ಉಡುಪಿ : ರಾಷ್ಟ್ರೀಯ ಗ್ರಂಥಪಾಲಕರ ದಿನದ ಅಂಗವಾಗಿ ಭಾರತದ ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಇವರ ದಿನಾಚರಣೆಯ ಕಾರ್ಯಕ್ರಮವು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ದಿನಾಂಕ 12-08-2023ರಂದು ನಡೆಯಿತು. ಎಂ.ಜಿ.ಎಂ.ಕಾಲೇಜಿನ ಗ್ರಂಥಪಾಲಕರಾದ ಶ್ರೀ ಕಿಶೋರ್ ಕುಮಾರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ.ಎಸ್.ಆರ್.ರಂಗನಾಥನ್ ಅವರಿಗೆ ಸಲ್ಲುತ್ತದೆ. ಅವರು ಮೂಲತಃ ಗಣಿತಾಸ್ತ್ರದ ಪ್ರಾಧ್ಯಾಪಕರು. ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ. ಅವರು ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ. ಡಾ.ಎಸ್.ಆರ್.ರಂಗನಾಥನ್ ಅವರು ಆಗೋಸ್ಟ್ 12, 1892ರಲ್ಲಿ ಜನಿಸಿದರು. ಅವರು ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ ಕೊಡುಗೆ ಹಾಗೂ ಅವರ ಸೇವೆಗಾಗಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಾಗಿ ಆಚರಿಸಲಾಗುತ್ತದೆ” ಎಂದು ಹೇಳಿದರು.
ರಂಗನಾಥನ್ ಗ್ರಂಥಾಲಯಕ್ಕೆ ನೀಡಿದ ಕೊಡುಗೆಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿಯವರು ವಿವರಿಸಿದರು. ಗ್ರಂಥಪಾಲಕರಾದ ಶ್ರೀ ವೆಂಕಟೇಶ್ ನಾಯ್ಕ, ಶ್ರೀಮತಿ ರಕ್ಷತಾ, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.