ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಂಗಳೂರು ಕ.ಸಾ.ಪ. ವತಿಯಿಂದ ಜಿ.ಎಸ್. ಶಿವರುದ್ರಪ್ಪರವರ 99ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 07 ಫೆಬ್ರವರಿ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಜಿ.ಎಸ್.ಎಸ್. ತಮ್ಮ ಕವಿತೆಗಳಲ್ಲಿ ಎರಡು ಜಗತ್ತುಗಳಿಗೆ ಸ್ಪಂದಿಸಿದ್ದನ್ನು ಕಾಣಬಹುದು. ಒಂದು ಜೀವಸಂಮೃದ್ಧ ಪ್ರಕೃತಿ; ಇನ್ನೊಂದು ಮಾನವ ಕೇಂದ್ರಿತ ಸಮಾಜ. ಬೆರಗು ಮತ್ತು ಹುಡಕಾಟ ಅವರ ಕವಿತೆಗಳ ಪ್ರಧಾನ ಭಾವಗಳಾಗಿದ್ದವು. ಪ್ರಕೃತಿಯ ನಿಯತ ಲಯಗಳು ಕವಿಗೆ ಸದಾ ಆಕರ್ಷಣೆಯನ್ನು ಉಂಟುಮಾಡಿದ್ದವು. ಕವಿಗಳ ಕುರಿತ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮವನ್ನು ಏರ್ಪಡಿಸಿದಾಗ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಷ್ಟೇ ಎತ್ತರಕ್ಕೆ ಏರಿದರೂ ತಮ್ಮ ಬಡತನದ ದಿನಗಳನ್ನು ಅವರು ಮರೆತಿರಲಿಲ್ಲ. ಹೀಗಾಗಿ ಅವರಿಗೆ ಬದುಕಿನಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವುದು ಖಚಿತವಾಗಿ ಗೊತ್ತಿತ್ತು. ಅವರ ‘ಸ್ತ್ರೀ’ ಕವಿತೆ ನನ್ನ ಮೇಲೆ ಅಪಾರ ಪ್ರಭಾವವನ್ನು ಬೀರಿದಂತಹದು. ಈ ಪ್ರೇರಣೆಯಿಂದಲೇ ನಾನು ಎಲ್ಲಾ ಸ್ತ್ರೀಯರನ್ನು ಗೌರವಿಸುತ್ತೇನೆ. ‘ಕಾಣದ ಕಡಲಿ’ಗೆ ಕೂಡ ಇದೇ ರೀತಿಯಲ್ಲಿ ನನ್ನನ್ನು ಕಾಡುವ ಕವಿತೆ. ಕಳೆದ ಶತಮಾನದ ಕನ್ನಡ ಸಾಹಿತ್ಯವನ್ನು ಜಿ.ಎಸ್.ಎಸ್. ಹೇಗೆ ತಮ್ಮ ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದ್ದರೂ ಅದೇ ರೀತಿಯಲ್ಲಿ ತಮ್ಮ ಆಡಳಿತದಿಂದ ಕಸುವು ತುಂಬಿದ್ದರು. ಅವರು ರೂಪಿಸಿದ ಶಿಷ್ಯ ಪಡೆ ಇಂದು ನಾಡಿನೆಲ್ಲೆಡೆ ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿಯುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತಿಗೂ ಡಾ. ಜಿ.ಎಸ್. ಶಿವರುದ್ರಪಪ್ಪನವರಿಗೂ ನಿಕಟವಾದ ನಂಟು. ಪರಿಷತ್ತಿನಲ್ಲಿ ಹಲವು ಕಾರ್ಯಾಗಾರಗಳನ್ನು ಅವರು ರೂಪಿಸಿದ್ದರು. ಪರಿಷತ್ತಿನ ಹೆಮ್ಮೆಯ ಪ್ರಕಟಣೆ ಕನ್ನಡ-ಕನ್ನಡ ನಿಘಂಟು ರೂಪ ತಾಳಲು ಅವರೂ ಕಾರಣಕರ್ತರು. ಬಹು ಮುಖ್ಯವಾಗಿ 1992ರ ಜನವರಿ 9, 10, 11 ಮತ್ತು 12ರಂದು ದಾವಣಗೆರೆಯಲ್ಲಿ ನಡೆದ 61ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಕನ್ನಡ ನುಡಿಯ ಕುರಿತು ಬಹು ಮುಖ್ಯವಾದ ಮಾತುಗಳನ್ನು ಆಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಸಾಗಬೇಕಾದ ದಾರಿಯನ್ನು ಸ್ಪಷ್ಟ ಮಾತುಗಳಲ್ಲಿ ಬಿಂಬಿಸಿದ್ದರು. ಈಗ ಜಿ.ಎಸ್. ಶಿವರುದ್ರಪ್ಪನವರ ಜನ್ಮಶತಮಾನೋತ್ಸವ ಬಂದಿದೆ. ಹಲವು ಹಿರಿಯರ ಜನ್ಮ ಶತಮಾನೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದವರು ಅವರು. ಅವರ ಜನ್ಮ ಶತಮಾನೋತ್ಸವಕ್ಕೆ ಅದು ಮೇಲ್ಪಂಕ್ತಿಯಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿ ಮಾತನಾಡಿ “ಜಿ.ಎಸ್.ಎಸ್ ಕವಿತೆಗಳು ಮತ್ತು ವಿಮರ್ಶೆಗಳ ನಡುವೆ ಭಿನ್ನತೆ ಇದೆ. ‘ಮಹಾಕಾವ್ಯ ಸಮೀಕ್ಷೆ’ ಗ್ರಂಥದಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಮಹಾಕಾವ್ಯ ಸಂಬಂಧ ತತ್ತ್ವಗಳನ್ನು ತೌಲನಿಕವಾಗಿ ಅವರು ವಿವೇಚಿಸಿದ್ದರು. ಇಂತಹ ತೌಲನಿಕ ಅಧ್ಯಯನವನ್ನು ಸಾಹಿತ್ಯ ತತ್ವಗಳ, ತಾತ್ತ್ವಿಕ ಪರಿಕಲ್ಪನೆಗಳ ನೆಲೆಯಲ್ಲಿ ಬಳಸಿ ಬರೆದ ಲೇಖನಗಳ ಸಂಕಲನ, ‘ಕಾವ್ಯಾರ್ಥ ಚಿಂತನ’. ಜಿ.ಎಸ್.ಎಸ್.ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಂದುಕೊಟ್ಟಿತು” ಎಂದು ಹೇಳಿ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.