ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು (ರಿ) ಇದರ ಮಹಿಳಾ ಘಟಕ ನಾರಿಚಿನ್ನಾರಿಯ 8ನೇ ಸರಣಿ ಕಾರ್ಯಕ್ರಮ ‘ಓಣಂ ಸಂಧ್ಯಾ’ವು ಕಾಸರಗೋಡಿನ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ದಿನಾಂಕ 26-08-2023 ಶನಿವಾರದಂದು ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿಚಿನ್ನಾರಿಯ ಗೌರವಧ್ಯಕ್ಷರು ಹಾಗೂ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀಮತಿ ತಾರಾ ಜಗದೀಶ್ ಇವರು ವಹಿಸಲಿದ್ದು, ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜ ಸೇವಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಇವರು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ನಾಟ್ಯ ಗುರುಗಳಾದ ವಿದುಷಿ ಶಶಿಕಲಾ ಟೀಚರ್ ಇವರಿಗೆ ಗೌರವಾರ್ಪಣೆ ಮಾಡಲಾಗುವುದು. ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇವರ ಐದು ಕೃತಿಗಳಾದ ಏಕತಾರಿ ಸಂಚಾರಿ (ಕವನ ಸಂಕಲನ), ಕೊಕ್ಕೊ ಕೋಕೋ (ಮಕ್ಕಳ ನಾಟಕ), ಶಿವರಾಮ ಕಾರಂತರ ಕನ್ನಡ ಪ್ರಜ್ಞೆ (ಸಂಪಾದಿತ), ಕನಕದಾಸೆರ್ನ ರಾಮಧಾನ್ಯ ಚರಿತೆ (ಅನುವಾದ) ಮತ್ತು ಮೊಗೇರಿ ಗೋಪಾಲಕೃಷ್ಣ ಅಡಿಗ (ವಾಚಿಕೆ) ಅನಾವರಣಗೊಳ್ಳಲಿವೆ.
ಈ ಐದು ಕೃತಿಗಳನ್ನು ಅನಾವರಣಗೊಳಿಸುವವರು ವಿಜಯಲಕ್ಷ್ಮೀ ಶ್ಯಾನ್ ಭೋಗ್, ಸರ್ವಮಂಗಳ ಜಯ್ ಪುಣಿಚಿತ್ತಾಯ, ದಿವ್ಯಾ ಗಟ್ಟಿ ಪರಕ್ಕಿಲ, ಸ್ನೇಹಲತಾ ದಿವಾಕರ್ ಮತ್ತು ಡಾ.ಮಹೇಶ್ವರಿಯವರು ಹಾಗೂ ಲಕ್ಷ್ಮೀ ಕೆ. ಇವರು ಕೃತಿ ವಿಮರ್ಶೆ ಮಾಡಲಿದ್ದಾರೆ. ಇವರೆಲ್ಲರೂ ಗಡಿನಾಡಿನ ಮಹತ್ವದ ಮಹಿಳಾ ಬರಹಗಾರರು. ಪ್ರಕೃತಿ ಸ್ತ್ರೀಗೇ ನೀಡಿರುವ ಬಸಿರು, ಬಾಣಂತನ, ಮಕ್ಕಳ ಮತ್ತು ಮೊಮ್ಮಕ್ಕಳ ಲಾಲನೆ ಪಾಲನೆಯ ಜತೆಜತೆಗೇ ಮನೆ – ಕೃಷಿ, ಮನೆಯೊಳಗಿನ ವೃತ್ತಿ ಹಾಗೂ ಮನೆಯ ಹೊರಗಿನ ವೃತ್ತಿ ಉದ್ಯೋಗ ಹೀಗೆ ಎಲ್ಲವನ್ನೂ ನನ್ನ ಮನೆ, ನನ್ನ ಸಂಗಾತಿ, ನನ್ನ ಮಕ್ಕಳು, ನನ್ನ ಕಛೇರಿ ಎಂಬ ಮಮತೆಯಿಂದಲೇ ಮಾಡುತ್ತಾರೆ. ಇದರ ನಡುವೆ ಬರಹ, ನೃತ್ಯ, ಸಂಗೀತ, ಚಿತ್ರಕಲೆ, ನಾಟಕ ಹೀಗೆ ತನ್ನ ಕಲಾತ್ಮಕ ವ್ಯಕ್ತಿತ್ವವನ್ನು ಪ್ರಕಟಿಸುವ ಸ್ತ್ರೀಯರ ಆತ್ಮಶಕ್ತಿ ಅಸಾಧಾರಣವಾದುದು. ಆದುದರಿಂದ ತಮ್ಮ ಕೆಲಸಗಳ ನಡುವೆಯೇ ಬಿಡುವು ಮಾಡಿಕೊಂಡ ಇಂತಹ ಅಗಣಿತ ಸ್ತ್ರೀಶಕ್ತಿಗಳು ಒಟ್ಟು ಗೂಡಿ ವಿಭಿನ್ನ-ವಿಶಿಷ್ಟ ಕಾರ್ಯಕ್ರಮ ಮಾಡುತ್ತಿರುವುದು ವಿಶೇಷ ಸಂಗತಿ.
ಇದೇ ಸಂದರ್ಭದಲ್ಲಿ ನಾರಿಚಿನ್ನಾರಿಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.