾಡಿದರು. ಮುಖ್ಯಮಂತ್ರಿ ಚಂದ್ರು, ಬಿ.ವಿ. ರಾಜಾರಾಮ್, ಟಿ.ಎಸ್. ನಾಗಾಭರಣ, ಗುಂಡಣ್ಣ, ಶ್ರೀನಿವಾಸ ಪ್ರಭು, ಆನಂದರಾಜು, ಜೆ. ಲೋಕೇಶ್, ಅರುಂಧತಿ ನಾಗ್ ಮೊದಲಾದವರು ತಮ್ಮ ತಮ್ಮ ತಂಡದ ಬಗ್ಗೆ, ತಮ್ಮ ಬಗ್ಗೆ ಮಾತನಾಡುತ್ತ ರಂಗೇತಿಹಾಸದ ಪುಟಗಳನ್ನೇ ತೆರೆದಿಟ್ಟರು.
ಇಂದೀಗ ಇಲ್ಲವಾದ ಸಿ.ಆರ್.ಸಿಂಹ, ಬಿ.ಸಿ., ಲೋಕೇಶ್, ಶಂಕರ್ ನಾಗ್, ಸಿಜಿಕೆ, ಆರ್.ನಾಗೇಶ, ಪರೇಶ್ ಮೊದಲಾದ ಹೆಸರಾಂತ ಕಲಾವಿದರು, ನಿರ್ದೇಶಕರು, ನೇಪಥ್ಯ ಕಲಾವಿದರು ಕಣ್ಣೆದುರಿನಿಂದ ಹಾದು ಹೋದರು. ನಟರಂಗದ ಕುರಿತು ಶ್ರೀನಿವಾಸ್ ಜಿ.ಕಪ್ಪಣ್ಣ ಮಾತನಾಡುವುದಕ್ಕೂ ಮುನ್ನ ಗಾಯಕಿ ಸವಿತಾ ಅವರು ʻಕಾಕನಕೋಟೆʼಯ ʻನೇಸರ ನೋಡು..ʼ ಹಾಡಿದರು. ಆ ಹೊತ್ತಿಗೆ ಅಲ್ಲಿದ್ದ ನಟರಂಗದ ರಂಗನಟಿ ಗಿರಿಜಾ ಲೋಕೇಶ್ ದಿಢೀರನೆ ಎದ್ದು ಬಂದು ಅದಕ್ಕೊಂದು ಭಾವಪೂರಿತ ನೃತ್ಯಾಭಿನಯ ನೀಡಿದ್ದು ವಿಶೇಷವಾಗಿತ್ತು!
ಸಮಾರೋಪದ ಮಾತುಗಳನ್ನಾಡಿದ ಡಾ. ಕಂಬಾರರು, ʻಯಾವುದನ್ನೂ ಹೀಗೆ ಮಾತನಾಡಿ ಮುಗಿಸಿ ಬಿಡುವುದಲ್ಲ. ಅದರ ದಾಖಲಾತಿ ಆಗಬೇಕು. ಮುಂದಿನ ಜನಾಂಗದ ಕಲಾವಿದರಿಗೆ ಅದು ಉಪಯೋಗಕ್ಕೆ ಬರಬೇಕುʼಎಂದರು. ಅದೇನೋ ಸರಿ, ಆದರೆ ಅದಕ್ಕೂ ಮೊದಲು ʻಇಂತಹ ಮಾತುಗಳಿಂದ ಯಾವ ಫಲವೂ ಇಲ್ಲ, ಏನನ್ನೂ ಸಾಧಿಸುವುದಕ್ಕಿಲ್ಲʼ ಎಂಬುದಾಗಿ ಅವರು ಹೇಳಿದ್ದು ಮಾತ್ರ ಅಷ್ಟಾಗಿ ಸರಿಬರಲಿಲ್ಲ. ಎಂಟು ಪ್ರಮುಖ ತಂಡಗಳನ್ನು ಒಂದೆಡೆ ಸೇರಿಸಿದ್ದು, ಅವರೆಲ್ಲ ತಮ್ಮ ತಂಡಗಳ ವಿಚಾರವನ್ನು ಮುಂದಿಡುವಾಗ ಮಿಕ್ಕವರು ತಲೆದೂಗಿದ್ದು, ಪರಸ್ಪರ ಕಾಲೆಳೆದುಕೊಂಡದ್ದು -ಎಲ್ಲವೂ ರಂಗ ಕಲಾವಿದರು ಪರಸ್ಪರ ಶತ್ರುಗಳಂತೆ ವರ್ತಿಸುತ್ತಾರೆ ಎಂಬ ಮಾತನ್ನು ಛಿದ್ರ ಮಾಡಿದಂತಿತ್ತು. ಕೆಲವರು ಮಾತ್ರ ತಮ್ಮ ತಂಡದ ಬಗ್ಗೆ ಆಡುವುದನ್ನು ಮರೆತು ತಮ್ಮ ಬಗ್ಗೆಯೇ ಹೇಳಿಕೊಂಡದ್ದು ತುಸು ವಿಪರ್ಯಾಸ ಎನಿಸುತ್ತಿತ್ತು.
ಇಂಥ ರಂಗಕೂಡುವಿಕೆ ನಿಜಕ್ಕೂ ಕಲ್ಪನೆಗೆ ಮೀರಿದ್ದು. ಜಯಶ್ರೀಯವರು ತಮ್ಮ-ತಂಡ ಸ್ಪಂದನ ಇದ್ದರೂ-ಯಾವ ಭೇದವೂ ಇಲ್ಲದೆ ಇತರ ರಂಗ ಸಂಘಗಳಲ್ಲಿ ಅಭಿನಯಿಸುತ್ತಿದ್ದರು, ಇತರರಿಗಾಗಿ ನಾಟಕ ನಿರ್ದೇಶಿಸುತ್ತಿದ್ದರು.. ಹಾಗಾಗಿಯೇ ಯಾವ ತಂಡವನ್ನೂ ದೂರವಿಡುವುದು ಬೇಡವೆಂದು ಅವರಿಗೆ ಅನಿಸಿದ್ದಿರಬೇಕು. ಕಪ್ಪಣ್ಣನವರಾದರೂ ಅಷ್ಟೆ; ತಮ್ಮ ʻನಟರಂಗʼ ಒಂದು ಕಡೆ, ತಾವು ಬೆಳಕು ಚೆಲ್ಲುವ, ಸಂಘಟಿಸುವ ಸಂಸ್ಥೆಗಳು ಹಲವಾರು- ಎಂಬ ಧೀರೋದಾತ್ತ ನಂಬಿಕೆ ಉಳ್ಳವರಾಗಿದ್ದರು. ಅವರಿಬ್ಬರ ಮುತುವರ್ಜಿಯೇ ಹೀಗೊಂದು ಕಾರ್ಯಕ್ರಮ ಆಯೋಜನೆಯಾಗಲು ಕಾಣವಾದದ್ದಿರಬಹುದು. ಐವತ್ತು ದಾಟಿದ ಹಾಗೂ ಐವತ್ತರ ಅಂಚಿನಲ್ಲಿರುವ ತಂಡಗಳ ವಕ್ತಾರರು ಆಡಿದ ಮಾತುಗಳು, ನೀಡಿದ ಆಶ್ವಾಸನೆಗಳು ಯುವ ತಲೆಮಾರಿನ ಕಲಾವಿದರ ಪಾಲಿಗೆ ಆಶಾದಾಯಕವಾಗಿದ್ದವು ಎಂಬುದು ಇಡಿಯ ಕಾರ್ಯಕ್ರಮದ ಫಲಶ್ರುತಿ. ಆ ಕಾರಣಕ್ಕೆ ಬಿ.ಜಯಶ್ರೀ ಹಾಗೂ ಶ್ರೀನಿವಾಸ್ ಜಿ.ಕಪ್ಪಣ್ಣ ಅಭಿನಂದನೆಗೆ ಅರ್ಹರಾಗುವರು.
- ಡಾ. ನಾ. ದಾಮೋದರ ಶೆಟ್ಟಿ