ಹೊನ್ನಾವರ : ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ಇದರ 90ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ‘ರಾಷ್ಟ್ರೀಯ ನಾಟ್ಯೋತ್ಸವ -15’ವನ್ನು ದಿನಾಂಕ 22 ಫೆಬ್ರವರಿ 2025ರಿಂದ 02 ಮಾರ್ಚ್ 2025ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 22 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಮಾನ್ಯ ಸಂಸದರು ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ಅಧ್ಯಕ್ಷತೆಯಲ್ಲಿ ಸಚಿವರಾದ ಮಂಕಾಳು ಎಸ್. ವೈದ್ಯ ಇವರು ಶ್ರೀ ಇಡಗುಂಜಿ ಮೇಳದ 90ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ನಿರಂಜನ ವಾನಳ್ಳಿ ಇವರು ಪ್ರದರ್ಶನಾಂಗಣವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಸಂಸ್ಥೆಗೆ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಮಾ ವೈದ್ಯನಾಥನ್ ಮತ್ತು ತಂಡ ದೆಹಲಿ ಮತ್ತು ಸಹ ಕಲಾವಿದರಾದ ರೋಹಿಣಿ ಧನಂಜಯ, ಸೌಮ್ಯ ಜಗನಮೂರ್ತಿ, ಶುಭಮಣಿ ಚಂದ್ರಶೇಖರ್ ಇವರಿಂದ ‘ಭರತನಾಟ್ಯ’, ಕುಚೇಲವೃತ್ತಂ, ಫೋಕ್ ಲ್ಯಾಂಡ್ ಕೇರಳ ಇವರಿಂದ ‘ಕಥಕ್ಕಳಿ’ ಹಾಗೂ ಕಲಾಜ್ಯೋತಿ ಕರಡಿ ಮಜಲು ಸಂಘದವರಿಂದ ‘ಕರಡಿಮಜಲು’ ಪ್ರಸ್ತುತಗೊಳ್ಳಲಿದೆ.
ದಿನಾಂಕ 23 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಹೊಸ್ತೋಟ ಮಂಜುನಾಥ ಭಾಗವತರ ‘ಯಕ್ಷಹಂಸ’ದ ಕುರಿತು ಒಂದು ಮರು ಓದು ವಿಚಾರ ಸಂಕೀರ್ಣದಲ್ಲಿ ಹಿರಿಯ ವಿದ್ವಾಂಸರು ಸಾಹಿತಿ ಡಿ.ಎಸ್. ಶ್ರೀಧರ ಇವರು ‘ಹೊಸ್ತೋಟ ಮಂಜುನಾಥ ಭಾಗವತರ ಪ್ರಸಂಗಗಳ ಅವಲೋಕನ’, ‘ಯಕ್ಷರಂಗ’ ಮಾಸಪತ್ರಿಕೆಯ ಸಂಪಾದಕರಾದ ಕಡತೋಕ ಗೋಪಾಲಕೃಷ್ಣ ಭಾಗವತರು ‘ಹೊಸ್ತೋಟ ಮಂಜುನಾಥ ಭಾಗವತರು ಮತ್ತು ಯಕ್ಷಗಾನ ರಂಗ’, ಧಾರವಾಡದ ಡಾ. ಶಾಲಿನಿ ರಘುನಾಥ ಇವರು ‘ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ರಂಗ ಸಿದ್ಧಾಂತ’, ಕೆನಡಾದ ರಾಘು ಕಟ್ಟಿನಕೆರೆ ಇವರು ‘ಹೊಸ್ತೋಟ ಮಂಜುನಾಥ ಭಾಗವತರು ಮತ್ತು ಯಕ್ಷಗಾನ ಸಂಗೀತ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಯಕ್ಷಗಾನ ಭಾಗವತರಾದ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಇವರಿಗೆ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’, ಸಾಂಸ್ಕೃತಿಕ ಸಂಘಟಕರಾದ ಡಾ. ಗಿರಿಧರ ಕಜೆ ಮತ್ತು ಸಾಂಸ್ಕೃತಿಕ ನೇತಾರರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಇವರಿಗೆ ‘ಕಲಾಪೋಷಕ ಪ್ರಶಸ್ತಿ’ ಪ್ರದಾನ ಹಾಗೂ ಮಂಗಳೂರಿನ ಖ್ಯಾತ ಲೇಖಕರಾದ ಶ್ರೀಮತಿ ಭುವನೇಶ್ವರಿ ಹೆಗಡೆ ಇವರಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನವದೆಹಲಿಯ ವಿದುಷಿ ವಿಧಾಲಾಲ್ ಇವರಿಂದ ‘ಕಥಕ್ ನೃತ್ಯ’ ಮತ್ತು ಬೆಂಗಳೂರಿನ ಡಾ. ವಿದ್ಯಾಭೂಷಣ ಇವರಿಂದ ‘ಭಕ್ತಿ ಸಂಗೀತ’ ಪ್ರಸ್ತುತಗೊಳ್ಳಲಿದೆ.
ದಿನಾಂಕ 24 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಗಮಕವಾಚನದಲ್ಲಿ ಹೆಗ್ಗೋಡು ಶ್ರೀಮತಿ ಸಮುದ್ಯತಾ ವೆಂಕಟರಾಮು ಶೆಡ್ತಿಕೆರೆ ಇವರು ವಾಚನ ಮತ್ತು ಡಾ. ವಿಜಯನಳಿನಿ ರಮೇಶ ಶಿರಸಿ ಇವರು ವ್ಯಾಖ್ಯಾನ ನೀಡಲಿದ್ದಾರೆ. ಸಂಜೆ 4-30 ಗಂಟೆಗೆ ಹಿರಿಯ ಸಾಹಿತಿಗಳಾದ ಶಾಂತಾರಾಮ ನಾಯಕ, ಮೋಹನ ಕುಮಾರ ಹಬ್ಬು, ಲಕ್ಷ್ಮೀನಾರಾಯಣ ಶಾಸ್ತ್ರಿ ಮತ್ತು ಯಕ್ಷಗಾನ ಭಾಗವತರಾದ ಗೋಪಾಲಕೃಷ್ಣ ಭಟ್ಟ ಇವರುಗಳಿಗೆ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಸಂಮಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಡಾ. ಮೈಸೂರು ಮಂಜುನಾಥ ಮತ್ತು ಸುಮಂತ ಮಂಜುನಾಥ ಇವರ ‘ವಯಲಿನ್ ಜುಗಲ್ ಬಂದಿ’ಗೆ ಅರ್ಜುನ ಕುಮಾರ ಮೃದಂಗ ಮತ್ತು ರೂಪಕ್ ಕಲ್ಲೂರ್ ಕರ್ ತಬಲಾ ಸಾಥ್ ನೀಡಲಿದ್ದಾರೆ. ಬಳಿಕ ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ನಟನ ಮೈಸೂರು ರೆಪರ್ಟರಿ ತಂಡದ ಪ್ರಯೋಗ ‘ಕಣಿವೆಯ ಹಾಡು’ ಪ್ರದರ್ಶನಗೊಳ್ಳಲಿದೆ.
ದಿನಾಂಕ 25 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ತಾಳಮದ್ದಲೆ ಅರ್ಥಧಾರಿಗಳಾದ ಜಬ್ಬಾರ್ ಸುಮೋ, ಸಂಘಟಕರು ಯಕ್ಷಗಾನ ಭಾಗವತರಾದ ಡಾ. ಸುರೇಂದ್ರ ಫಣಿಯೂರು ಮತ್ತು ಯಕ್ಷಗಾನ ಭಾಗವತರು ಮುಖ್ಯಸ್ಥರಾದ ರಾಮಕೃಷ್ಣ ಮಯ್ಯ ಇವರುಗಳಿಗೆ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಸಂಮಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ರೋಹಿಣಿ ಪ್ರಭಾತ ಮತ್ತು ಮೇಧಾ ವರಖೇಡಿ ಇವರಿಂದ ‘ದಕ್ಷಿಣೋತ್ತರಂ’, ಹೈದ್ರಾಬಾದಿನ ಮಧುಸೂಧನ ಇವರಿಂದ ಮೂಕಾಭಿನಯ, ಚಿಕ್ಕಬಳ್ಳಾಪುರ ಜಿಲ್ಲೆಯ ಆಂಜಿಣಪ್ಪ ಇವರಿಂದ ಮುಖವೀಣೆ, ಕಲಾವಿದರಾದ ಶುಭಂ ಆಚಾರ್ಯ, ಗೋವಿಂದ ಮಹತೋ ಮತ್ತು ಸತೀಶ ಮೋದಕ್ ಇವರಿಂದ ‘ಆಚಾರ್ಯ ಛಾವು ನೃತ್ಯ ಬಿಚಿತ್ರ – ಸೆರೈಕೆಲಾ’ ಪ್ರಸ್ತುತಗೊಳ್ಳಲಿದೆ.
ದಿನಾಂಕ 26 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಾಮಾಜಿಕ ಧುರೀಣರಾದ ಗಣಪಯ್ಯ ಗೌಡ ಮುಗಳಿ, ಹೊನ್ನಾವರ ನಾಗರಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ, ಡಾ. ಬಿ.ಆರ್. ಅಂಬೇಡ್ಕರ್ ಹಳ್ಳೇರ ಸಮಾಜ ಕ್ಷೇಮಾಭಿವೃದ್ಧಿ ಹಾಗೂ ಸಾಂಸ್ಕೃತಿಕ ವೇದಿಕೆ (ರಿ.) ಹಡಿನಬಾಳ ಮತ್ತು ಗುಣವಂತೆಯ ಯಕ್ಷಗಾನ ಕಲಾವಿದರಾದ ರಾಮ ಗೌಡ ಇವರುಗಳಿಗೆ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಸಂಮಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನ್ನೈಯ ಪ್ರಿಯದರ್ಶಿನಿ ಗೋವಿಂದ ಇವರಿಂದ ಭರತನಾಟ್ಯ ಹಾಗೂ ಅತಿಥಿ ಕಲಾವಿದರಿಂದ ‘ಶ್ರೀ ಕೃಷ್ಣ ಸಂಧಾನ’ ತಾಳಮದ್ದಲೆ ನಡೆಯಲಿದೆ.
ದಿನಾಂಕ 27 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಗಜಾನನ ಹೆಗಡೆ ಮೂರೂರು, ನಾಟಕ ನಿರ್ದೇಶಕರಾದ ಮೂರ್ತಿ ದೇರಾಜೆ, ಯಕ್ಷಗಾನ ಕಲಾವಿದರಾದ ಕೆ.ಜಿ. ಮಂಜುನಾಥ ಕೆಳಮನೆ ಮತ್ತು ಕಲಾಸಂಘಟಕರಾದ ಬೇಗಾರು ರಮೇಶ ಶೃಂಗೇರಿ ಇವರುಗಳಿಗೆ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಸಂಮಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀಮತಿ ಕ್ಷಮಾ ರಾವ್ ಇವರಿಂದ ‘ಓಡಿಸ್ಸಿ’ ನೃತ್ಯ, ಗುರು ಮದ್ಖೋಲ್ಕರ್ ನಾಗಪುರ ಮತ್ತು ಸಂಗಡಿಗರು ಕುಮಾರಿ ರೇವಾ ಜೈನ ಹಾಗೂ ಕುಮಾರಿ ಪ್ರಾಚಿ ಗೊಸಾವಿ ಇವರಿಂದ ಭರತನಾಟ್ಯ ನೃತ್ಯಾಧಾರಾ, ಪಂಡಿತ್ ಪ್ರಕಾಶ ಹೆಗಡೆ ಕಲ್ಲಾರೆ ಮನೆ ಮತ್ತು ಪಂಡಿತ್ ರಾಜನ್ ಕುಮಾರ್ ಬೇವೂರ್ ಇವರ ಕೊಳಲು ವಾಯಲಿನ್ ಜುಗಲ್ ಬಂದಿಗೆ ಪಂಡಿತ್ ರಾಜೇಂದ್ರ ನಾಕೋಡ ಇವರು ತಬಲಾ ಸಾಥ್ ನೀಡಲಿದ್ದಾರೆ.
ದಿನಾಂಕ 28 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಥಕ್ ಮತ್ತು ಆಧುನಿಕ ನೃತ್ಯ ಕಲಾವಿದರಾದ ಶ್ರೀಮತಿ ಮಧು ನಟರಾಜ, ಅಮೇರಿಕಾದ ಭರತನಾಟ್ಯ ಕಲಾವಿದರಾದ ವಿದ್ವಾನ್ ಪ್ರಸನ್ನ ಕಸ್ತೂರಿ ಮತ್ತು ರಂಗ ನಿರ್ದೇಶಕರಾದ ಕಿರಣ ಭಟ್ಟ ಇವರುಗಳಿಗೆ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಸಂಮಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾಟ್ಯ ಮತ್ತು ಸ್ಟೆಮ್ ಡಾನ್ಸ್ ತಂಡದವರಿಂದ ಗುರು ಡಾ. ಮಾಯಾ ರಾವ್ ಮತ್ತು ಮಧು ನಟರಾಜ್ ಕೊರಿಯೋಗ್ರಫಿಯಲ್ಲಿ ‘ಕಥಕ್ ನ ಕಥೆಗಳು’, ಅಮೇರಿಕಾದ ಸಮನ್ವಿತಾ ಕಸ್ತೂರಿ ಇವರಿಂದ ‘ಅನ್ವೇಷಣೆ’ – ವಿಷಯಾಧಾರಿತ ಭರತನಾಟ್ಯ ಮತ್ತು ಶ್ರೀಪಾದ ಭಟ್ಟ ಕಡತೋಕಾ ಇವರಿಂದ ಗೀತ ರಾಮಾಯಣ ಪ್ರಸ್ತುತಗೊಳ್ಳಲಿದೆ.
ದಿನಾಂಕ 01 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ಮತ್ತು ಪ್ರಸಿದ್ಧ ಲೇಖಕರಾದ ಶ್ರೀ ವಿಶ್ವೇಶ್ವರ ಭಟ್ಟ, ಯಕ್ಷಗಾನ ಭಾಗವತರಾದ ಪಟ್ಲ ಸತೀಶ ಶೆಟ್ಟಿ, ಮೈಸೂರು ಯಕ್ಷಗಾನ ಸಂಘಟಕರಾದ ಹೇರಂಭ ಭಟ್ಟ ಆಗ್ಗೆರೆ ಮತ್ತು ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಗರ್ತಿಕೆರೆ ಇವರುಗಳಿಗೆ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಸಂಮಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ದತ್ತಾತ್ರೇಯ ವೇಲಂಕರ ಇವರ ಹಿಂದೂಸ್ಥಾನಿ ಸಂಗೀತಕ್ಕೆ ಗುರುರಾಜ ಹೆಗಡೆ ಅಡುಕಳ ತಬಲಾ ಮತ್ತು ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಬಳಿಕ ‘ವಾಲಿಮೋಕ್ಷ’ ತಾಳಮದ್ದಲೆ ನಡೆಯಲಿದೆ.
ದಿನಾಂಕ 02 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ನಡೆಯುತವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಇವರು ವಹಿಸಲಿದ್ದು, ಖ್ಯಾತ ಅಂಕಣಕಾರರು ಮತ್ತು ಸಾಂಸ್ಕೃತಿಕ ಚಿಂತಕರಾದ ನಾರಾಯಣ ಯಾಜಿ ಸಾಲೇಬೈಲು ಇವರಿಂದ ಕಾರ್ಯಕ್ರಮದ ಸಮಗ್ರ ಅವಲೋಕನ ಹಾಗೂ ರಾತ್ರಿ 9-30 ಗಂಟೆಗೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಒಡನಾಡಿದ ಸರ್ವ ಕಲಾವಿದರ ಸಹಯೋಗದಲ್ಲಿ ‘ಅಹೋರಾತ್ರಿ ಯಕ್ಷಗಾನ’ ನಡೆಯಲಿದೆ.