ಮಂಡ್ಯ : ಡಾ. ಪ್ರದೀಪ ಕುಮಾರ ಹೆಬ್ರಿ ಅವರು ಒಂದು ವರ್ಷಗಳ ಕಾಲ ‘ಕುಂದಾನಗರಿ’ ಕನ್ನಡ ದಿನಪತ್ರಿಕೆಯಲ್ಲಿ ‘ಪುಸ್ತಕ ಪ್ರೀತಿ’ ಅಂಕಣದಲ್ಲಿ ಬರೆದ ನಾಡಿನ ವಿವಿಧ ಲೇಖಕರ 306 ಕೃತಿಗಳ ಪರಿಚಯ ಲೇಖನಗಳ ಕೃತಿ ‘ಪುಸ್ತಕ ಪ್ರೀತಿ’ ಇದರ ಲೋಕಾರ್ಪಣಾ ಸಮಾರಂಭ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನದಂದು (ದಿನಾಂಕ 15-08-2023) ಮಂಡ್ಯದ ಡ್ಯಾಫೊಡಿಲ್ಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ನಾಗಾನಂದ ಹಾಗೂ ವಿ.ಎಲ್.ಎನ್. ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಜಾತ ಕೃಷ್ಣರವರು ಇನ್ನಿತರ ಶಿಕ್ಷಕರ ಒಡಗೂಡಿ ಕೃತಿ ಲೋಕಾರ್ಪಣೆ ಮಾಡಿ ಡಾ. ಹೆಬ್ರಿ ಅವರನ್ನು ಸನ್ಮಾನಿಸಿದರು.
ಕೃತಿ ಹಾಗೂ ಕೃತಿಕಾರರನ್ನು ಪರಿಚಯಿಸಿದ ಕವಿಯತ್ರಿ ಹಾಗೂ ಕನ್ನಡ ಭಾಷಾ ಶಿಕ್ಷಕಿ ಜಿ. ಅಶ್ವಿನಿ ಇವರು “ಈ ಕೃತಿಯು 306 ಬೇರೆ ಬೇರೆ ಲೇಖಕರ ಕೃತಿಗಳ ಪರಿಚಯಾತ್ಮಕ ಕೃತಿ. ಬೆಳಗಾವಿಯ ಕುಂದಾನಗರಿ ಕನ್ನಡ ದಿನಪತ್ರಿಕೆಯಲ್ಲಿ ನಿರಂತರ ಒಂದು ವರ್ಷಗಳ ಕಾಲ ಪ್ರಕಟವಾಗಿ ಹೆಬ್ರಿಯವರ ಸಾಹಿತ್ಯ ಪ್ರೀತಿಯನ್ನು ಮನಗಾಣಿಸಿದೆ. ದೇಶ ಕಟ್ಟುವ ಕೆಲಸದಲ್ಲಿ ತೊಡಗಿದ್ದ ಸಹಸ್ರಾರು ಪುಣ್ಯಪುರುಷರ ಶ್ರಮದ ಫಲದಿಂದ ನಾವಿಂದು ನಮ್ಮ ದೇಶದ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದೇವೆ. ಅಂತೆಯೇ ಸಾಹಿತ್ಯ ಕಟ್ಟುವ ಕೆಲಸವನ್ನು ನಮ್ಮ ಹೆಬ್ರಿ ಸರ್ ನಿರಂತರವಾಗಿ ನಿರಾಯಾಸದಿಂದ ಮಾಡುತ್ತ ಬಂದಿದ್ದಾರೆ. ಆ ಮೂಲಕ ಅರಿವಿನ ಸವಿಯನ್ನು ಇಂದೂ ಮುಂದೂ ಹಂಚುವ ಕಾಯಕದಲ್ಲಿದ್ದಾರೆ. ವೈದ್ಯರಾಗಿ ವೃತ್ತಿಜೀವನ ಇದ್ದರೂ ಪ್ರವೃತ್ತಿಯಾಗಿ ನಾಟಕ, ತಬಲ, ಯಕ್ಷಗಾನ, ವ್ಯಾಖ್ಯಾನ, ಪ್ರವಚನ, ಪ್ರವಾಸ, ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿದ್ದಾರೆ. ಹತ್ತೊಂಭತ್ತು ಮಹಾಕಾವ್ಯಗಳು ಸೇರಿದಂತೆ ಐನೂರಕ್ಕೂ ಹೆಚ್ಚು ವೈವಿಧ್ಯಮಯ ಕೃತಿಗಳನ್ನು ‘ಆಡು ಮುಟ್ಟದ ಸೊಪ್ಪಿಲ್ಲ’ ಮಾತಿಗನುಗುಣದಲ್ಲಿ ರಚಿಸಿದ್ದಾರೆ. ಅವರ ಬರಹದ ಪ್ರೀತಿ ಅನನ್ಯವಾದುದು. ಒಂದರ್ಥದಲ್ಲಿ ಅವರು ಬರಹ ತಪಸ್ವಿ. ಮಹಾಕಾವ್ಯಗಳ ಕವಿ. ಕಿರಿಯರ ಪಾಲಿನ ಹಿರಿಯ, ಹಿರಿಯರ ಪಾಲಿನ ಕಿರಿಯ, ಸರಳ, ಸಜ್ಜನ, ಭಾವನಾ ಜೀವಿ, ಪ್ರಬುದ್ಧ ಜೀವಿ, ಸದಾ ನಿರಾಳತೆಯ ನಗುಮುಖಿ. ಇಂದು ಅವರ ಬರಹದ ಪ್ರೀತಿಯಿಂದ ರಚಿತವಾದ ಕೃತಿ ಪರಿಚಯದ ‘ಪುಸ್ತಕ ಪ್ರೀತಿ’ ಎಂಬ ಕೃತಿ ಸಹೃದಯರ ಬುದ್ಧಿ ಭಾವಗಳಿಗೆ ಸಿಹಿ ಸಿಂಚನ ಮಾಡಲು ಸಿದ್ಧವಾಗಿದೆ. ಈ ಕೃತಿಯನ್ನು ಓದುವ ಮೂಲಕ ಅಲ್ಪಸಮಯದಲ್ಲಿ ಮುನ್ನೂರಕ್ಕೂ ಮೀರಿ ಪುಸ್ತಕಗಳನ್ನು ಪರಿಚಯಿಸಿಕೊಳ್ಳುವ ಅವಕಾಶ ನಮಗಿದೆ. ಓದುವಿಕೆಯನ್ನು ಬದುಕಿನ ಪಾತ್ರವಾಗಿಸಿಕೊಳ್ಳುವಲ್ಲಿ ಪುಸ್ತಕ ಪ್ರೀತಿ ಖಂಡಿತಕ್ಕೂ ನೆರವಾಗಲಿದೆ. ಸಾಹಿತ್ಯ ಹಾಗೂ ಸಾಹಿತಿಗಳನ್ನು ಸಮಾನವಾಗಿ ಪ್ರೀತಿಸುವ ಹೆಬ್ರಿ ಸರ್ ಅವರು ಇಂದಿನ ಕಿರಿಯರಿಗೆ ಆದರ್ಶ ವ್ಯಕ್ತಿ. ಅವರು ನಮ್ಮ ನಡುವಿನ ‘ನಿತ್ಯ ಬರಹಗಾರ’ ಎನ್ನುತ್ತ ಹೆಬ್ರಿಯವರ ಮಾರ್ಗದರ್ಶನದಲ್ಲಿ ಇಂದು ಸಾಹಿತ್ಯವನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡಿರುವ ನೂರಾರು ಮಂದಿಯನ್ನು ನಾವು ಕಾಣಬಹುದು. ಹೆಬ್ರಿ ಸರ್ ಅವರು ಸದಾ ನಮ್ಮೊಡನೆ, ನಮ್ಮವರಾಗೇ ಇರಲಿ. ಮಂಡ್ಯ ನೆಲದಲ್ಲಿ ಹೆಬ್ರಿ ಸರ್ ಅವರ ಹೆಸರು ಅಜರಾಮರವಾಗಲಿ” ಎಂದರು.